ADVERTISEMENT

ಸಮ್ಮೇಳನ ಮರೆತು ಮಂತ್ರಿಗಿರಿಗಾಗಿ ಬೆಂಗಳೂರಿನಲ್ಲೇ ಬೀಡುಬಿಟ್ಟ ಜನಪ್ರತಿನಿಧಿಗಳು

ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 6:46 IST
Last Updated 5 ಫೆಬ್ರುವರಿ 2020, 6:46 IST
   

ಕಲಬುರ್ಗಿ: ನಗರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದ್ದ ಜಿಲ್ಲೆಯ ಬಿಜೆಪಿ ಶಾಸಕರು ಸಚಿವಗಿರಿಗಾಗಿ ಲಾಬಿ ಮಾಡಲು ಬೆಂಗಳೂರಿನಲ್ಲೇ ಬೀಡುಬಿಟ್ಟಿದ್ದಾರೆ.

ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷತೆಯ ಕಾರ್ಯಭಾರ ವಹಿಸಿಕೊಂಡಿರುವ ಶಾಸಕರು ಮುಖ್ಯಮಂತ್ರಿ ಮನೆ ಸುತ್ತುತ್ತಿರುವುದು ಜಿಲ್ಲೆಯ ಸಾಹಿತ್ಯಾಸಕ್ತರಲ್ಲಿ ಬೇಸರ ಉಂಟುಮಾಡಿದೆ.

‘ಫೆ.6ರಂದು ಸಚಿವ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿರ್ಧರಿಸಿದ್ದಾರೆ. ಕಲಬುರ್ಗಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಬೇಕು. ಇಲ್ಲದಿದ್ದರೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಅಧ್ಯಕ್ಷರ ಹೆಸರನ್ನಾದರೂ ಅಂತಿಮಗೊಳಿಸಬೇಕು ಎಂದು ಬಿಜೆಪಿ ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ ಹಾಗೂ ಸುಭಾಷ್‌ ಗುತ್ತೇದಾರ ಸೋಮವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು. ಆದರೆ, ಸೂಕ್ತ ಸ್ಪಂದನೆ ದೊರೆಯದಿದ್ದುದಕ್ಕೆ ಮತ್ತಿಮೂಡ ಹಾಗೂ ಗುತ್ತೇದಾರ ಮಂಗಳವಾರ ನಗರಕ್ಕೆ ವಾಪಸಾದರು. ಆದರೆ, ದತ್ತಾತ್ರೇಯ‍ಪಾಟೀಲ ರೇವೂರ ಹಾಗೂ ರಾಜಕುಮಾರ ಪಾಟೀಲ ತೆಲ್ಕೂರ ಮಂಗಳವಾರ ಸಂಜೆಯವರೆಗೂ ಬೆಂಗಳೂರಿನಲ್ಲೇ ಇದ್ದರು’ ಎಂದು ಬಿಜೆಪಿ ಮೂಲಗಳ ಮಾಹಿತಿ.

ADVERTISEMENT

ಶಾಸಕರ ಈ ನಡೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಕಸಾಪ ಪದಾಧಿಕಾರಿಯೂ ಆಗಿರುವ ಹಿರಿಯ ಸಾಹಿತಿಯೊಬ್ಬರು, ‘ಕಲಬುರ್ಗಿಯಲ್ಲಿ ಸಮ್ಮೇಳನ ನಡೆಯುತ್ತಿರುವುದರಿಂದ ಇಲ್ಲಿನ ಜನಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆ ಅತ್ಯಗತ್ಯ. ಈ ರೀತಿಯ ವರ್ತನೆ ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು.

ಪತ್ರಿಕಾಗೋಷ್ಠಿ ದಿಢೀರ್ ರದ್ದು: ‌‘ಸಮ್ಮೇಳನದ ಆಹಾರ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಬಸವರಾಜ ಮತ್ತಿಮೂಡ ಅವರು ಅದರ ಸಿದ್ಧತೆ ಕುರಿತು ಮಾಹಿತಿ ನೀಡಲು ಫೆ 3ರಂದು ಮಧ್ಯಾಹ್ನ ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಆದರೆ, ಸಚಿವಸ್ಥಾನ ಕೇಳುವುದಕ್ಕಾಗಿ ಬೆಂಗಳೂರಿಗೆ ತೆರಳಬೇಕಿದ್ದರಿಂದ ಪತ್ರಿಕಾಗೋಷ್ಠಿಯನ್ನೇ ರದ್ದುಪಡಿಸಿದರು. ವೇದಿಕೆ ಸಮಿತಿ ಅಧ್ಯಕ್ಷರಾಗಿರುವ ದತ್ತಾತ್ರೇಯ ಪಾಟೀಲ ರೇವೂರ ಇಲ್ಲಿಯವರೆಗೂ ಸಮಿತಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ’ ಎಂಬುದು ಮೂಲಗಳ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.