ADVERTISEMENT

ಚಿಂಚೋಳಿ | ಲಾಕ್‌ಡೌನ್‌ ಪರಿಣಾಮ ರೈತರಿಗೆ ಕಹಿಯಾದ ಕಲ್ಲಂಗಡಿ

ಕಡಿಮೆಯಾದ ಹಣ್ಣುಗಳ ಬೇಡಿಕೆ

ಜಗನ್ನಾಥ ಡಿ.ಶೇರಿಕಾರ
Published 10 ಮೇ 2020, 19:30 IST
Last Updated 10 ಮೇ 2020, 19:30 IST
ಚಿಂಚೋಳಿ ತಾಲ್ಲೂಕು ನರನಾಳ್ ಗ್ರಾಮದ ತಮ್ಮ ತೋಟದಲ್ಲಿ ಕಲ್ಲಂಗಡಿ ಬೆಳೆದ ಶಾಂತುರೆಡ್ಡಿ ನರನಾಳ್
ಚಿಂಚೋಳಿ ತಾಲ್ಲೂಕು ನರನಾಳ್ ಗ್ರಾಮದ ತಮ್ಮ ತೋಟದಲ್ಲಿ ಕಲ್ಲಂಗಡಿ ಬೆಳೆದ ಶಾಂತುರೆಡ್ಡಿ ನರನಾಳ್   

ಚಿಂಚೋಳಿ: ರಂಜಾನ್‌ ಮಾಸದಲ್ಲಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಎಂಬ ಮುಂದಾಲೋಚಯಿಂದ ಕಲ್ಲಂಗಡಿ ಬೆಳೆದ ರೈತರು ಈ ಬಾರಿ ಕಂಗಾಲಾಗಿದ್ದಾರೆ. ಕೊರೊನಾ ಹಿನ್ನೆಲೆಯ ಲಾಕ್‌ಡೌನ್‌ನಿಂದಾಗಿ ಕಲ್ಲಂಗಡಿ ಹಣ್ಣುಗಳನ್ನು ಕೇಳುವವರೇ ಇಲ್ಲ ಎಂಬಂತಾಗಿದೆ.

ತಾಲ್ಲೂಕಿನಲ್ಲಿ ಸುಮಾರು 200ಕ್ಕೂ ಹೆಚ್ಚು ರೈತರು ಕಲ್ಲಂಗಡಿ ಬೆಳೆದು ಕೈಸುಟ್ಟುಕೊಂಡಿದ್ದಾರೆ.

ನರನಾಳ್ ಗ್ರಾಮದ ರೈತ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಾಂತುರೆಡ್ಡಿ ನರನಾಳ್ ತಮ್ಮ ತೋಟದಲ್ಲಿ ಒಂದು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಲ್ಲಂಗಡಿಗೆ ಬೆಲೆ ಸಿಗದೆ ನಷ್ಟ ಅನುಭವಿಸಿದ್ದಾರೆ. ಕಲ್ಲಂಗಡಿ ಬೆಳೆದು ಬಂಪರ್ ಆದಾಯ ಗಳಿಸಿದ ರೈತರ ಯಶೋಗಾಥೆಯಿಂದ ಪ್ರೇರಣೆ ಪಡೆದು ಮೊದಲ ಬಾರಿಗೆ ಕಲ್ಲಂಗಡಿ ಬೆಳೆದಿರುವ ಶಾಂತುರೆಡ್ಡಿ ನರನಾಳ್ ನಷ್ಟಕ್ಕೆ ಗುರಿಯಾಗಿದ್ದಾರೆ.

ADVERTISEMENT

ಭಾರಿ ಬಿಸಿಲಿನಿಂದ ಹೊಲದಲ್ಲಿಯೇ ಶೇ 50 ರಷ್ಟು ಕಲ್ಲಂಗಡಿ ಹಣ್ಣುಗಳು ಕೊಳೆತುಹೋದರೆ, ಉಳಿದ ಹಣ್ಣುಗಳನ್ನು ಕೆ.ಜಿ.ಗೆ ₹ 5 ದರದಲ್ಲಿ ಕಲಬುರ್ಗಿ ಮತ್ತು ಹೈದರಾಬಾದ್‌ಗೆ ಮಾರಾಟ ಮಾಡಿದ್ದಾರೆ. ಸರಿ ಸುಮಾರು 25 ಟನ್ ಹಣ್ಣು ಮಾರಾಟ ಮಾಡಿದ್ದಾರೆ. ಆದರೆ ಅಷ್ಟೇ ಪ್ರಮಾಣದ ಹಣ್ಣುಗಳು ತೊಟದಲ್ಲಿಯೇ ಕೇಳುವವರಿಲ್ಲದೇ ಕೊಳೆತುಹೋಗಿವೆ.

ಕಲ್ಲಂಗಡಿ ಬೆಳೆ ಬೆಳೆಯಲು ಮಾಡಿದ ಖರ್ಚು ಬಂದರೆ ಸಾಕು ಎಂದು ಅಲವತ್ತುಕೊಂಡಿದ್ದಾರೆ.‌ ‘₹1.5 ಲಕ್ಷ ಖರ್ಚು ಮಾಡಿ 1 ಲಕ್ಷ ಆದಾಯ ಪಡೆದಿದ್ದೇವೆ. ಕೊರೊನಾ ಇಲ್ಲದೆ ಹೋಗಿದ್ದರೆ ನಮಗೆ ದುಪ್ಪಟ್ಟು ಆದಾಯ ಬರುತ್ತಿತ್ತು’ ಎಂದು ಶಾಂತುರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.