ADVERTISEMENT

ಕಲಬುರಗಿ ಲೋಕಸಭಾ ಕ್ಷೇತ್ರ: ಖರ್ಗೆ ತವರಲ್ಲಿ ನಡೆಯುವುದೇ ಮೋದಿ ಮೋಡಿ?

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 0:05 IST
Last Updated 3 ಏಪ್ರಿಲ್ 2024, 0:05 IST
   

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಅಖಾಡಕ್ಕೆ ಇಳಿದಿದ್ದಾರೆ. ಖರ್ಗೆ ಅವರ ಪ್ರತಿಷ್ಠೆಯನ್ನು ಉಳಿಸಲು ರಾಧಾಕೃಷ್ಣ ಅವರನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆಗೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಸಿಲುಕಿದ್ದಾರೆ.

ಮತ್ತೊಂದೆಡೆ ಹಾಲಿ ಸಂಸದ ಬಿಜೆಪಿಯ ಡಾ.ಉಮೇಶ ಜಾಧವ ಚುನಾವಣೆ ಘೋಷಣೆಗೆ ಮುನ್ನವೇ ಎರಡು ಸುತ್ತು ಪ್ರಚಾರ ಮುಗಿಸಿದ್ದು ಪುನರಾಯ್ಕೆಯಾಗುವ ವಿಶ್ವಾಸದಲ್ಲಿದ್ದಾರೆ. 

ಖರ್ಗೆ ಅವರ ಹಿಂದಿನ ಚುನಾವಣೆಗಳಲ್ಲಿ ಪರದೆಯ ಹಿಂದೆ ನಿಂತು ತಂತ್ರಗಾರಿಕೆ ರೂಪಿಸಿದ್ದು ಇದೇ ರಾಧಾಕೃಷ್ಣ ಅವರು. ಈ ಬಾರಿ ಕೊನೆಗಳಿಗೆಯಲ್ಲಿ ಪಕ್ಷವು ಅವರನ್ನು ಕಣಕ್ಕಿಳಿಸಿದ್ದು, ಈಗಷ್ಟೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು, ಜಿಲ್ಲೆಯಲ್ಲಿ ಪಕ್ಷದ ಏಳು ಶಾಸಕರ ಬಲ, ಪರಿಶಿಷ್ಟ ಬಲಗೈ ಸಮುದಾಯ ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿರುವುದರ ಜೊತೆಗೆ ಖರ್ಗೆ ಅವರ ವರ್ಚಸ್ಸನ್ನು ನೆಚ್ಚಿಕೊಂಡು ಚುನಾವಣೆಯನ್ನು ಎದುರಿಸುತ್ತಿದ್ದಾರೆ.

ADVERTISEMENT

ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ ಅವರು ಮೋದಿ ‘ನಾಮಬಲ’ವನ್ನು ನೆಚ್ಚಿಕೊಂಡಿದ್ದಾರೆ. 2019ರಲ್ಲಿ ಇದ್ದಷ್ಟು ‘ಮೋದಿ ಹವಾ’ ಈ ಬಾರಿ ಕ್ಷೇತ್ರದಲ್ಲಿ ಕಂಡು ಬರುತ್ತಿಲ್ಲ. ಅಲ್ಲದೇ, ಬಿಜೆಪಿ ಶಾಸಕರ ಬಲವೂ ಕುಸಿದಿದೆ. ಜಿಲ್ಲೆಗೆ ಘೋಷಣೆಯಾಗಿರುವ ಮೆಗಾ ಟೆಕ್ಸ್‌ಟೈಲ್ ಪಾರ್ಕ್, ವಂದೇ ಭಾರತ್ ರೈಲು ಆರಂಭ, ಭಾರತ್ ಮಾಲಾ ಯೋಜನೆ ಸೇರಿದಂತೆ ಕೆಲವು ಸಾಧನೆಗಳನ್ನು ಹೇಳಿಕೊಂಡು ಚುನಾವಣೆ ಎದುರಿಸಬೇಕಿದೆ.

ಕ್ಷೇತ್ರ: ಕಲಬುರಗಿ

ಅಭ್ಯರ್ಥಿಗಳು

ಡಾ. ಉಮೇಶ ಜಾಧವ (ಬಿಜೆಪಿ)

ರಾಧಾಕೃಷ್ಣ ದೊಡ್ಡಮನಿ (ಕಾಂಗ್ರೆಸ್‌)

ವಿಧಾನಸಭೆ ಕ್ಷೇತ್ರಗಳ ಪಕ್ಷವಾರು ಪ್ರಾತಿನಿಧ್ಯ

ಕಾಂಗ್ರೆಸ್‌ 6

ಬಿಜೆಪಿ 1

ಜೆಡಿಎಸ್‌ 1

ಮತದಾರರ ಸಂಖ್ಯೆ

ಪುರುಷರು– 1034005

ಮಹಿಳೆಯರು–1030677

ಲಿಂಗತ್ವ ಅಲ್ಪಸಂಖ್ಯಾತರು– 336

ಒಟ್ಟು– 2065018

ಹಿಂದಿನ ಚುನಾವಣೆ ಮಾಹಿತಿ 2019;

ಹೆಸರು;ಪಕ್ಷ;ಪಡೆದ ಮತಗಳು ಗೆದ್ದವರು;

ಡಾ.ಉಮೇಶ ಜಾಧವ;ಬಿಜೆಪಿ;620192

ಸಮೀಪದ ಪ್ರತಿಸ್ಪರ್ಧಿ;ಮಲ್ಲಿಕಾರ್ಜುನ ಖರ್ಗೆ;ಕಾಂಗ್ರೆಸ್;524740

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.