ADVERTISEMENT

ಸಂಪುಟದಲ್ಲಿ ಲಿಂಗಾಯತ ಸಂಸದರಿಗೆ ಪ್ರಾತಿನಿಧ್ಯಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 16:22 IST
Last Updated 4 ಅಕ್ಟೋಬರ್ 2020, 16:22 IST
ಶರಣ ಪಾಟೀಲ
ಶರಣ ಪಾಟೀಲ   

ಕಲಬುರ್ಗಿ: ‘ಸುರೇಶ ಅಂಗಡಿ ಅವರ ಅಗಲಿಕೆಯಿಂದ ತೆರವಾದ ಸಚಿವ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಂಸದರಿಗೆ ಪ್ರಾತಿನಿಧ್ಯ ನೀಡಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ. ಶರಣ ಬಿ.ಪಾಟೀಲ ಮತ್ತು ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ ನರಿಬೋಳ ಮನವಿ ಮಾಡಿದ್ದಾರೆ.

‘ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮಾಜದ್ದೇ ಸಿಂಹ ಪಾಲಿದೆ. ಆದರೂ ಕೇಂದ್ರ ಮಂತ್ರಿಮಂಡಲದಲ್ಲಿ ವೀರಶೈವ ಲಿಂಗಾಯತ ಸಂಸಂದರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದಿ.ಸುರೇಶ ಅಂಗಡಿ ಅವರನ್ನು ಕೇಂದ್ರ ಸರ್ಕಾರದ ಸಚಿವರನ್ನಾಗಿಸುವ ಮೂಲಕ ನಮ್ಮ ಸಮಾಜದ ನಾಯಕರಿಗೆ ಅವಕಾಶ ನೀಡಿದ್ದರು. ಅದರಂತೆ ರೈಲ್ವೆ ಖಾತೆಯನ್ನು ತುಂಬಾ ಉತ್ಸುಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದರು’ ಎಂದು ತಿಳಿಸಿದ್ದಾರೆ.

‘ಸುರೇಶ ಅಂಗಡಿ ಅವರ ಅಗಲಿಕೆಯಿಂದ ವೀರಶೈವ ಲಿಂಗಾಯತರಿಗೆ ಸಿಕ್ಕ ಅವಕಾಶ ಅರ್ಧದಲ್ಲೇ ಮೊಟಕಿ ಹೋದಂತಾಗಿದೆ. ಮುಂಬರುವ ದಿನಗಳಲ್ಲಿ ಅಂಗಡಿ ಅವರ ಅಗಲಿಕೆಯಿಂದ ತೆರವಾದ ಸಚಿವ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಂಸದರಲ್ಲೇ ಒಬ್ಬರಿಗೆ ಅವಕಾಶ ನೀಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ಈ ಬಗ್ಗೆ ವೀರಶೈವ ಲಿಂಗಾಯತ ಮಹಾಸಭಾ ಮುಖಂಡರ ನಿಯೋಗವು ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.