ಕಲಬುರಗಿ: ಬಿ.ಇಡಿ ಪದವಿ ಮುಗಿಸಿ ಉತ್ತಮ ಶಿಕ್ಷಕರಾಗಬೇಕು ಎಂಬ ಕನಸು ಹೊತ್ತಿದ್ದ ಅಭ್ಯರ್ಥಿಗಳಿಗೆ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ವಿಧಿಸುತ್ತಿರುವ ‘ಹೆಚ್ಚುವರಿ ಶುಲ್ಕ’ವು ಬರೆ ಎಳೆಯುತ್ತಿದೆ.
ಸರ್ಕಾರಿ ಕೋಟಾದಡಿ ಸೀಟು ಲಭಿಸಿದ್ದರೂ ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಬಿ.ಇಡಿ ಪ್ರವೇಶ ಪಡೆಯಲು ಬಂದ ಅಭ್ಯರ್ಥಿಯಿಂದ ನಿಗದಿತ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ₹25,000ರಿಂದ ₹ 35,000 ಹಣ ಕಟ್ಟಿಸಿಕೊಳ್ಳಲಾಗುತ್ತಿದೆ. ಹೀಗಾಗಿ ಹಣ ಕಟ್ಟಲಾಗದ ಕೆಲವು ಅಭ್ಯರ್ಥಿಗಳು, ತಮಗೆ ಹಂಚಿಕೆಯಾಗಿರುವ ಬಿ.ಇಡಿ ಸೀಟನ್ನು ರದ್ದುಗೊಳಿಸಿ, ಕಟ್ಟಿರುವ ಪ್ರವೇಶ ಶುಲ್ಕವನ್ನು ವಾಪಸ್ ಕೊಡಿ ಎಂದು ಡಯಟ್‌ಗೆ ಪತ್ರ ಬರೆದಿದ್ದಾರೆ. ‘ಪ್ರಜಾವಾಣಿ’ಗೆ ಈ ಪತ್ರಗಳು ಲಭಿಸಿದೆ.
ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರಿ ಕಾಲೇಜಿಗೆ ₹ 5,125, ಅನುದಾನಿತ ಕಾಲೇಜಿಗೆ ₹6,175 ಹಾಗೂ ಖಾಸಗಿ (ಅನುದಾನ ರಹಿತ) ಕಾಲೇಜಿಗೆ ₹ 10,175 ಶುಲ್ಕ ಪಾವತಿಸಬೇಕು. ಆದರೆ, ಖಾಸಗಿ ಮತ್ತು ಅನುದಾನಿತ ಕಾಲೇಜುಗಳು ಅಭ್ಯರ್ಥಿಗಳಿಂದ ಪ್ರತಿ ಸೆಮಿಸ್ಟರ್‌ಗೆ ಕಾಲೇಜು ಅಭಿವೃದ್ಧಿ, ಪ್ರವಾಸ, ನೋಂದಣಿ ಶುಲ್ಕ ಸೇರಿದಂತೆ ₹ 25,000ರಿಂದ ₹35,000ವರೆಗೆ ಹಣ ಕೇಳುತ್ತಿವೆ. ಜೊತೆಗೆ ವಿಶ್ವವಿದ್ಯಾಲಯಕ್ಕೆ ತಾವು ಕಟ್ಟಬೇಕಿರುವ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಭಿವೃದ್ಧಿ ವ್ಯವಸ್ಥೆ(ಯುಯುಸಿಎಂಎಸ್) ನಿರ್ವಹಣೆಯ ₹1,000 ಶುಲ್ಕದ ಬದಲಿಗೆ, ಅಭ್ಯರ್ಥಿಗಳಿಂದ ₹ 10,000 ಕಟ್ಟಿಸಿಕೊಳ್ಳುತ್ತಿವೆ.
ಇವೆಲ್ಲವೂ ಸೇರಿದರೆ ಸರ್ಕಾರಿ ಕೋಟಾದಡಿ ಸೀಟು ಸಿಕ್ಕರೂ ಒಬ್ಬ ಅಭ್ಯರ್ಥಿ ಒಂದು ಸೆಮಿಸ್ಟರ್‌ಗೆ ಸುಮಾರು ₹55,000ರಿಂದ ₹65,000ವರೆಗೆ ತಕ್ಷಣ ಕಾಲೇಜಿಗೆ ಕಟ್ಟಬೇಕಾಗಿದೆ. ನಾಲ್ಕು ಸೆಮಿಸ್ಟರ್‌ಗಳಿಗೆ ₹1.5 ಲಕ್ಷದಿಂದ ₹ 2 ಲಕ್ಷದವರೆಗೆ ಕಟ್ಟಬೇಕಾಗಿರುವುದರಿಂದ ತಮಗೆ ಪ್ರವೇಶವೇ ಬೇಡ ಎಂದು ಕೆಲವು ಅಭ್ಯರ್ಥಿಗಳು ಡಯಟ್‌ಗೆ ಪತ್ರ ಬರೆದು ಅಳಲು ತೋಡಿಕೊಂಡಿದ್ದಾರೆ.
ಮೆರಿಟ್ ಲಿಸ್ಟ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿ ಪರಿಶೀಲಿಸಿ ಕಾಲೇಜುಗಳ ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ಬಳಿಕ ತಾವು ಆಯ್ಕೆ ಮಾಡಿಕೊಂಡ ಕಾಲೇಜುಗಳಿಗೆ ತೆರಳಿ ಪ್ರವೇಶ ಪಡೆಯಬೇಕು. ಒಂದು ವೇಳೆ ಅಭ್ಯರ್ಥಿಯು ಕಾಲೇಜು ಬದಲಾಯಿಸಿಕೊಳ್ಳಬೇಕಾದರೆ, 2ನೇ ಸುತ್ತಿನ ಮೆರಿಟ್ ಲಿಸ್ಟ್ ಬಿಡುಗಡೆ ಆಗುವವರೆಗೂ ಕಾಯಬೇಕು. ಆ ನಂತರ ಕಾಲೇಜನ್ನು ಬದಲಿಸಿಕೊಳ್ಳಬೇಕು. ಹೀಗೆ ಬದಲಿಸಿಕೊಂಡರೆ ಹೆಚ್ಚುವರಿಯಾಗಿ ಪಾವತಿಸಿದ ಹಣವೂ ವಾಪಸ್ ಬರುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯುವ ಮುನ್ನವೇ ತಮಗೆ ಹಂಚಿಕೆಯಾಗಿದ್ದ ಸೀಟನ್ನು ರದ್ದುಗೊಳಿಸಬೇಕು ಎಂದು ಡಯಟ್‌ಗೆ ಪತ್ರ ಬರೆಯುತ್ತಿದ್ದಾರೆ.
ಸರ್ಕಾರಿ ಕೋಟಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಶುಲ್ಕ ಮಾತ್ರ ಪಡೆಯಬೇಕು. ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದುಬಿ.ಎಂ. ಪಾಟೀಲ, ಹಂಗಾಮಿ ಕುಲಪತಿ, ಕರ್ನಾಟಕ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.