ಕಲಬುರಗಿ: ‘ಹೃದಯರೋಗಗಳಿಗೆ ಸಂಬಂಧಿಸಿದ ಚಿಕಿತ್ಸೆಯಲ್ಲಿ ಸಾಕಷ್ಟು ಸುಧಾರಿತ ಬದಲಾವಣೆಗಳಾಗಿವೆ’ ಎಂದು ಮುಂಬೈನ ಬಾಂಬೆ ಆಸ್ಪತ್ರೆ ಮತ್ತು ಠಾಣೆಯ ಜುಪಿಟರ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಬಿ.ಸಿ. ಕಲ್ಮಠ ಹೇಳಿದರು.
ನಗರದ ಕೆಬಿಎನ್ ಆಸ್ಪತ್ರೆಯ ಸಭಾಂಗಣದಲ್ಲಿ ಬುಧವಾರ ಡಾ. ಪಿ.ಎಸ್. ಶಂಕರ್ ಪ್ರತಿಷ್ಠಾನದ ಸಹಯೋಗದಲ್ಲಿ ಡಾ.ಆನಂದ ಶಂಕರ್ ಮತ್ತು ಕುಟುಂಬದ ವತಿಯಿಂದ ಡಾ. ಎ.ಶಿವಶಂಕರ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ 4ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ‘ಇಂಟರ್‌ವೆನ್ಶನಲ್ ಕಾರ್ಡಿಯಾಲಜಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.
‘1994–95ರಲ್ಲಿ ಹೃದಯರೋಗ ಚಿಕಿತ್ಸೆ ಬಹುಬೇಡಿಕೆಯ ಕೆಲಸವಾಗಿತ್ತು. ತಜ್ಞರು ದಿನವಿಡೀ ಕಾರ್ಯನಿರ್ವಹಿಸಿದರೂ ಸಮಯ ಸಾಕಾಗುತ್ತಿರಲಿಲ್ಲ. ಭಾರತದಲ್ಲಿ ಶೇ 8ರಿಂದ 10ರಷ್ಟು ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಜನ ಹೃದಯ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳುತ್ತಿದ್ದರು’ ಎಂದರು.
‘ಹೃದಯ ಕಸಿ ಮಾಡುವುದು ಸುಲಭದ ಕೆಲಸವಲ್ಲ. ಹೃದಯದ ಎಂಆರ್‌ಐ ಸ್ಕ್ಯಾನಿಂಗ್ ಮೊದಲು ಕಷ್ಟಸಾಧ್ಯವಾಗಿತ್ತು. ಇತ್ತೀಚಿನ ತಂತ್ರಜ್ಞಾನ ಅಭಿವೃದ್ಧಿಯಿಂದ ಎಂಆರ್‌ಐ ಸ್ಕ್ಯಾನ್ ಕೂಡ ಮಾಡಬಹುದಾಗಿದೆ. ಭವಿಷ್ಯದಲ್ಲಿ ಎಐ ತಂತ್ರಜ್ಞಾನವನ್ನು ಕೂಡ ಈ ಕ್ಷೇತ್ರದಲ್ಲಿ ಬಳಸಿಕೊಳ್ಳಬಹುದು’ ಎಂದು ತಿಳಿಸಿದರು.
ರೋಗಿಗಳಿಗೆ ಹೃದಯಾಘಾತ ಮತ್ತು ಹೃದಯದ ಕಾರ್ಯಕ್ಷಮತೆ ಕಡಿಮೆಯಾದಾಗ ವೈದ್ಯರು ನೀಡಬೇಕಾದ ಚಿಕಿತ್ಸೆ ಮತ್ತು ವಿಧಾನಗಳ ಕುರಿತು ಡಾ. ಬಿ.ಸಿ. ಕಲ್ಮಠ ಉದಾಹರಣೆ ಸಹಿತ ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಪಿಐ ರಾಜ್ಯ ಸಮಿತಿ ಅಧ್ಯಕ್ಷ ಡಾ.ಸುರೇಶ ವಿ.ಸಗರದ ಮಾತನಾಡಿ, ‘ಕನ್ನಡ ವೈದ್ಯ ಸಾಹಿತ್ಯವನ್ನು ಬೆಳೆಸಿದವರಲ್ಲಿ ಡಾ. ಪಿ.ಎಸ್. ಶಂಕರ್ ಮೊದಲಿಗರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೃದಯರೋಗಕ್ಕೆ ಸಂಬಂಧಪಟ್ಟ ಚಿಕಿತ್ಸಾ ಸೌಲಭ್ಯಗಳಲ್ಲಿ ಸಾಕಷ್ಟು ಬೆಳವಣಿಗೆ ಆಗಿದೆ’ ಎಂದರು.
ಡಾ. ಎ.ಶಿವಶಂಕರ ಅವರ ಪುತ್ರರೂ ಆದ ಡಾ. ಆನಂದ ಶಂಕರ ಮಾತನಾಡಿ, ‘ಶಿಷ್ಯ ತನ್ನ ತರ್ಕಬದ್ಧ ವಿಚಾರಗಳಿಂದ ಗುರುವನ್ನು ಪರಾಜಿತಗೊಳಿಸಿದಲ್ಲಿ, ಅದರಂತೆ ಗುರು ತನ್ನ ಶಿಷ್ಯನ ತರ್ಕಬದ್ಧ ವಿಚಾರಗಳನ್ನು ಎತ್ತಿಹಿಡಿದು ಪ್ರೋತ್ಸಾಹಿಸಬೇಕು’ ಎಂದರು.
ಕೆಬಿಎನ್ ಆಸ್ಪತ್ರೆಯ ಹಿರಿಯ ಸಿಇಒ ಡಾ. ಪಿ.ಎಸ್. ಶಂಕರ್, ಕೆಬಿಎನ್ ವಿಶ್ವವಿದ್ಯಾಲಯದ ಎಫ್‌ಒಎಂ ವಿಭಾಗದ ಡೀನ್ ಗುರುಪ್ರಸಾದ ಕೆ.ವೈ., ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ. ಎಚ್.ವೀರಭದ್ರಪ್ಪ ಉಪಸ್ಥಿತರಿದ್ದರು.
ರಾಜಶ್ರೀ ಖಜೂರಿ ನಾಡಗೀತೆ ಹಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಬಡಶೇಷಿ ಸ್ವಾಗತಿಸಿದರು. ಡಾ. ಶ್ರೀರಾಜ ನಿರೂಪಿಸಿದರು. ಡಾ.ಮೊಹ್ಮದ್ ಮುಸ್ತಾಕ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.