ಅಫಜಲಪುರ: ತಾಲ್ಲೂಕಿನಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೂ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಮಣ್ಣಿನ ರಸ್ತೆಗಳು ಕೆಸರು ಗದ್ದೆಯಂತಾಗಿದ್ದು, ರಸ್ತೆ ತಗ್ಗು–ಗುಂಡಿಗಳಿಂದ ತುಂಬಿದ್ದು, ಬೈಕ್, ಕಾರು, ಪಾದಚಾರಿಗಳು ವಾಹನ ಸವಾರರು ಪರದಾಡುವಂತಾಯಿತು.
ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿರುವ ಕಾರಣ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಹೆಸರು, ಆಲಸಂದಿ, ಉದ್ದು ಬೆಳೆ ರಾಶಿ ನಡೆಯುತ್ತಿದ್ದು, ಕೆಲವು ಗ್ರಾಮಗಳಲ್ಲಿ ಬೆಳೆ ಕಟಾವಿಗೆ ಬಂದು ಮಳೆಯಲ್ಲಿ ಕೊಳೆಯುತ್ತಿದೆ. ಮಳೆ ಹೆಚ್ಚಾಗಿದ್ದರಿಂದ ತೊಗರಿ ಬೆಳೆಗೆ ತೇವಾಂಶ ಹೆಚ್ಚಾಗಿ ಅಲ್ಲಲ್ಲಿ ಎಲೆಗಳು ಹಳದಿಯಾಗಿ ಒಣಗುತ್ತಿವೆ. ಕಬ್ಬು, ಬಾಳೆ ಇತರೆ ತೋಟಗಾರಿಕೆ ಬೆಳೆಗಳಿಗೆ ಯಾವುದೇ ಹಾನಿಯಾಗಿಲ್ಲ ತೊಗರಿ, ಹತ್ತಿ ಬೆಳೆಗೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ ಆದರೆ ಇನ್ನೂ ಮಳೆ ಮುಂದುವರೆದರೆ ಬೆಳೆ ಹಾನಿ ಪ್ರದೇಶ ಹೆಚ್ಚು ಆಗುತ್ತದೆ ರೈತರು ಹೇಳುತ್ತಾರೆ.
‘ಕಟಾವಿಗೆ ಬಂದಿರುವ ಹೆಸರು ಉದ್ದು ಬೆಳೆಗಳು ಹಾಳಾಗಿ ಹೋಗುತ್ತಿವೆ.ಇನ್ನೊಂದು ಕಡೆ ಜಮೀನುಗಳಿಗೆ ಸಂಚರಿಸುವ ರಸ್ತೆಗಳು ತುಂಬಾ ಹಾಳಾಗಿ ಹೋಗಿವೆ. ಈ ರಸ್ತೆಗಳ ದುರಸ್ತಿ ಮಾಡಬೇಕು ಎಂದು ರೈತರಾದ ಸಿದ್ದು ಧಣ್ಣೂರು ಹಾಗೂ ಗುರಣ್ಣ ಚಾಂದಕೋಟೆ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಹಾಳಾಗಿಲ್ಲ. ಅಲ್ಲಲ್ಲಿ ಚರಂಡಿಗಳು ತುಂಬಿದ್ದು ನೀರು ರಸ್ತೆ ಮೇಲೆ ಹರಿಯುತ್ತಿದೆ. ಪಟ್ಟಣದ ಹೊರವಲಯದ ಆಶ್ರಯ ಕಾಲೋನಿಗೆ ಸಂಪರ್ಕಿಸುವ ರಸ್ತೆ ಹಾಳಾಗಿದೆ ಮಳೆ ಬಂದರೆ ಅಲ್ಲಲ್ಲಿ ನೀರು ನಿಲ್ಲುತ್ತದೆ ಹೀಗಾಗಿ ಜನರಿಗೆ ಸಂಚಾರ ಕಷ್ಟವಾಗುತ್ತಿದೆ ಪುರಸಭೆಯವರು ರಸ್ತೆ ದುರಸ್ತಿ ಮಾಡಬೇಕು ಎಂದು ಪುರಸಭೆಯ ಸದಸ್ಯ ಶಿವಾನಂದ ಸಲಗರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.