ADVERTISEMENT

ಭೂಮಿ ಹಸ್ತಾಂತರಕ್ಕೆ ಅನುಮೋದನೆ

ವಿಶ್ವ ವಿದ್ಯಾಲಯ ತಲುಪಿದ ಉನ್ನತ ಶಿಕ್ಷಣ ಇಲಾಖೆ ಆದೇಶ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 16:51 IST
Last Updated 7 ಏಪ್ರಿಲ್ 2021, 16:51 IST
ದಯಾನಂದ ಅಗಸರ
ದಯಾನಂದ ಅಗಸರ   

ಕಲಬುರ್ಗಿ: ಅಂತರರಾಷ್ಟ್ರೀಯ ಕ್ರೀಡಾ ಸಂಕೀರ್ಣ ನಿರ್ಮಿಸುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಪ್ರಯತ್ನಕ್ಕೆ ಕೈಜೋಡಿಸಿರುವ ಉನ್ನತ ಶಿಕ್ಷಣ ಇಲಾಖೆ 50 ಎಕರೆ ಭೂಮಿ ಹಸ್ತಾಂತರಿಸುವಂತೆ ವಿ.ವಿ. ಆಡಳಿತ ಮಂಡಳಿಗೆ ಪತ್ರ ಬರೆದಿದೆ.

ಈ ಸಂಬಂಧದ ಪತ್ರ ಎರಡು ದಿನಗಳ ಹಿಂದೆ ತಮಗೆ ತಲುಪಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಕ್ರೀಡಾಪಟುಗಳಲ್ಲಿ ಸಾಮರ್ಥ್ಯವಿದ್ದರೂ ಮೂಲಸೌಕರ್ಯಗಳು ಹಾಗೂ ಕೋಚ್‌ಗಳ ಕೊರತೆಯಿಂದ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ನಗರದ ಹೊರವಲಯದಲ್ಲಿ ಅಂತರರಾಷ್ಟ್ರೀಯ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಿಸಲು ಉದ್ದೇಶಿಸಿದ್ದರು. ಮೊದಲು ವಿ.ವಿ.ಯಿಂದ ಭೂಮಿ ಪಡೆಯುವ ಪ್ರಸ್ತಾವ ಇರಲಿಲ್ಲ. ಬದಲಾಗಿ ನಗರದ ಹೊರವಲಯದ ಹಡಗಿಲ್ ಹಾರುತಿ, ಉಪಳಾಂವ, ಕೋಟನೂರ (ಡಿ) ಗ್ರಾಮಗಳ ಬಳಿ ಕಂದಾಯ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸುವಂತೆ ಪಾಟೀಲ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದ್ದರು.

ADVERTISEMENT

ಆದರೆ, ಈ ಸ್ಥಳಗಳಲ್ಲಿ 40ರಿಂದ 50 ಎಕರೆ ಭೂಮಿ ಲಭ್ಯವಿಲ್ಲದ್ದರಿಂದ ಹಾಗೂ ಹೆಚ್ಚಿನ ಫಲಾನುಭವಿ ಕ್ರೀಡಾಪಟುಗಳು ಗುಲಬರ್ಗಾ ವಿ.ವಿ.ಯವರೇ ಆಗಿದ್ದರಿಂದ ಗುವಿವಿಯಲ್ಲೇ ಕ್ರೀಡಾಂಗಣ ನಿರ್ಮಿಸುವ ಉದ್ದೇಶದಿಂದ ಭೂಮಿ ನೀಡುವಂತೆ ದತ್ತಾತ್ರೇಯ ಪಾಟೀಲ ರೇವೂರ ಪ್ರಸ್ತಾವ ಸಲ್ಲಿಸಿದ್ದರು. ವಿಶ್ವವಿದ್ಯಾಲಯವು ಈ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಕಳಿಸಿಕೊಟ್ಟಿತ್ತು. ಇದೀಗ ಭೂಮಿ ಮಂಜೂರು ಮಾಡುವಂತೆ ಆದೇಶ ಹೊರಡಿಸಿದೆ.

ಈ ಸಂಕೀರ್ಣದಲ್ಲಿ ಕ್ರಿಕೆಟ್‌ ಸ್ಟೇಡಿಯಂ, ಫುಟ್‌ಬಾಲ್‌ ಸ್ಟೇಡಿಯಂ, ಒಳಾಂಗಣ ಕ್ರೀಡೆಗಳಿಗೆ ಅನುಕೂಲವಾಗುವ ಮೂಲಸೌಕರ್ಯಗಳನ್ನು ಕಲ್ಪಿಸಲು ಯೋಜನೆ ಸಿದ್ಧವಾಗುತ್ತಿದೆ. ಕ್ರೀಡಾ ಸಂಕೀರ್ಣ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಕೆಕೆಆರ್‌ಡಿಬಿ ಭರಿಸಲಿದೆ. ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣವಾದ ಬಳಿಕ ರಣಜಿ ಹಾಗೂ ಕರ್ನಾಟಕ ಪ್ರಿಮಿಯರ್‌ ಲೀಗ್‌ನಂತಹ ಟೂರ್ನಿಗಳನ್ನು ಆಯೋಜಿಸುವ ಉದ್ದೇಶವೂ ಇದೆ ಎಂದು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.