ADVERTISEMENT

ಆಳಂದ: ಕೆರೆ ಒಡೆದು ವರ್ಷವಾಯ್ತು; ಆತಂಕ ಹೆಚ್ಚಾಯ್ತು

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:26 IST
Last Updated 26 ಜುಲೈ 2021, 3:26 IST
ಆಳಂದ ತಾಲ್ಲೂಕಿನ ಮಟಕಿ ಕೆರೆ ಕಳೆದ ವರ್ಷ ಅತಿವೃಷ್ಟಿಗೆ ಒಡೆದು ದುರಸ್ತಿ ಕಾಣದ ಪರಿಣಾಮ ಈ ವರ್ಷದ ಮಳೆ ನೀರು ಪೋಲಾಗುತ್ತಿರುವುದು
ಆಳಂದ ತಾಲ್ಲೂಕಿನ ಮಟಕಿ ಕೆರೆ ಕಳೆದ ವರ್ಷ ಅತಿವೃಷ್ಟಿಗೆ ಒಡೆದು ದುರಸ್ತಿ ಕಾಣದ ಪರಿಣಾಮ ಈ ವರ್ಷದ ಮಳೆ ನೀರು ಪೋಲಾಗುತ್ತಿರುವುದು   

ಆಳಂದ: ತಾಲ್ಲೂಕಿನ ಮಟಕಿ ಗ್ರಾಮದ ಕೆರೆ ಕಳೆದ ವರ್ಷ ಅತಿವೃಷ್ಟಿಗೆ ಸಂಪೂರ್ಣ ಒಡೆದು ಅಪಾರ ಪ್ರಮಾಣದ ಹಾನಿಯಾಗಿತ್ತು. ಕೆರೆ ಒಡೆದು ವರ್ಷವಾದರೂ ದುರಸ್ತಿಯ ಕಾರ್ಯಗಳು ಆರಂಭಗೊಂಡಿಲ್ಲ. ಹೀಗಾಗಿ ಪ್ರಸಕ್ತ ಮುಂಗಾರು ಮಳೆಯಲ್ಲಿ ಸಂಗ್ರಹವಾಗಬೇಕಿದ್ದ ನೀರು ಪೋಲಾಗಿ ಹಳ್ಳಕ್ಕೆ ಹರಿದು ಹೋಗುತ್ತಿದೆ.

ನೀರು ಗ್ರಾಮದ ಕೆಲ ಮನೆಗಳಿಗೆ ನುಗ್ಗುತ್ತಿದೆ. ಕಳೆದ ವರ್ಷ ಕೆರೆ ನೀರು ಗ್ರಾಮದಲ್ಲಿ ನುಗ್ಗಿ ಹಲವು ಮನೆಗಳು ಹಾಗೂ ರೈತರ ಹೊಲಗದ್ದೆಗಳು ಹಾನಿಯಾಗಿದ್ದವು. ಇದರ ಪರಿಹಾರ ಇನ್ನೂ ಎಲ್ಲರಿಗೂ ದೊರೆತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಕೆರೆ ಹಿನ್ನೆಲೆ: 1972 ಬರಗಾಲ ಕಾಮಗಾರಿಯಲ್ಲಿ ಆರಂಭವಾದ ಕೆರೆ ನಿರ್ಮಾಣ ಕಾರ್ಯ 1980ರಲ್ಲಿ ₹7 ಲಕ್ಷ ವೆಚ್ಚದಲ್ಲಿ ಪೂರ್ಣಗೊಂಡಿತು. 1989ರಲ್ಲಿ ಅತಿವೃಷ್ಟಿಯಿಂದ ಕೆರೆ ಸಂಪೂರ್ಣ ಒಡೆದು ಅಪಾರ ಪ್ರಮಾಣದ ಹಾನಿ ಸಂಭವಿಸಿತು. ನಿರಂತರ ಹೋರಾಟ, ಬೇಡಿಕೆಯ ಫಲವಾಗಿ 1998ರಲ್ಲಿ ₹30 ಲಕ್ಷ ವೆಚ್ಚದಲ್ಲಿ ಕೆರೆ ಪುನರ್ ನಿರ್ಮಾಣ ಕೈಗೊಳ್ಳಲಾಯಿತು.

ADVERTISEMENT

ಅಂದಾಜು 120 ಎಕರೆ ಜಮೀನಿನ ವ್ಯಾಪ್ತಿ ಹೊಂದಿರುವ ಮಟಕಿ ಕೆರೆಯಲ್ಲಿ 6 ಮೀಟರ್ ನೀರಿನ ಸಂಗ್ರಹ ಸಾಮರ್ಥ್ಯವಿದೆ ಎಂದು ಮಟಕಿ ಕೆರೆಯ ನಿವೃತ್ತ ಮೇಲ್ವಿಚಾರಕ ರಾಜಕುಮಾರ ಹುಲಸೂರೆ ತಿಳಿಸಿದರು.

ಅಪಾಯದ ಮುನ್ಸೂಚನೆ ನೀಡಿದರೂ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳದ ಕಾರಣ ಕೆರೆ ಒಡೆದು ನೀರಿನ ಸಮಸ್ಯೆ ಎದುರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಪಂ ಸದಸ್ಯ ಲಿಂಗರಾಜ ಆಕ್ರೋಶ ವ್ಯಕ್ತಪಡಿಸಿದರು. ನರೇಗಾಡಿ ಇಲ್ಲವೇ ನೀರಾವರಿ ಇಲಾಖೆಯಿಂದ ಕೆರೆ ಪುನರ್ ನಿರ್ಮಾಣಕ್ಕೆ ರೈತ ಮಂಜುನಾಥ ಬಿರಾದಾರಒತ್ತಾಯಿಸಿದ್ದಾರೆ.

ಶಾಸಕರು, ತಹಶೀಲ್ದಾರ್ ಸೇರಿದಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರೂ ನಿರ್ಮಾಣ ಕಾಮಗಾರಿ ಆರಂಭಿಸಲಿಲ್ಲ. ಕೆರೆಯ ಸ್ಥಿತಿ ಸರಿಯಾಗಿದ್ದರೆ ಎರಡು ವಾರದಿಂದ ಸುರಿಯುತ್ತಿರುವ ಮಳೆಗೆ ಭರ್ತಿಯಾಗುತ್ತಿತ್ತು.

200 ಹೆಕ್ಟೇರ್‌ಗೆ ನೀರು ಒದಗಿಸುತ್ತಿದ್ದ ಕೆರೆ
ಮಟಕಿ ಕೆರೆ ಅಫಜಲಪುರ ಸಣ್ಣ ನೀರಾವರಿ ಇಲಾಖೆ ಉಪ ವಿಭಾಗಕ್ಕೆ ಸೇರಿದ್ದು ತಡೋಳಾ, ಖಜೂರಿ, ಮಟಕಿ, ಖಂಡಾಳ ಹಾಗೂ ನೆರೆಯ ಮಹಾರಾಷ್ಟ್ರದ ಕೆಸರ ಜವಳಗಾ ಗ್ರಾಮ ವ್ಯಾಪ್ತಿ ಮಳೆ ನೀರು ಹರಿದು ಈ ಕೆರೆಗೆ ಬರುತ್ತಿತ್ತು. 200 ಹೇಕ್ಟರ್ ಪ್ರದೇಶ ನೀರಾವರಿಗೆ ಅನುಕೂಲವಾಗುತ್ತಿತ್ತು. ಗ್ರಾಮದ ಕುಡಿಯುವ ನೀರಿನ ಏಕೈಕ ಮೂಲ ಈ ಕೆರೆ. ಅಲ್ಲದೆ ಮಟಕಿ, ಹೆಬಳಿ, ಜೀರಹಳ್ಳಿ, ತೀರ್ಥ ಗ್ರಾಮದ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಳಕ್ಕೂ ಇದು ಆಧಾರವಾಗಿತ್ತು.

**

ಕೆರೆ ಒಡೆದಿದ್ದರಿಂದ ಆದ ಹಾನಿಗೆ ಸರ್ಕಾರ ಸಮರ್ಪಕವಾಗಿ ಪರಿಹಾರ ವಿತರಣೆ ಮಾಡಿಲ್ಲ. ಈಗಲೂ ಕೆರೆ ಇಲ್ಲದ ಕಾರಣ ಬೆಳೆ ಹಾನಿಯಾಗಿವೆ.
-ದಿಗಂಬರ ಚಿತಲೆ, ಕೃಷಿಕ

**

ಕೆರೆ ಒಡೆದ್ದರಿಂದ ಕಳೆದ ಬೇಸಿಗೆಯಲ್ಲಿ ನೀರಿಗೆ ತೊಂದರೆಯಾಗಿತ್ತು. ರೈತರ ಹೊಲದಿಂದ ಖರೀದಿಸಿ ಗ್ರಾಮಕ್ಕೆ ನೀರು ಒದಗಿಸಲಾಯಿತು.
-ಕೇದಾರನಾಥ ಬಿರಾದಾರ, ಸ್ಥಳೀಯರು

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.