ADVERTISEMENT

ಪಠ್ಯಪುಸ್ತಕ ಪರಿಷ್ಕರಣೆ| ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 12:48 IST
Last Updated 4 ಜೂನ್ 2022, 12:48 IST
ಪಠ್ಯಪುಸ್ತಕದಲ್ಲಿರುವ ಲೋಪ ಸರಿಪಡಿಸಬೇಕು ಎಂದು ಆಗ್ರಹಿಸಿ ಜಾಗತಿಕ ಮಹಾಸಭಾ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕಲಬುರಗಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು
ಪಠ್ಯಪುಸ್ತಕದಲ್ಲಿರುವ ಲೋಪ ಸರಿಪಡಿಸಬೇಕು ಎಂದು ಆಗ್ರಹಿಸಿ ಜಾಗತಿಕ ಮಹಾಸಭಾ ಸದಸ್ಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಕಲಬುರಗಿಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು   

ಕಲಬುರಗಿ: ಪ್ರಸಕ್ತ ವರ್ಷದ ಒಂಬತ್ತನೆಯ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಬಸವಣ್ಣನವರನ್ನು ಕುರಿತಾದ ಪಾಠದಲ್ಲಿ ಹಾದಿ ತಪ್ಪಿಸುವ ಮಾಹಿತಿಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಜಾಗತಿಕ ಲಿಂಗಾಯತ ಮಹಾಸಭಾ ಸದಸ್ಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು ಎಂದು ಬರೆಯಲಾಗಿದೆ. ಇದು ತಪ್ಪು. ಬಸವಣ್ಣನವರು ತಮ್ಮ ಸಹೋದರಿ ಅಕ್ಕನಾಗಮ್ಮಳಿಗೆ ಇಲ್ಲದ ಉಪನಯನ ನನಗೇಕೆ ಎಂದು ಧಿಕ್ಕರಿಸಿ ಕೂಡಲಸಂಗಮಕ್ಕೆ ಹೋದುದು ಐತಿಹಾಸಿಕ ಸಂಗತಿಯಾಗಿದೆ ಎಂದರು.

ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗದೀಕ್ಷೆಯನ್ನು ಪಡೆದು ಎಂದು ಬರೆಯಲಾಗಿದೆ. ಇದು ಸಹ ತಪ್ಪು ಮಾಹಿತಿಯಾಗಿದ್ದು, ಶೈವ ಗುರುಗಳು ಗುಡಿ–ಗುಂಡಾರಗಳಲ್ಲಿರುವ ಸ್ಥಾವರ ಲಿಂಗಾರಾಧರಕರು. ಅವರು ಹೇಗೆ ಇಷ್ಟಲಿಂಗ ದೀಕ್ಷೆ ಮಾಡಬಲ್ಲರು? ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿ ಬಂದುದು. ಅವರೇ ಇಷ್ಟಲಿಂಗದ ಜನಕರು. ಬಸವಣ್ಣನ ಉದರದಲ್ಲಿ ಹುಟ್ಟಿತ್ತು ಲಿಂಗ ಎಂದು ಚನ್ನಬಸವಣ್ಣನವರು ಉಲ್ಲೇಖಿಸಿದ್ದಾರೆ. ನಿನ್ನ ನಾನರಿಯದ ಮುನ್ನ ನೀನೆಲ್ಲಿ ಇದ್ದೆ? ಎನ್ನೊಳಗಿದ್ದು ನಿನ್ನ ತೋರಲಿಕ್ಕೆ ನೀನೆ ರೂಪಾದೆ ಎಂದು ಬಸವಣ್ಣನವರು ಸ್ವತಃ ತಮ್ಮ ವಚನದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

ಬಸವಣ್ಣ ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂದು ಈಗ ಪಠ್ಯದಲ್ಲಿ ಸೇರಿಸಲಾಗಿದೆ. ಇದು ಸಹ ತಪ್ಪಾಗಿದೆ. ವೀರಶೈವ ಶೈವ ಪಂಥದ ಶಾಖೆ ಇರಬಹುದು. ಅದನ್ನು ಲಿಂಗಾಯತ ಧರ್ಮದ ಒಂದು ಪಂಗಡ ಎಂದು ಹೆಸರಿಸಲಾಗಿದೆ. ಸರ್ಕಾರದ ದಾಖಲೆಗಳಲ್ಲಿ ಕ್ರಿ.ಶ. 1871ರಿಂದಲೂ ಇದನ್ನು ಕಾಣಬಹುದು. ಆದರೆ, ಬಸವಣ್ಣನವರು ಲಿಂಗಾಯತ ಧರ್ಮದ ಸ್ಥಾಪಕರು ಎಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿದ್ದು, ಶೈವದಲ್ಲಿ ವರ್ಣಾಶ್ರಮ ಆಚರಣೆ ಇದೆ. ಲಿಂಗಾಯತರಲ್ಲಿ ವರ್ಣಾಶ್ರಮ ಭೇದಗಳಿಲ್ಲ. ಹಾಗಾಗಿ, ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿಪಡಿಸಿದರು ಎಂಬುದು ಶುದ್ಧ ಅನೈತಿಹಾಸಿಕ ಎಂದರು.

ಈ ಮೇಲಿನ ತಪ್ಪುಗಳನ್ನು ತಕ್ಷಣ ತಿದ್ದುಪಡಿ ಮಾಡಿ ಮಕ್ಕಳಿಗೆ ಸರಿಯಾದ ‍ಪಠ್ಯಪುಸ್ತಕ ಒದಗಿಸಿ ಪಾಠ ಬೋಧಿಸಬೇಕು. ಈ ತಪ್ಪುಗಳು ತಿದ್ದುಪಡಿಯಾಗದಿದ್ದರೆ ನಾಡಿನಾದ್ಯಂತ ಬಸವಾಭಿಮಾನಿಗಳು ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಗಾರ, ರವೀಂದ್ರ ಶಾಬಾದಿ, ಆರ್.ಕೆ.ಹುಡಗಿ, ಶರಣು ಪಪ್ಪಾ, ರೇಣುಕಾ ಸರಡಗಿ, ರವಿ ಸಿರಸಗಿ, ಡಾ. ಮಲ್ಲಿಕಾರ್ಜುನ, ಶಾಂತಪ್ಪಾ ಪಾಟೀಲ, ಶರಣ ಐಟಿ ಸೇರಿದಂತೆ ಹಲವಾರು ಬಸವಾಭಿಮಾನಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.