ADVERTISEMENT

ಕಲಬುರಗಿ|ಲಕ್ಕಮ್ಮದೇವಿಗೆ ಬೆನ್ನ ಹಿಂದೆ ಪೂಜೆ; ಹೊಸ ಚಪ್ಪಲಿ ಅರ್ಪಿಸಿ ದೇವಿಗೆ ಹರಕೆ

ಆಳಂದ ತಾಲ್ಲೂಕು ಗೋಳಾ (ಬಿ) ಗ್ರಾಮದ ದೇಗುಲ

ಬಸೀರ ಅಹ್ಮದ್ ನಗಾರಿ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
ಆಳಂದ ತಾಲ್ಲೂಕಿನ ಗೋಳಾ (ಬಿ) ಗ್ರಾಮದ ಲಕ್ಕಮ್ಮ ದೇವಿ ಜಾತ್ರೆಯಲ್ಲಿ ಸೇರಿದ್ದ ಜನಸ್ತೋಮ
ಆಳಂದ ತಾಲ್ಲೂಕಿನ ಗೋಳಾ (ಬಿ) ಗ್ರಾಮದ ಲಕ್ಕಮ್ಮ ದೇವಿ ಜಾತ್ರೆಯಲ್ಲಿ ಸೇರಿದ್ದ ಜನಸ್ತೋಮ   

ಕಲಬುರಗಿ: ಒಂದೆಡೆ ಸಜ್ಜಕದ ಹೋಳಿಗೆ, ಮತ್ತೊಂದೆಡೆ ಬಾಡೂಟದ ಘಮಲು. ಜೊತೆಗೆ ತಮಟೆ ನಾದ. ಇಷ್ಟಾರ್ಥ ಈಡೇರಿಕೆಕೆ ಹರಕೆ‌ ಹೊತ್ತು ಚಪ್ಪಲಿ ಕಟ್ಟುವ ಭಕ್ತರು...

ಇದು ಜಿಲ್ಲೆಯ ಆಳಂದ ತಾಲ್ಲೂಕಿನ ಗೋಳಾ (ಬಿ) ಗ್ರಾಮದ ಹೊರವಲಯದ ಲಕ್ಕಮ್ಮ ದೇವಿ ಜಾತ್ರೆಯಲ್ಲಿ ಭಾನುವಾರ ಕಂಡ ನೋಟ.

ಗ್ರಾಮದ ಹೊರವಲಯದ ಗುಡ್ಡಪ್ರದೇಶದಲ್ಲಿ ಈ ದೇವಿ ಜಾತ್ರೆಯು ಪ್ರತಿವರ್ಷ ದೀಪಾವಳಿ ‌ಹಬ್ಬದ ಪಂಚಮಿಯಂದು ಮೇಳೈಸುತ್ತದೆ. ಸುತ್ತಲಿನ ತಾಲ್ಲೂಕುಗಳು, ನೆರೆಯ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ವಿವಿಧೆಡೆಯ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ADVERTISEMENT

ಎಲ್ಲ ದೇವರಿಗೆ ಮುಖದ ಎದುರು ಪೂಜೆ ಸಲ್ಲುತ್ತದೆ. ಆದರೆ, ಲಕ್ಕಮ್ಮ ದೇವಿ ಪಶ್ಚಿಮದತ್ತ ಬಾಗಿದ್ದು ದೇವಿಗೆ ಬೆನ್ನ ಹಿಂದೆ ಪೂಜಿಸಿ, ನೈವೇದ್ಯ ಅರ್ಪಿಸುವುದು ಇಲ್ಲಿನ ವೈಶಿಷ್ಟ್ಯ. 

ಭಕ್ತರು ಕಾಯಿ–ಕರ್ಪೂರದ ಜೊತೆಗೆ ದೇವಿಗೆ ಹೊಸ ಚಪ್ಪಲಿ ಸಮರ್ಪಿಸುತ್ತಾರೆ. ಹೀಗೆ ಹೊಸ ಚಪ್ಪಲಿ ಕಟ್ಟಿದರೆ ಇಷ್ಟಾರ್ಥ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ. ಹರಕೆ ಹೊತ್ತವರು ದೇವಾಲಯದ ಬಲತುದಿಗೆ ನೇತುಹಾಕಿದ್ದ ಹಗ್ಗಕ್ಕೆ ‘ಹೊಸ ಚಪ್ಪಲಿ’ ಕಟ್ಟುವ ನೋಟ ಭಾನುವಾರವೂ ಕಂಡು ಬಂತು. ದೇವಿ ದರ್ಶನಕ್ಕೆ ಸಾಲುಗಟ್ಟಿದ್ದ ಭಕ್ತರು ಆ ‘ಚಪ್ಪಲಿ’ಗಳನ್ನು ಶಿರಕ್ಕೆ ಒತ್ತಿಕೊಂಡು ‘ಆಶೀರ್ವಾದ’ ಪಡೆಯುತ್ತಿದ್ದರು. 

ಕಾಳಿ ಮಾತೆಯ ಪ್ರತಿರೂಪವಾದ ಈ ಲಕ್ಕಮ್ಮ ದೇವಿಗೆ ಹೆಚ್ಚಾಗಿ ಪೋತೆರಾಜರು ನಡೆದು ಕೊಳ್ಳುತ್ತಾರೆ. ಜಾತ್ರೆಯಂದು ಮುಖಕ್ಕೆ ಅಂದವಾಗಿ ಬಣ್ಣ ಬಳಿದುಕೊಂಡು, ಇಡೀ ದಿನ ತಮಟೆ ನಾದ ಹೊಮ್ಮಿಸುತ್ತ, ಹೆಜ್ಜೆ ಹಾಕಿ ಭಕ್ತಿ ಅರ್ಪಿಸಿದರು.

ಸಿಹಿ, ಮಾಂಸದ ನೈವೇದ್ಯ: ದೇವಿಗೆ ಭಕ್ತರು ಆಚರಣೆಯಂತೆ ನೈವೇದ್ಯ ಅರ್ಪಿಸುತ್ತಾರೆ. ಕೆಲ ಭಕ್ತರು ದೇವಾಲಯದ ಸುತ್ತಲೂ ಒಲೆ ಹೂಡಿ ಸಜ್ಜಕದ ಹೋಳಿಗೆ ತಯಾರಿಸಿ, ಹಿಟ್ಟಿನ ದೀಪ ಬೆಳಗಿ ‘ಸಿಹಿ’ ಭಕ್ಷ್ಯದ ನೈವೇದ್ಯ ಅರ್ಪಿಸುತ್ತಾರೆ.

ಕೆಲವರು ಕೋಳಿ–ಹುಂಜಗಳನ್ನು ದೇವಾಲಯಕ್ಕೆ ಐದು ಸುತ್ತು ಹಾಕಿ ಬಳಿಕ ಅದರ ಖಾದ್ಯವನ್ನು ದೇವಿಗೆ ನೈವೇದ್ರ ಹಿಡಿಯಲಾಗುತ್ತದೆ. ಎರಡೂ ಬಗೆಯ ನೈವೇದ್ಯಗಳು ದೇಗುಲದ ಪರಿಸರದಲ್ಲೇ ನಡೆಯುವುದು ವಿಶೇಷ.

ಲಕ್ಕಮ್ಮ ದೇವಿ ಜಾತ್ರೆಯಲ್ಲಿ ಹರಕೆ ಹೊತ್ತು ಚಪ್ಪಲಿ ಕಟ್ಟಿದ ಯುವಕ

ಕಟ್ಟಿಗೆ– ಕಂಚಿನ ಕಳಸದ ಮೆರವಣಿಗೆ

‘ದೀಪಾವಳಿ ಪಾಡ್ಯದಿಂದ 4ನೇ ದಿನ ರಾತ್ರಿ ಗೋಳಾ(ಬಿ) ಗ್ರಾಮದಿಂದ ಐದು ಅಡಿಗಳ ಕಟ್ಟಿಗೆ ಕಳಸವನ್ನು ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಲಾಗುತ್ತದೆ. ಅದು ಜಾತ್ರೆಯ ಆರಂಭ. ನಸುಕಿನ 3 ಗಂಟೆ ಗ್ರಾಮಸ್ಥರು ದೇವಿಗೆ ಹೋಳಿಗೆ ನೈವೇದ್ಯ ಹಿಡಿಯುತ್ತಾರೆ’ ಎನ್ನುತ್ತಾರೆ ಲಕ್ಕಮ್ಮ ದೇವಿ ದೇವಾಲಯದ ಟ್ರಸ್ಟ್‌ ಅಧ್ಯಕ್ಷ ಬಸವರಾಜ ಶಂಕರರಾವ ಪಾಟೀಲ. ‘ದೀಪಾವಳಿ ಪಂಚಮಿಯಂದು ಗ್ರಾಮದ ಮನೆ–ಮನೆಯಿಂದ ಕಂಚಿನ ಕಳಸದ ಮೆರವಣಿಗೆ ನಡೆಯುತ್ತದೆ. ಮೆರವಣಿಗೆ ಲಕ್ಕಮ್ಮ ದೇವಾಲಯ ತಲುಪಿದಂತೆ ಜಾತ್ರೆ ಸಂಪನ್ನಗೊಳ್ಳುತ್ತದೆ’ ಎಂದು ವಿವರಿಸಿದರು.

ತಂಗಿಯ ಜೀವನದ ಶ್ರೇಯೋಭಿವೃದ್ಧಿಯ ಹರಕೆ ಹೊತ್ತು ತಾಯಿ ಲಕ್ಕಮ್ಮ ದೇವಿಗೆ ಹೊಸ ಚಪ್ಪಲಿ ತಂದು ಅರ್ಪಿಸಿದೆ. ಇಷ್ಟಾರ್ಥ ಈಡೇರುವ ವಿಶ್ವಾಸವಿದೆ.
-ರಾಹುಲ್‌ ಗುತ್ತೇದಾರ, ನರೋಣಾ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.