ADVERTISEMENT

ಕಲಬುರಗಿ: ಕಾನೂನು ವಿಚಾರಗೋಷ್ಠಿ, ಕಾರ್ಯಾಗಾರ ನಾಳೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 7:21 IST
Last Updated 22 ಅಕ್ಟೋಬರ್ 2021, 7:21 IST

ಕಲಬುರಗಿ: ಬಿಜೆಪಿ ಮಹಾನಗರ ಘಟಕದ ಕಾನೂನು ಪ್ರಕೋಷ್ಠದ ವತಿಯಿಂದ ಶಹಾಬಾದ್ ತಾಲ್ಲೂಕಿನ ಮರತೂರು ಗ್ರಾಮದ ವಿಜ್ಞಾನೇಶ್ವರ ಭವನದಲ್ಲಿ ಅಕ್ಟೋಬರ್ 23ರಂದು ವಿಜ್ಞಾನೇಶ್ವರ ಮಿತಾಕ್ಷರದ ಕಾನೂನು ವಿಚಾರಗೋಷ್ಠಿ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕೋಷ್ಠದ ಸಂಚಾಲಕ ರಾಜಶೇಖರ ಡೊಂಗರಗಾಂವ ತಿಳಿಸಿದರು.

‘ರಾಜ್ಯದಲ್ಲಿ ವಕೀಲರ ಕುಟುಂಬಕ್ಕೆ ವಿಮಾ ಯೋಜನೆ ಮಂಜೂರು ಮಾಡಬೇಕು. ವಕೀಲರ ಕಾಲೊನಿಗಳು, ಕಲ್ಯಾಣ ಮಂಟಪ ನಿರ್ಮಾಣ, ವಕೀಲರ ಅಕಾಡೆಮಿಗಳ ಸ್ಥಾಪನೆ ಮತ್ತು ಪ್ರತಿ ಗ್ರಾಮ ಪಂಚಾಯಿತಿ ಮತ್ತು ನಗರ, ಪಟ್ಟಣಗಳಲ್ಲಿ ಐದು ವಾರ್ಡ್‍ಗಳಿಗೆ ಐವರು ವಕೀಲರನ್ನು ಕಾನೂನು ಸಲಹೆಗಾರರನ್ನಾಗಿ ನೇಮಿಸಬೇಕು ಎಂಬುದೂ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಈ ವಿಚಾರಗೋಷ್ಠಿಯಲ್ಲಿ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರ ಮತ್ತು ರಾಜ್ಯ ಬಜೆಟ್‌ನಲ್ಲಿ ಶೇ 1ರಷ್ಟು ಅನುದಾನವನ್ನು ವಕೀಲರ ಅಭಿವೃದ್ಧಿ ಯೋಜನೆಗಳಿಗೆ ಮೀಸಲಿಸಬೇಕು ಹಾಗೂ ವಕೀಲರ ಸಂರಕ್ಷಣೆ ಕಾನೂನು ಜಾರಿ ತರುವ ಬಗ್ಗೆಯೂ ಚರ್ಚೆ ನಡೆಸಲಾಗುವುದು’ ಎಂದರು.

ADVERTISEMENT

‘ಅಂದು ಬೆಳಿಗ್ಗೆ 10.45ಕ್ಕೆ ಕಲ್ಯಾಣ ಕರ್ನಾಟಕ ಪ‍್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಪಕ್ಷದ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಅಧ್ಯಕ್ಷತೆ ವಹಿಸುವರು. ರಾಜ್ಯ ಸಂಚಾಲಕ ಎಸ್.ಎಸ್.ಮಿಟ್ಟಲಕೋಡ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮುಖಂಡರಾದ ಉಮೇಶ ಪಾಟೀಲ, ಮಹಾದೇವ ಬೆಳಮಗಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು‌. ಮಧ್ಯಾಹ್ನ 2.45ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಪಕ್ಷದ ರಾಜ್ಯ ಸಹ ಸಂಚಾಲಕ ಯೋಗೇಂದ್ರ ಹೊಡಾಘಟ್ಟ, ದಕ್ಷಿಣ ಮಂಡಲದ ಅಧ್ಯಕ್ಷ ರಾಮಚಂದ್ರ ರೆಡ್ಡಿ, ಉತ್ತರ ಮಂಡಲದ ಅಧ್ಯಕ್ಷ ಅಶೋಕ ಮಾನಕರ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ ಪಾಲ್ಗೊಳ್ಳವರು’ ಎಂದು ಅವರು ಹೇಳಿದರು.

ಮುಖಂಡರಾದ ಅಂಬಾರಾಯ ಪಟ್ಟಣ, ಮಹಾಬಲೇಶ್ವರ ಮಲ್ಕಪಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.