ADVERTISEMENT

ಸಣ್ಣಪುಟ್ಟ ಸಮುದಾಯಗಳಿಗೂ ಆದ್ಯತೆ; ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 5:49 IST
Last Updated 11 ಜನವರಿ 2023, 5:49 IST
ಕಲಬುರಗಿಗೆ ಆಗಮಿಸಿದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಅವರನ್ನು ಜಿಲ್ಲಾ ಮುಖಂಡರು ಮಂಗಳವಾರ ಸನ್ಮಾನಿಸಿದರು
ಕಲಬುರಗಿಗೆ ಆಗಮಿಸಿದ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಅವರನ್ನು ಜಿಲ್ಲಾ ಮುಖಂಡರು ಮಂಗಳವಾರ ಸನ್ಮಾನಿಸಿದರು   

ಕಲಬುರಗಿ: ‘ದಶಕಗಳಿಂದ ಕಾಂಗ್ರೆಸ್‌ ಪಕ್ಷದ ಬೆನ್ನೆಲುಬು ಆಗಿರುವ ಹಿಂದುಳಿದ ಮತ್ತು ಸಣ್ಣಪುಟ್ಟ ಸಮುದಾಯಗಳಿಗೆ ಆದ್ಯತೆ ನೀಡಿ, ಅಧಿಕಾರದಲ್ಲಿ ಪಾಲುದಾರಿಕೆ ಕೊಟ್ಟು ಅವರ ಶಕ್ತಿ ತುಂಬಬೇಕಿದೆ’ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

‘ಸಣ್ಣ ಸಮುದಾಯಗಳನ್ನು ಮುಂಚೂಣಿಗೆ ತರಲು ಪಕ್ಷದಲ್ಲಿ ಉತ್ತಮ ಹುದ್ದೆಗಳನ್ನು ಕೊಟ್ಟು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ರಾಜಕೀಯವಾಗಿ ಬೆಳೆಯಲು ಕಷ್ಟವಾಗುತ್ತದೆ. ಹೀಗಾಗಿ, ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಒಬಿಸಿ ವಿಭಾಗವನ್ನು ಇನ್ನಷ್ಟು ಬಲಪಡಿಸುವ ಕೆಲಸ ಮಾಡುತ್ತಿದ್ದೇನೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದಲ್ಲಿ ಶೇ 55ರಷ್ಟು ಒಬಿಸಿ ಮತದಾರರು ಇದ್ದಾರೆ. ಗೆಲುವಿನ ಮಾನದಂಡಗಳ ಆಧಾರದ ಮೇಲೆ ಒಬಿಸಿಯ ಟಿಕೆಟ್‌ ಆಕಾಂಕ್ಷಿಗಳಿಗೆ ಟಿಕೆಟ್ ಕೊಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಲಾಗುವುದು’ ಎಂದರು.

ADVERTISEMENT

‘ಪಕ್ಷ ಸಂಘಟನೆಗಾಗಿ ಫೆಬ್ರುವರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ಥಳೀಯ ನಾಯಕರ ನೇತೃತ್ವದಲ್ಲಿ ಒಬಿಸಿ ಸಮಾವೇಶ ನಡೆಸಲಾಗುವುದು. ಜಿಲ್ಲಾ ಮಟ್ಟದ ಸಮಾವೇಶಗಳು ಮುಗಿದ ಬಳಿಕ ಮಧ್ಯ ಕರ್ನಾಟಕದ ಯಾವುದಾದರು ಒಂದು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

‘ವಿಧಾನಸಭೆ ಚುನಾವಣೆಯ ಪ್ರಣಾಳಿಕೆ ಸಮಿತಿಗೆ ಡಾ. ಪರಮೇಶ್ವರ ಅಧ್ಯಕ್ಷರಾಗಿದ್ದು, ನಾನು ಉಪಾಧ್ಯಕ್ಷನಾಗಿದ್ದೇನೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜನರು ನೀಡುವ ಸಲಹೆ, ಅಭಿಪ್ರಾಯಗಳನ್ನು ಪರಿಗಣಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕ, ಕರಾವಳಿ ಭಾಗಕ್ಕೆ ಅನುಕೂಲ ಆಗುವಂತಹ ಅಂಶಗಳು ಸಹ ಪ್ರಣಾಳಿಕೆಯಲ್ಲಿ ಇರಲಿವೆ’ ಎಂದರು.

‘ಆರಂಭದಿಂದಲೂ ಕಾಂಗ್ರೆಸ್ ಜನಪರ ಆಡಳಿತ ನಡೆಸಿದೆ. ಡಿ.ದೇವರಾಜು ಅರಸು ಆಡಳಿತದಲ್ಲಿ ಭೂಹಕ್ಕು, ಎಸ್‌.ಬಂಗಾರಪ್ಪ ಕಾಲದಲ್ಲಿ ಬಗರ್ ಹುಕುಂ ಅಂತಹ ಬಡವರ ಪರವಾದ ಯೋಜನೆಗಳು ನೀಡಿತ್ತು. ಈಗಿನ ಬಿಜೆಪಿ ಸರ್ಕಾರವು ಕಾಂಗ್ರೆಸ್ ಜಾರಿಗೆ ತಂದಿದ್ದ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಿದ್ದರೆ ಬಡವರಿಗೆ ಅನುಕೂಲ ಆಗುತ್ತಿತ್ತು’ ಎಂದರು.

ಶಾಸಕ ಎಂ.ವೈ. ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣು ಮೋದಿ, ಮುಖಂಡರಾದ ಬಿ.ಆರ್.ಪಾಟೀಲ, ಮಲ್ಲಿಕಾರ್ಜುನ ಪೂಜಾರಿ, ಸಂತೋಷ ಬಿಳಗುಂದಿ, ಶಿವಾನಂದ ಪಾಟೀಲ, ಜೆ.ಎಂ.ಕೊರಬು, ಅರುಣಕುಮಾರ ಇದ್ದರು.

ಜಿಲ್ಲಾ ಪದಾಧಿಕಾರಿಗಳ ನೇಮಕಕ್ಕೆ ಸೂಚನೆ

‘ಒಬಿಸಿ ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ನೇಮಕ ಮಾಡಿ, ರಾಜ್ಯ ವಿಭಾಗಕ್ಕೆ ಜಿಲ್ಲೆಯಿಂದ ಇಬ್ಬರು ಪದಾಧಿಕಾರಿಗಳ ಹೆಸರಗಳನ್ನು ಎರಡು ವಾರದ ಒಳಗೆ ಕಳುಹಿಸಬೇಕು’ ಎಂದು ಮಧು ಬಂಗಾರಪ್ಪ ಸೂಚಿಸಿದರು.

ಒಬಿಸಿ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಮುಂಬರುವ ಚುನಾವಣೆಯ ದೃಷ್ಟಿ ಇರಿಸಿಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕು. ಫೆ.15ರ ಒಳಗೆ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಒಬಿಸಿ ಸಮಾವೇಶ ನಡೆಸಬೇಕು’ ಎಂದರು.

‘ಪಕ್ಷಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ಬ್ಲಾಕ್ ಮಟ್ಟದಲ್ಲಿ ಅಗತ್ಯ ಇದ್ದರೆ ಹೊಸ ಸಂಘಟನೆ ರಚಿಸಿಕೊಳ್ಳಬಹುದು. ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕ ಸಾಧಿಸಬೇಕು’ ಎಂದರು.

ಮುಖಂಡರಾದ ಅಲ್ಲಮಪ್ರಭು ಪಾಟೀಲ, ರಾಜಗೋಪಾಲ ರೆಡ್ಡಿ, ಜಗದೇವ ಗುತ್ತೇದಾರ, ಬಸವರಾಜ ಬೂದಿಹಾಳ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.