ADVERTISEMENT

ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 14:38 IST
Last Updated 16 ಜನವರಿ 2019, 14:38 IST
ಕಾನೂನು ಸಾಕ್ಷರತಾ ರಥಯಾತ್ರೆಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪಿ.ಟಿ.ಕಟ್ಟಿಮನಿ ಚಾಲನೆ ನೀಡಿದರು
ಕಾನೂನು ಸಾಕ್ಷರತಾ ರಥಯಾತ್ರೆಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪಿ.ಟಿ.ಕಟ್ಟಿಮನಿ ಚಾಲನೆ ನೀಡಿದರು   

ಕಲಬುರ್ಗಿ: ಜನರಲ್ಲಿ ಕಾನೂನು ಅರಿವು ಮೂಡಿಸಲು ಕಾನೂನು ಸಾಕ್ಷರತಾ ರಥವು ಜಿಲ್ಲೆಯಲ್ಲಿ ಜ.19ರ ವರೆಗೆ ಸಂಚರಿಸಲಿದೆ.

ಇಲ್ಲಿಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬುಧವಾರ ಈ ರಥಯಾತ್ರೆಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಪಿ.ಟಿ. ಕಟ್ಟಿಮನಿಚಾಲನೆ ನೀಡಿದರು.

‘ಪ್ರತಿ ದಿನ ಮೂರು ಕಡೆ ಕಾರ್ಯಕ್ರಮ ನಡೆಸಲಾಗುವುದು. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಹೊರತಂದ ವಿವಿಧ ಕಾನೂನುಗಳ ಕುರಿತು ಮಾಹಿತಿ ಇರುವ ಕಿರು ಪುಸ್ತಕ ವಿತರಿಸಲಾಗುವುದು’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಆರ್.ಮಾಣಿಕ್ಯ ತಿಳಿಸಿದರು.

ADVERTISEMENT

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನ್ಯಾಯವಾದಿಗಳ ಸಂಘ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಶಿಶು ಅಭಿವೃದ್ಧಿ ಯೋಜನೆ, ಪೊಲೀಸ್ ಇಲಾಖೆ, ರಹೆನುಮಾ ಕಾನೂನು ಸಲಹಾ ಕೇಂದ್ರ, ವಿಶ್ವ ಸೇವಾ ಮಿಷನ್, ವಿಶ್ವ ಸೇವಾ ಡಾನ್‌ಬಾಸ್ಕೋ, ಸಂಚಾರಿ ನ್ಯಾಯಾಲಯ, ಮಹಾತ್ಮಗಾಂಧೀಜಿ ಗ್ರಾಹಕರ ಹಿತರಕ್ಷಣಾ ವೇದಿಕೆ, ವಿವಿಧ ಸರ್ಕಾರಿ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಾಲ್ಕು ದಿನಗಳ ಕಾಲ ಕಾನೂನು ಅರಿವು ನೆರವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಗುಲಬರ್ಗಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್.ಕೆ.ಹಿರೇಮಠ, ಗುಲಬರ್ಗಾ ವಕೀಲರ ಸಂಘದ ಕಾರ್ಯದರ್ಶಿ ಬಿ.ಎನ್. ಪಾಟೀಲ, ಮಾಹಿತಿ ಹಕ್ಕು ಕಾರ್ಯಕರ್ತರ ಸಂಘದ ಅಧ್ಯಕ್ಷ ಸಿದ್ರಾಮಯ್ಯ ಹಿರೇಮಠ, ವಕೀಲ ವೈಜನಾಥ ಎಸ್. ಝಳಕಿ, ಜಿಲ್ಲೆಯ ನ್ಯಾಯಾಧೀಶರು ಪಾಲ್ಗೊಂಡಿದ್ದರು.

ರಥಯಾತ್ರೆಯಲ್ಲಿ ನೀಡಲಿರುವ ಮಾಹಿತಿ

ಜನನ-ಮರಣ ನೋಂದಣಿ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಸಕಾಲ ಮತ್ತು ಮಾಹಿತಿ ಹಕ್ಕು ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಜೀವನಾಂಶ ಕಾಯ್ದೆ, ಕಾನೂನು ಸುರಕ್ಷತಾ ವ್ಯವಸ್ಥೆ, ಸಂಚಾರಿ ನಿಯಮಗಳ ಪಾಲನೆ, ಮೋಟಾರು ವಾಹನ ಕಾಯ್ದೆ, ಅಸಂಘಟಿಕ ಕಾರ್ಮಿಕರಿಗೆ ದೊರೆಯುವ ಸೌಲಭ್ಯ, ಮಹಿಳೆಯರ ಆಸ್ತಿ ಹಕ್ಕು, ಕಾನೂನು ಸೇವಾ ಪ್ರಾಧಿಕಾರ ಧ್ಯೇಯೋದ್ದೇಶ ಮತ್ತು ನೆರವು ಕುರಿತು ಕಾರ್ಯಕ್ರಮಗಳಲ್ಲಿ ತಿಳಿ ಹೇಳಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.