ADVERTISEMENT

ಸಣ್ಣ ಪ್ರಮಾಣದ ಭೂಕಂಪನ ಸಹಜ: ಭೂಗರ್ಭ ವಿಜ್ಞಾನಿ ಡಾ. ಪ್ರಭಾಕರ್

ವಿಜ್ಞಾನಿಗಳ ತಂಡದಿಂದ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 16:41 IST
Last Updated 9 ನವೆಂಬರ್ 2021, 16:41 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಭೂಕಂಪನ ಕುರಿತ ಕಾರ್ಯಾಗಾರದಲ್ಲಿ ಡಾ. ಮನೋಜ್ ರಾಜನ್ ಮಾತನಾಡಿದರು. ಡಾ. ಬಿ.ಸಿ. ಪ್ರಭಾಕರ್, ವಿಜಯಪುರ ಜಿಲ್ಲಾಧಿಕಾರಿ ಸುನೀಲ್‌ಕುಮಾರ್ ಹಾಗೂ ಭೂವಿಜ್ಞಾನಿಗಳು ಇದ್ದರು
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಭೂಕಂಪನ ಕುರಿತ ಕಾರ್ಯಾಗಾರದಲ್ಲಿ ಡಾ. ಮನೋಜ್ ರಾಜನ್ ಮಾತನಾಡಿದರು. ಡಾ. ಬಿ.ಸಿ. ಪ್ರಭಾಕರ್, ವಿಜಯಪುರ ಜಿಲ್ಲಾಧಿಕಾರಿ ಸುನೀಲ್‌ಕುಮಾರ್ ಹಾಗೂ ಭೂವಿಜ್ಞಾನಿಗಳು ಇದ್ದರು   

ಕಲಬುರಗಿ: ‘ಕಲಬುರಗಿ, ಬೀದರ್ ಹಾಗೂ ವಿಜಯಪುರ ಜಿಲ್ಲೆಗಳಲ್ಲಿನ ಭೂಮಿ ಸ್ಥಿರವಾಗಿದ್ದು, ಹಾನಿ ಮಾಡುವಂತಹ ಭಾರಿ ಪ್ರಮಾಣದ ಭೂಕಂಪನಗಳು ಸಂಭವಿಸುವ ಸಾಧ್ಯತೆಗಳು ಕಡಿಮೆ. ಈ ಬಗ್ಗೆ ಹೆದರುವ ಅವಶ್ಯಕತೆ ಇಲ್ಲ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಭೂವಿಜ್ಞಾನ ಪ್ರಾಧ್ಯಾಪಕ ಡಾ.ಬಿ.ಸಿ. ಪ್ರಭಾಕರ್ ಸ್ಪಷ್ಟಪಡಿಸಿದರು.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಭೂಮಿಯ ಮೇಲೆ ನಾವು ವಾಸವಾಗಿರುವುದರಿಂದ ಭೂಕಂಪನಗಳ ಅನುಭವವಾಗುವುದು ಸಹಜ. ಒಂದು ವರ್ಷದಲ್ಲಿ ಕನಿಷ್ಠ 10 ಲಕ್ಷ ಸಣ್ಣ ಹಾಗೂ ದೊಡ್ಡ ಪ್ರಮಾಣದ ಭೂಕಂಪನಗಳು ಸಂಭವಿಸುತ್ತವೆ. ಕಲಬುರಗಿ ಪರಿಸರದಲ್ಲಿ ಸಂಭವಿಸುತ್ತಿರುವ ಕಂಪನಗಳು ಹಲವು ವರ್ಷಗಳಿಂದ ಭೂಮಿಯ ಆಳದಲ್ಲಿ ನಡೆಯುತ್ತಿರುವ ರಾಸಾಯನಿಕ ಪ್ರಕ್ರಿಯೆಯ ಫಲವೇ ಆಗಿದೆ. ಹಲವು ವರ್ಷಗಳಿಂದ ಭೂಮಿಯ ಪದರಗಳಲ್ಲಿ ನಡೆಯುತ್ತಿದ್ದ ಘರ್ಷಣೆಯು ತಾರ್ಕಿಕ ಅಂತ್ಯ ಕಾಣುವ ಹಂತವೇ ಭೂಕಂಪನ’ ಎಂದರು.

‘ಭೂಮಿಯ ಮೇಲಿನ ಮಾನವ ಚಟುವಟಿಕೆಯು ಭೂಕಂಪನಕ್ಕೆ ಕಾರಣವಾಗುತ್ತದೆ ಎಂಬುದು ತಪ್ಪು ಗ್ರಹಿಕೆ. ವಿಜಯಪುರ ಜಿಲ್ಲೆಯ ಕೂಡಗಿಯಲ್ಲಿರುವ ರಾಷ್ಟ್ರೀಯ ಉಷ್ಣ ವಿದ್ಯುತ್ ಸ್ಥಾವರ (ಎನ್‌ಟಿಪಿಸಿ) ಅಥವಾ ಕಲಬುರಗಿ ಜಿಲ್ಲೆಯಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿದ್ದರಿಂದ ಅಪಾರ ಪ್ರಮಾಣದ ನೀರು ಸಂಗ್ರಹವಾಗುವುದು ಭೂಕಂಪನಕ್ಕೆ ಕಾರಣವಲ್ಲ. ಈ ಎಲ್ಲ ಚಟುವಟಿಕೆಗಳು ಹೇಗೆಂದರೆ ಆನೆಯ ಮೇಲೆ ಇರುವೆ ನಡೆಯುವಂತೆ. ಇರುವೆ ಇರುವುದು ಆನೆಗೆ ಹೇಗೆ ಗೊತ್ತಾಗುವುದಿಲ್ಲವೋ ಹಾಗೆಯೇ ಉಷ್ಣ ವಿದ್ಯುತ್ ಸ್ಥಾವರ ಹಾಗೂ ಅಣೆಕಟ್ಟುಗಳು ಭೂಮಿಗೆ ಯಾವ ಪರಿಣಾಮವನ್ನೂ ಬೀರುವುದಿಲ್ಲ’ ಎಂದು ವಿಶ್ಲೇಷಿಸಿದರು.

ADVERTISEMENT

‘ಸರ್ಕಾರವು ಭೂಕಂಪನ ಪೀಡಿತ ಜನರಿಗೆ ಅಗತ್ಯವಿರುವ ಸೌಲಭ್ಯಗಳನ್ನು ತಡಮಾಡದೇ ತಕ್ಷಣಕ್ಕೆ ತಲುಪಿಸಬೇಕು. ಜತೆಗೆ ಇಂತಹ ಸಣ್ಣ ಪ್ರಮಾಣದ ಭೂಕಂಪನ ಸಹಜವಾಗಿದ್ದು, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಬೇಕು. ಸರ್ಕಾರಕ್ಕೆ ವರದಿ ಸಲ್ಲಿಸಿದ ಬಳಿಕವೂ ವಿಜ್ಞಾನಿಗಳು ಇಲ್ಲಿನ ವಿದ್ಯಮಾನಗಳ ಬಗ್ಗೆ ನಿಗಾ ಇಟ್ಟಿರಬೇಕು. ವಿವಿಧ ಭೂಗರ್ಭ, ಭೂಭೌತ ಸಂಸ್ಥೆಗಳ ವಿಜ್ಞಾನಿಗಳು ಪರಸ್ಪರ ಸಮನ್ವಯದಿಂದ ಅಧ್ಯಯನ ನಡೆಸಿ ಎಷ್ಟು ಪ್ರಮಾಣದ ಕಂಪನ ಸಂಭವಿಸಬಹುದು ಎಂಬುದನ್ನು ಮುಂದೆ ವಿಸ್ತೃತವಾಗಿ ಅಧ್ಯಯನ ನಡೆಸಬೇಕು‘ ಎಂದರು.

ಗ್ರಾಮ ಸ್ಥಳಾಂತರ ಪರಿಹಾರವಲ್ಲ: ಅಕ್ಟೋಬರ್‌ನಲ್ಲಿ ಭೂಕಂಪನ ಸಂಭವಿಸಿದ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಸೇರಿದಂತೆ ವಿವಿಧ ಗ್ರಾಮಗಳನ್ನು ಸ್ಥಳಾಂತರ ಮಾಡಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರು ಇಟ್ಟಿದ್ದಾರೆ. ಆದರೆ, ಇದು ಪರಿಹಾರವಲ್ಲ. ಹಾಗೆ ನೋಡಿದರೆ ಪದೇ ಪದೇ ಭೂಕಂಪನ ಸಂಭವಿಸುವ ನೇಪಾಳ ದೇಶವನ್ನೇ ಸ್ಥಳಾಂತರಿಸಬೇಕಾಗುತ್ತದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾದಲ್ಲೂ ಭೂಕಂಪಗಳು ಸಹಜವಾಗಿವೆ. ಕಲಬುರಗಿಯಲ್ಲಿ ಸಂಭವಿಸಿದ ಭೂಕಂಪನದಷ್ಟೇ ಪ್ರಮಾಣ ಬೆಂಗಳೂರಿನಲ್ಲೂ ಸಂಭವಿಸಿತ್ತು. ನೂರಾರು ವರ್ಷಗಳಿಗೊಮ್ಮೆ ಇಂತಹ ವಿದ್ಯಮಾನಗಳು ನಡೆಯುತ್ತವೆ‘ ಎಂದು ಮಾಹಿತಿ ನೀಡಿದರು.

ವಿಜಯಪುರ ಜಿಲ್ಲಾಧಿಕಾರಿ ಸುನೀಲ್‌ಕುಮಾರ್, ಕಲಬುರಗಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ,ಬೀದರ್ ಹೆಚ್ಚುವರಿ ಎಸ್.ಪಿ. ಗೋಪಾಲ, ಬಸವಕಲ್ಯಾಣ ಸಹಾಯಕ ಆಯುಕ್ತ ಭುವನೇಶ ಪಾಟೀಲ, ಹೈದರಾಬಾದ್‌ನ ಎನ್.ಜಿ.ಆರ್.ಐ ಸಂಸ್ಥೆಯ ಹಿರಿಯ ಭೂ ವಿಜ್ಞಾನಿ ಡಾ. ಶಶಿಧರ ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ಡಾ. ಸುರೇಶ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಸಂ (ಎನ್.ಐ.ಆರ್.ಎಂ.) ಬೆಂಗಳೂರಿನ ಸಿಸ್ಮೋಲಾಜಿ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಬಾಲಸುಬ್ರಮಣ್ಯಂ ವಿ.ಆರ್. ಮತ್ತು ಸಿಸ್ಮೋ ಟೆಕ್ಟಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಬಿಜು ಜಾನ್, ಬೆಂಗಳೂರಿನ ಸಿ.ಎಸ್.ಐ.ಆರ್ ಸಂಸ್ಥೆಯ ಹಿರಿಯ ವಿಜ್ಞಾನಿ ಚಿರಂಜೀವಿ ಜಿ. ವಿವೇಕ ಮತ್ತು ಯೋಜನಾ ಸಿಬ್ಬಂದಿ ರಮೀಸ್ ರಾಜಾ ಮೀರ್, ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆಯ ಲ್ಯಾಂಡ್ ಸ್ಲೈಡ್ ವಿಭಾಗದ ನಿರ್ದೇಶಕ ಆರ್. ಸಂಜೀವ ಮತ್ತು ಭೂ ವಿಜ್ಞಾನಿ ಅಚನ್ ಕೋನ್ಯಾಕ್, ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಾಜಿ ವಿಜ್ಞಾನಿ ಡಾ. ಎ.ಪಿ.ಸಿಂಗ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೀನಿಯರ್ ಕನ್ಸಲ್ಟೆಂಟ್ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭೂ ವಿಜ್ಞಾನ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಲಿಂಗದೇವರು ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ತೇಜಸ್ವಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ (ಯೋಜನೆ) ಹರೀಶ್ ಎಚ್.ಪಿ. ಮತ್ತು ಹೊಸಪೇಟೆ ಉಪನಿರ್ದೇಶಕ ಮಹಾವೀರ ಕೆ.ಎ. ಇತರರು ಇದ್ದರು.

ಕನ್ಸಲ್ಟಂಟ್ ನೇಮಕಕ್ಕೆ ಪ್ರಸ್ತಾವ

ಭವಿಷ್ಯದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಭೂಕಂಪನ ಸಂಭವಿಸಿದರೂ ಅದು ಮಾಡಲಿರುವ ಸಂಭವನೀಯ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕನ್ಸಲ್ಟಂಟ್ ಒಬ್ಬರನ್ನು ನೇಮಕ ಮಾಡುವ ಪ್ರಸ್ತಾವ ಇದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ ರಾಜನ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಭೂಕಂಪನ ಅಧ್ಯಯನ ಸಂಸ್ಥೆಯವರು ಈ ಭಾಗದಲ್ಲಿ ಸಂಭವಿಸಲಿರುವ ಭೂಕಂಪನಗಳ ಪ್ರಮಾಣವನ್ನು ನಿಗದಿತ ಅವಧಿಯಲ್ಲಿ ವಿಶ್ಲೇಷಿಸಲು ಪ್ರಾಧಿಕಾರದೊಂದಿಗೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ಒಂದು ಭೂಕಂಪನ ಮಾಪನ ಕೇಂದ್ರವಿದ್ದು, ಮತ್ತೊಂದು ಅತ್ಯಾಧುನಿಕ ಮಾಪನ ಕೇಂದ್ರವನ್ನು ಅಳವಡಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.