ಮದ್ಯ
(ಸಾಂಕೇತಿಕ ಚಿತ್ರ)
ಕಲಬುರಗಿ: ಹೊಸ ವರ್ಷದ ಸಂಭ್ರಮದ ವೇಳೆಯ ಡಿ.31ರಂದು ಭರ್ಜರಿಯಾಗಿ ಮದ್ಯ ಮಾರಾಟವಾಗಿದೆ. ಆದರೆ, ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದ ಮದ್ಯ ಮಾರಾಟದ ಪ್ರಮಾಣವು ಈ ಬಾರಿಯ ಡಿಸೆಂಬರ್ ತಿಂಗಳಲ್ಲಿ ಕುಸಿದಿರುವುದು ಕಂಡುಬಂದಿದೆ.
ಹೊಸ ವರ್ಷದ ಸಂಭ್ರಮಕ್ಕೆ ಭಾರಿ ಪ್ರಮಾಣ ಆದಾಯದ ನಿರೀಕ್ಷೆಯಲ್ಲಿದ್ದ ಜಿಲ್ಲಾ ಅಬಕಾರಿ ಇಲಾಖೆಗೆ ಈ ಬಾರಿಯ ‘ನ್ಯೂ ಇಯರ್ ಪಾರ್ಟಿ’ಗಳು ನಿರಾಸೆ ಮೂಡಿಸಲಿಲ್ಲ. ಕಳೆದ ಬಾರಿಯ (2023ರ ಡಿ.31) ಹೊಸ ವರ್ಷಾಚರಣೆಯ ವೇಳೆ 12,298 ಬಾಕ್ಸ್ ದೇಶೀಯವಾಗಿ ತಯಾರಿಸಿದ ಮದ್ಯ (ಐಎಂಎಲ್) ಮಾರಾಟವಾಗಿದ್ದರೆ, ಬಿಯರ್ 6,284 ಬಾಕ್ಸ್‌ಗಳಷ್ಟು ಮಾರಾಟವಾಗಿದ್ದವು. 2024ರ ಡಿ.31ರಂದು 20,397 ಪೆಟ್ಟಿಗೆ ಐಎಂಎಲ್ ಮದ್ಯ ಮಾರಾಟವಾಗಿದ್ದು, 1,819 ಪೆಟ್ಟಿಗೆಗಳು ಬಿಯರ್ ಮಾರಾಟವಾದವು.
ಮಂಗಳವಾರ (ಡಿ.31) ಒಂದೇ ದಿನ ಆಳಂದ ವ್ಯಾಪ್ತಿಯಲ್ಲಿ ಐಎಂಎಲ್ 3,737 ಮತ್ತು ಬಿಯರ್ 1,073 ಬಾಕ್ಸ್, ಕಲಬುರಗಿ ವ್ಯಾಪ್ತಿಯ 1 ಮತ್ತು 2ರಲ್ಲಿ ಐಎಂಎಲ್ 7,986 ಮತ್ತು ಬಿಯರ್ 5,970 ಬಾಕ್ಸ್, ಜೇವರ್ಗಿ ವ್ಯಾಪ್ತಿಯಲ್ಲಿ ಐಎಂಎಲ್ 1,530 ಮತ್ತು ಬಿಯರ್ 850, ಚಿಂಚೋಳಿ ವ್ಯಾಪ್ತಿಯಲ್ಲಿ ಐಎಂಎಲ್ 2,402 ಮತ್ತು 1,227, ಚಿತ್ತಾಪುರ ವ್ಯಾಪ್ತಿಯಲ್ಲಿ ಐಎಂಎಲ್ 3,594 ಮತ್ತು ಬಿಯರ್ 1,4222 ಹಾಗೂ ಸೇಡಂ ವ್ಯಾಪ್ತಿಯಲ್ಲಿ ಐಎಂಎಲ್ 1,148 ಮತ್ತು 1,277 ಬಾಕ್ಸ್‌ಗಳು ಮಾರಾಟವಾಗಿವೆ.
2024ರ ಡಿಸೆಂಬರ್ ತಿಂಗಳಲ್ಲಿನ ಒಟ್ಟಾರೆ ಮದ್ಯ ಮಾರಾಟದ ಪೈಕಿ ಬಿಯರ್ ಬಿಕರಿ ಗಣನೀಯವಾಗಿ ಕುಸಿತ ಕಂಡಿದೆ. 2023ರ ಡಿಸೆಂಬರ್‌ನಲ್ಲಿ 1,33,232 ಬಿಯರ್ ಪೆಟ್ಟಿಗೆಗಳು ಮಾರಾಟ ಆಗಿದ್ದವು. ಈ ವರ್ಷ ಅದೇ ತಿಂಗಳಲ್ಲಿ 1,17,007 ಬಿಯರ್ ಪೆಟ್ಟಿಗೆಗಳು ಮಾರಿದ್ದು, 16,225 ಪೆಟ್ಟಿಗೆಗಳು ಕಡಿಮೆಯಾಗಿವೆ. ಶೇ 12.18ರಷ್ಟು ಕುಸಿತ ದಾಖಲಾಗಿದೆ.
ಐಎಂಎಲ್ ಮದ್ಯ ಮಾರಾಟದಲ್ಲಿಯೂ ಶೇ 0.80ರಷ್ಟು ಕುಸಿತವಾಗಿದೆ. 2023ರ ಡಿಸೆಂಬರ್‌ನಲ್ಲಿ ಐಎಂಎಲ್ ಮದ್ಯ 1,80,632 ಪೆಟ್ಟಿಗೆಗಳು ಖರೀದಿಯಾಗಿದ್ದವು. ಈ ವರ್ಷದ ಡಿಸೆಂಬರ್‌ನಲ್ಲಿ ಅದು 1,79,181ಕ್ಕೆ ಇಳಿದಿದ್ದು, 1,451 ಬಾಕ್ಸ್‌ಗಳು ಕಡಿಮೆ ಮಾರಾಟ ಆಗಿವೆ ಎಂಬುದು ಅಬಕಾರಿ ಇಲಾಖೆ ನೀಡಿದ ಅಂಕಿಅಂಶಗಳಿಂದ ತಿಳಿದುಬಂದಿದೆ.
‘ತೊಗರಿ ಬೆಳೆ ಹಾನಿಯಾಗಿದ್ದರ ಜತೆಗೆ ಧಾರಣೆಯೂ ಕುಸಿತವಾಗಿದೆ. ಹೀಗಾಗಿ, ಜನರ ಬಳಿ ಖರ್ಚು ಮಾಡಲು ಸಾಕಷ್ಟು ಹಣ್ಣವಿಲ್ಲ. ನೆರೆಯ ಮಹಾರಾಷ್ಟ್ರದಿಂದ ಸಾವಿರಾರು ಸಂಖ್ಯೆಯ ಕೂಲಿ ಕಾರ್ಮಿಕರು ಜಿಲ್ಲೆಯಲ್ಲಿನ ಕಬ್ಬು ಕಟಾವಿಗೆ ವಲಸೆ ಬರುತ್ತಿದ್ದರು. ಈ ವರ್ಷ ಅವರ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ, ಮದ್ಯ ಮಾರಾಟದ ಮೇಲೆ ನಕರಾತ್ಮ ಪರಿಣಾಮ ಬೀರಿದೆ’ ಎನ್ನುತ್ತಾರೆ ಅಬಕಾರಿ ಇಲಾಖೆಯ ಅಧಿಕಾರಿಗಳು.
ಕಳೆದ ವರ್ಷದ ಡಿಸೆಂಬರ್ ಮಾರಾಟಕ್ಕೆ ಹೋಲಿಸಿದರೆ ಈ ವರ್ಷದ ಮಾಸಿಕ ಮದ್ಯ ಮಾರಾಟದಲ್ಲಿ ಕುಸಿತವಾಗಿದೆ. ಆದರೆ ಬಿಯರ್ ಮಾರಾಟದಲ್ಲಿ ಏರಿಕೆಯಾಗಿದೆಪಿ. ಸಂಗನಗೌಡ ಅಬಕಾರಿ ಉಪಾಯುಕ್ತರು ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.