ವಾಡಿ: ಅತ್ಯಂತ ಕಡಿಮೆ ಜಾಗದಲ್ಲಿ ವೇಗವಾಗಿ, ದಟ್ಟವಾಗಿ ಸೃಷ್ಟಿಯಾಗುವ ಮಿಯಾವಾಕಿ ಅರಣ್ಯ, ಚಿಟ್ಟೆ ಪಾರ್ಕ್, ಗ್ರಂಥಾಲಯ, ಕೃತಕ ಜಲಪಾತ, ಮರದ ಸೇತುವೆ, ವಾಯುವಿಹಾರ, ಮಕ್ಕಳ ಮನೋರಂಜನೆಗೆಂದು ತರಹೇವಾರಿ ಕ್ರೀಡಾ ಪರಿಕರಗಳು...
ಇವು ಅರಣ್ಯ ಇಲಾಖೆಯಿಂದ 13.81 ಹೆಕ್ಟೇರ್ ಪ್ರದೇಶದಲ್ಲಿ ಕಲಬುರಗಿ ಸೇಡಂ ರಾಷ್ಟ್ರೀಯ ಹೆದ್ದಾರಿ ಗುಂಡುಗುರ್ತಿ ಹತ್ತಿರ ನಿರ್ಮಿಸಿರುವ ಲುಂಬಿನಿ ಉದ್ಯಾನ ಪ್ರಮುಖ ಆಕರ್ಷಣೆಗಳು.
ಚಿತ್ತಾಪುರ ತಾಲ್ಲೂಕಿನ ನೂರಾರು ಶಾಲೆಯ ವಿದ್ಯಾರ್ಥಿಗಳ ಮನೋರಂಜನೆ ಜತೆಗೆ ವೈಜ್ಞಾನಿಕ ಜ್ಞಾನಾರ್ಜನೆಗೆ ನಿರ್ಮಿಸಲಾಗುತ್ತಿರುವ ಲುಂಬಿನಿ ಉದ್ಯಾನ ಹಲವು ವಿಶಿಷ್ಟತೆಯಿಂದ ಗಮನ ಸೆಳೆಯುವಂತೆ ರೂಪುಗೊಂಡಿದೆ. ಉದ್ದೇಶಿತ ಪ್ರಾಣಿ ಸಂಗ್ರಹಾಲಯದ ಹತ್ತಿರ ನಿರ್ಮಿಸಿರುವ ಉದ್ಯಾನವನ್ನು ಜ.26ರಂದು ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟಿಸಲಿದ್ದಾರೆ.
ಅರಣ್ಯ ಇಲಾಖೆಯ ₹50 ಲಕ್ಷ ಹಾಗೂ ಡಿಎಂಎಫ್ ಫಂಡ್‌ನ ₹1 ಕೋಟಿ ವೆಚ್ಚದ ಯೋಜನೆ ಇದಾಗಿದೆ. ಚಿತ್ತಾಪುರ ತಾಲ್ಲೂಕು ಪ್ರವಾಸಿ ತಾಣವನ್ನಾಗಿಸಲು ಉದ್ಯಾನ ಹಾಗೂ ಪ್ರಾಣಿ ಸಂಗ್ರಹಾಲಯ ನಿರ್ಮಾಣ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಚಿಟ್ಟೆ ಪಾರ್ಕ್: ಚಿಟ್ಟೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಚಿಟ್ಟೆ ಪಾರ್ಕ್ ನಿರ್ಮಿಸಲಾಗಿದೆ. ಒಟ್ಟು 51 ಬಗೆಯ ಚಿಟ್ಟೆಗಳನ್ನು ಗುರುತಿಸಲಾಗಿದೆ. ಅವು ಇಲ್ಲಿಯೇ ಉಳಿದುಕೊಳ್ಳಲು ಅವಶ್ಯಕವಾದ ಮರಗಿಡಗಳು ಹಾಗೂ ಹೂವಿನ ಗಿಡಗಳನ್ನು ಹಾಕಲಾಗಿದ್ದು ಕಾಯಂ ಅವಾಸಸ್ಥಾನವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಮಿಯಾವಾಕಿ ಮಾದರಿ: ಜಪಾನ್ ಮಾದರಿಯ ಮಿಯಾವಾಕಿ ಮಾದರಿ ಅರಣ್ಯ ಗುಂಡುಗುರ್ತಿ ಲುಂಬಿನಿ ಉದ್ಯಾನದಲ್ಲಿ ನಿರ್ಮಿಸಲಾಗುತ್ತಿದೆ. ಕಡಿಮೆ ಸ್ಥಳದಲ್ಲಿ ದಟ್ಟ ಅರಣ್ಯ ಬೆಳೆಸುವುದು. ಆ ಮೂಲಕ ಸಾರ್ವಜನಿಕರಿಗೆ ಅರಣ್ಯದ ಲಾಭಗಳ ಕುರಿತು ಪ್ರಾತ್ಯಕ್ಷಿಕೆ ತೋರಿಸುವುದು ಯೋಜನೆ ಉದ್ದೇಶವಾಗಿದೆ.
ಅಂಫಿ ಥಿಯೇಟರ್: 150 ಜನರು ಕುಳಿತುಕೊಂಡು ಥಿಯೇಟರ್‌ನಲ್ಲಿ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ. ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳ ಜ್ಞಾನಕ್ಕೆ ಇದು ಅನುಕೂಲವಾಗಲಿದೆ.
ಪ್ರಾಣಿ ಸಂಗ್ರಹಾಲಯ ಸಿದ್ಧಗೊಂಡಿದ್ದು, ಎರಡ್ಮೂರು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿವೆ. ಉದ್ಯಾನ ಹಾಗೂ ಪ್ರಾಣಿ ಸಂಗ್ರಹಾಲಯ ಒಂದಕ್ಕೊಂದು ಪೂರಕವಾಗಿರಲಿವೆ. ಪ್ರಾಣಿ ಸಂಗ್ರಹಾಲಯದ ಕಾಮಗಾರಿ ಭರದಿಂದ ಸಾಗಿದೆ.
ಹೆದ್ದಾರಿಗೆ ಹೊಂದಿಕೊಂಡು ಉದ್ಯಾನ ಪ್ರಾಣಿ ಸಂಗ್ರಹಾಲಯ ನಿರ್ಮಿಸುವುದರಿಂದ ವ್ಯಾಪಾರ ವಹಿವಾಟಿನಂತಹ ಆರ್ಥಿಕ ಚಟುವಟಿಕೆಗಳು ಗರಿಗೆದರಿ ಹಲವರಿಗೆ ಉದ್ಯೋಗ ಸಿಗಲಿದೆ-ಪ್ರಿಯಾಂಕ್ ಖರ್ಗೆ, ಸಚಿವ
1500 ವಿವಿಧ ಬಗೆಯ ಗಿಡಗಳು ಹಾಗೂ 4000ಕ್ಕೂ ಹೆಚ್ಚು ವಿವಿಧ ಹೂವಿನ ಗಿಡಗಳನ್ನು ಹಾಕುವ ಉದ್ದೇಶವಿದೆ. ಇದೊಂದು ಪ್ರವಾಸಿ ಹಾಗೂ ಅಧ್ಯಯನ ತಾಣವಾಗಲಿದೆ- ಸುಮಿತ್ ಕುಮಾರ, ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಕಲಬುರಗಿ
ಚಿತ್ತಾಪುರ ಚಿಂಚೋಳಿ ಸೇಡಂ ಸಹಿತ ಜಿಲ್ಲೆಯ ವಿವಿಧೆಡೆಯಿಂದ ಉದ್ಯಾನ ಪ್ರಾಣಿ ಸಂಗ್ರಹಾಲಯ ವೀಕ್ಷಿಸಲು ಜನರು ಬರುವ ನಿಟ್ಟಿನಲ್ಲಿ ಆಕರ್ಷಣೀಯಗೊಳಿಸಲಾಗುತ್ತಿದೆ-ವಿಜಯಕುಮಾರ ಬಡಿಗೇರ, ವಲಯ ಅರಣ್ಯಾಧಿಕಾರಿ ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.