ಕಲಬುರ್ಗಿ: ಬೆಣ್ಣೆತೊರಾ ನದಿಯಿಂದ ಕಲಬುರ್ಗಿ ದಕ್ಷಿಣ ಕ್ಷೇತ್ರದ ಆರು ಹಾಗೂ ಗ್ರಾಮೀಣ ಕ್ಷೇತ್ರದ ಎರಡು ಕೆರೆಗಳನ್ನು ತುಂಬಿಸುವ ₹197 ಕೋಟಿ ಮೊತ್ತದ ಕಾಮಗಾರಿಗೆ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಾಲ್ಲೂಕಿನ ಹತಗುಂದಾ ಗ್ರಾಮದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತರ ಬದುಕು ಹಸನಾಗಬೇಕು. ಉದ್ಯೋಗ ಹುಡುಕಿಕೊಂಡು ರೈತರ ಮಕ್ಕಳು ನಗರಗಳಿಗೆ ಬರುವ ಬದಲು ಗ್ರಾಮಗಳಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಶಯ. ಅದಕ್ಕಾಗಿ ರಾಜ್ಯದ ಹಲವೆಡೆ ಇಲಾಖೆಯಿಂದ ಕೆರೆ ತುಂಬುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ವೃದ್ಧಿಸಿದರೆ ರೈತರ ಕೊಳವೆಬಾವಿಗಳಿಗೆ ನೀರು ದೊರೆಯಲಿದೆ' ಎಂದರು.
ಜಿಲ್ಲೆಯ ಹರಸೂರ ಸಣ್ಣ ನೀರಾವರಿ ಕೆರೆ, ಕುಮಸಿ ಕೆರೆ, ಸೈಯದ್ ಚಿಂಚೋಳಿ ಕೆರೆ, ಬೋಸಗಾ ಕೆರೆ, ಸಿಂದಗಿ/ ಸಾವಳಗಿ ಜಿನಗು ಕೆರೆ, ಯಳವಂತಗಿ ಕೆರೆ, ಹುಣಸಿ ಹಡಗಿಲ ಕೆರೆ, ಮೇಲಕುಂದಾ (ಬಿ) ಕೆರೆಗಳನ್ನು 1810 ಎಚ್.ಪಿ. ಸಾಮರ್ಥ್ಯದ 3 ಪಾಲುಗಳನ್ನು ಬಳಸಿ ಏತ ನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸಲಾಗುವುದು ಎಂದರು.
ಕ್ಷೇತ್ರದ ಶಾಸಕ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಳಿಗೆ ₹ 1100 ಕೋಟಿ ಬಿಡುಗಡೆ ಮಾಡುವುದರ ಜೊತೆಗೆ ಕೆರೆ ತುಂಬಿಸುವ ಯೋಜನೆಗೆ ಹಣಕಾಸು ನೀಡಿದ್ದಾರೆ. ಕಲಬುರ್ಗಿ ಜಿಲ್ಲೆಗೆ ಹಿಂದೆ ಇಷ್ಟೊಂದು ಪ್ರಮಾಣದ ಅನುದಾನ ಬಂದಿರಲಿಲ್ಲ’ ಎಂದರು.
ಶಾಸಕ ಬಸವರಾಜ ಮತ್ತಿಮೂಡ, ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಜಿ.ಪಂ. ಅಧ್ಯಕ್ಷೆ ಸುವರ್ಣಾ ಮಾಲಾಜಿ, ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ ಧಾರವಾಡಕರ, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಇಲಾಖೆ ಉತ್ತರ ವಲಯದ ಮುಖ್ಯ ಎಂಜಿನಿಯರ್ ಜಿ.ಟಿ. ಸುರೇಶ, ಕಲಬುರ್ಗಿ ವೃತ್ತದ ಅಧೀಕ್ಷಕ ಎಂಜಿನಿಯರ್ ಸುರೇಶ ಎಲ್.ಶರ್ಮಾ, ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ ಅಂಬಲಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.