ಕಲಬುರಗಿ: ‘ಕೇವಲ ಪದಗಳ ಜೋಡಣೆ ಕಾವ್ಯ ಆಗಲಾರದು. ಬದಲಿಗೆ ಧ್ವನಿಪೂರ್ಣವಾದ ಮಾತುಗಳೇ ಕಾವ್ಯವಾಗುತ್ತದೆ’ ಎಂದು ಧಾರವಾಡದ ಹಿರಿಯ ಕಲಾವಿದ ಶಶಿಧರ ನರೇಂದ್ರ ಅಭಿಪ್ರಾಯಪಟ್ಟರು.
ನಗರದ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಸೇಡಂನ ಸಂಸ್ಕೃತಿ ಪ್ರಕಾಶನ ಆಯೋಜಿಸಿದ್ದ ಸಮಾರಂಭದಲ್ಲಿ ಅಂಬುಜಾ ಮಳಖೇಡಕರ್ ರಚಿಸಿದ ‘ಗೊಂಬೆಯ ಜೀವನ’, ‘ಮನ ಹರಿ ಧ್ಯಾನ ಮಂದಿರ’, ‘ದಡ ಸೇರಿಸೆನ್ನ ಹರಿಯೇ’, ‘ಪ್ರೇಮ ಪದನಿಸ’ ಹಾಗೂ ‘ರಾಜನ ನಂಟು ಕನ್ನಡಿಯ ಗಂಟು’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ಅಂಬುಜಾ ಅವರ ಎಲ್ಲ ಕವನಗಳಲ್ಲಿ ಈ ರೀತಿಯ ಸಾಲುಗಳು ಹೇರಳವಾಗಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಗೊಂಬೆಯ ಜೀವನ’ ಕೃತಿ ಕುರಿತು ಕನ್ನಡ ಉಪನ್ಯಾಸಕಿ ವಿದ್ಯಾವತಿ ಪಾಟೀಲ ಮಾತನಾಡಿದರು. ‘ಮನ ಹರಿ ಧ್ಯಾನ ಮಂದಿರ’ ಹಾಗೂ ‘ದಡ ಸೇರಿಸೆನ್ನ ಹರಿಯೇ’ ಕೃತಿಗಳನ್ನು ಕವಯತ್ರಿ ಕಾವ್ಯಶ್ರೀ ಮಹಾಗಾಂವ ಪರಿಚಯಿಸಿದರು.
‘ಪ್ರೇಮ ಪದನಿಸ’ ಕೃತಿಯನ್ನು ಉಪನ್ಯಾಸಕ ಎಂ.ಬಿ.ಕಟ್ಟಿ ಪರಿಚಯಿಸಿದರು. ‘ರಾಜನ ನಂಟು ಕನ್ನಡಿಯ ಗಂಟು’ ಕೃತಿಯನ್ನು ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಪರಿಚಯಿಸಿದರು.
ಕಾರಣಾಂತರಗಳಿಂದ ಪ್ರೀತಿಸುವ ಮನಸುಗಳಿಗಿಂತ ಮನುಷ್ಯತ್ವದ ಹಿನ್ನೆಲೆಯ ಪ್ರೀತಿ ದೊಡ್ಡದು.–ಶಶಿಧರ ನರೇಂದ್ರ, ಧಾರವಾಡದ ಹಿರಿಯ ಕಲಾವಿದ
ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಬಿ.ಕೊಂಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಪ್ರಕಾಶನದ ಸಂಚಾಲಕ ಪ್ರಭಾಕರ ಜೋಶಿ ಮಾತನಾಡಿದರು.
ಕವಯತ್ರಿ ಅಂಬುಜಾ ಮಳಖೇಡಕರ್ ಅನಿಸಿಕೆ ವ್ಯಕ್ತಪಡಿಸಿದರು. ಆರ್.ಜೆ.ಮಂಜು ನಿರೂಪಿಸಿದರು. ಸಮಾರಂಭದಲ್ಲಿ ಹಿರಿಯ ಕವಿಗಳಾದ ಎ.ಕೆ.ರಾಮೇಶ್ವರ, ನಾಗೇಂದ್ರ ಮಸೂತಿ, ಪ್ರೊ. ಚಿ.ಸಿ.ನಿಂಗಣ್ಣ, ಪ್ರೊ. ಬಿ.ಎಚ್.ನಿರಗುಡಿ, ಅಂಬಾರಾಯ ಕೋಣಿನ್, ಸತಾಳಕರ್, ಸಂಜೀವ ಸಿರನೂರಕರ್, ರವೀಂದ್ರ ಇಂಜಳ್ಳೀಕರ್, ಸಿದ್ದಪ್ಪ ತಳ್ಳಳ್ಳಿ, ಮಳಖೇಡಕರ್ ಪರಿವಾರದ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.