ADVERTISEMENT

ಲಾಡ್ಲಾಪುರ: ವಿದ್ಯಾರ್ಥಿಗಳು, ಗ್ರಾಮಸ್ಥರಿಗೆ ಹದಗೆಟ್ಟ ರಸ್ತೆಯೇ ಕಂಟಕ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 5:01 IST
Last Updated 14 ಜುಲೈ 2025, 5:01 IST
<div class="paragraphs"><p>ವಾಡಿ ಸಮೀಪದ ಲಾಡ್ಲಾಪುರ ಅಲಹಳ್ಳಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾರದ ಸಂತೆಗೂ ಸಮಸ್ಯೆ ಎದುರಾಗಿರುವುದು.</p></div>

ವಾಡಿ ಸಮೀಪದ ಲಾಡ್ಲಾಪುರ ಅಲಹಳ್ಳಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾರದ ಸಂತೆಗೂ ಸಮಸ್ಯೆ ಎದುರಾಗಿರುವುದು.

   

ವಾಡಿ: ಲಾಡ್ಲಾಪುರ ಗ್ರಾಮಕ್ಕೆ ಹೊಂದಿಕೊಂಡಿರುವ ಅಲಹಳ್ಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ವಿವಿಧ ಗ್ರಾಮಗಳಿಗೆ ತೆರಳುವ ವಾಹನ ಸವಾರರು ನಿತ್ಯ ಸಂಕಷ್ಟ ಎದುರಿಸುತ್ತಿದ್ದಾರೆ.

ಅಲಹಳ್ಳಿ ರಸ್ತೆಯ 3 ಕಿಮೀ ಸಂಪೂರ್ಣ ಹಾಳಾಗಿದ್ದು ಗ್ರಾಮಕ್ಕೆ ಹೊಂದಿಕೊಂಡು 1ಕಿಮೀ ರಸ್ತೆ ನಿತ್ಯ ನರಕ ಸೃಷ್ಟಿಸುತ್ತಿದೆ. ರಸ್ತೆಯ ಎರಡೂ ಕಡೆ ವಾಸಿಸುವರಲ್ಲಿ ಅಸ್ತಮಾ ಭೀತಿ ಎದುರಾಗಿದೆ.

ADVERTISEMENT

ಲಾಡ್ಲಾಪುರ ವಾರದ ಸಂತೆಯಲ್ಲಿ ಹಣ್ಣು, ತರಕಾರಿಗಳ ಜೊತೆಗೆ ಮಳೆ ಬಂದಾಗ ಕೆಸರು, ಮಳೆ ಬಾರದೆ ಇದ್ದಾಗ ಧೂಳು ತುಂಬಿರುತ್ತದೆ. ಸಂತೆ ನಡೆಯುವ ಸ್ಥಳದಲ್ಲಿ ಕನಿಷ್ಠ ಕಾಂಕ್ರೀಟ್ ನೆಲಹಾಸನ್ನು ಮಾಡಿಲ್ಲ. ಇದರಿಂದಾಗಿ ಕೆಸರುಮಯವಾದ ಸ್ಥಳದಲ್ಲೇ ವಾರದ ಸಂತೆಯಲ್ಲಿ ವ್ಯಾಪಾರ-ವಹಿವಾಟು ನಡೆಸುವ ಅನಿವಾರ್ಯತೆ ಇದೆ ಎನ್ನುತ್ತಾರೆ ವರ್ತಕರು.

ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಇಲ್ಲಿ ನಡೆದಾಡಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಳಕಾಲು ಉದ್ದದ ತಗ್ಗುಗಳು ರಸ್ತೆ ಮೇಲೆ ಬಿದ್ದಿದ್ದು ಒಂದು ಕ್ಷಣ ಮೈಮರೆತರೂ ಕಾಲು ಜಾರಿ ಬೀಳುವುದು ಸಾಮಾನ್ಯವಾಗಿದೆ. ರಸ್ತೆ ಸುಧಾರಣೆಯಾಗದೇ ಸ್ಥಳೀಯರು ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ರಾಷ್ಟ್ರೀಯ ಹೆದ್ದಾರಿ ಹೆಚ್ಚುವರಿ ಅನುದಾನದಲ್ಲಿ 2021ರಲ್ಲಿ ಈ ರಸ್ತೆ ನಿರ್ಮಿಸಿದ್ದು ಒಂದೇ ವರ್ಷದಲ್ಲಿ ಕಿತ್ತು ಹೋಗಿದೆ. ಕಳೆದ 4 ವರ್ಷದಿಂದ ಹದಗೆಟ್ಟ ರಸ್ತೆಯೇ ಗತಿ ಎನ್ನುವಂತಾಗಿದೆ.

ಗ್ರಾಮದಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಶಾಲೆ ಇದ್ದು, ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಇದೇ ರಸ್ತೆ ಅವಲಂಬಿಸಿದ್ದಾರೆ. ಮಳೆ ಬಂದಾಗ ಕೆಸರುಗದ್ದೆಯ ರಸ್ತೆಯಲ್ಲಿ ಪರದಾಡಿದರೆ ಉಳಿದ ಸಮಯದಲ್ಲಿ ದೂಳು ಸೇವಿಸುತ್ತಾ ಶಾಲೆಗೆ ತೆರಳಬೇಕಾಗಿದೆ ಎಂಬುದು ವಿದ್ಯಾರ್ಥಿಗಳ ದೂರು.

ಎಲ್ಲಿ ನೋಡಿದರೂ, ಕೆಸರುಮಯವಾಗಿದ್ದು, ಜಾರಿ ಬೀಳುತ್ತೇವೆ ಎಂಬ ಭಯ ಕಾಡುತ್ತದೆ. ಮಕ್ಕಳು ಮತ್ತು ಮಹಿಳೆಯರು ಸಂಚರಿಸಲು ಸಾಧ್ಯವೇ ಆಗದಂತ ಸ್ಥಿತಿ ಉಂಟಾಗಿದ್ದು ಕೂಡಲೇ ರಸ್ತೆ ನಿರ್ಮಿಸಬೇಕು ಎನ್ನುವುದು ಸ್ಥಳೀಯರ ಅಗ್ರಹವಾಗಿದೆ.

ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕಳೆದ 4 ವರ್ಷಗಳಿಂದ ನಿತ್ಯ ಹಿಂಸೆ ಅನುಭವಿಸುತ್ತಿದ್ದೇವೆ. ಕೂಡಲೇ ರಸ್ತೆ ನಿರ್ಮಿಸಬೇಕು.
ಶ್ಯಾಮಸುಂದರ ರೆಡಸನ್ ಸ್ಥಳೀಯರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.