ಕಲಬುರಗಿ: ‘ಆಡಳಿತರೂಢ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆಯುತ್ತಿದೆ. ಮಧುಬಲೆಯು ಇದಕ್ಕೆ ಸುತ್ತುವರಿದ ಪ್ರಕರಣವಾಗಿದೆ. ಸಚಿವರು ದೂರು ಕೊಟ್ಟ ಮೇಲೆ ಏನಾಗುತ್ತದೆ ನೋಡೋಣ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಲ್ಲಿನ ಆಂತರಿಕ ಗೊಂದಲದಿಂದಾಗಿ ಇಂತಹ ಪ್ರಕರಣಗಳು ಹೊರ ಬರುತ್ತಿವೆ. ಕೆಲ ತಿಂಗಳ ಹಿಂದೆಯೇ ನಾನು ರಾಜಕೀಯ ಕ್ಷಿಪ್ರ ಬೆಳವಣಿಗೆ ಆಗಲಿದೆ ಎಂದು ಹೇಳಿದ್ದೆ. ಅದನ್ನು ಈಗ ನೋಡುತ್ತಿದ್ದೇವೆ. ಮಧುಬಲೆಯ ಬಗ್ಗೆ ಈಗಾಗಲೇ ಸದನದಲ್ಲಿ ಚರ್ಚೆಯಾಗಿದ್ದು, ಸಹಕಾರ ಸಚಿವರ ಕೆ.ಎನ್. ರಾಜಣ್ಣ ಅವರು ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ’ ಎಂದರು.
‘ಸರ್ಕಾರದ ಅಲ್ಪಸಂಖ್ಯಾತರ ಓಲೈಕೆ ಬಗ್ಗೆ ನಾವು ಹೋರಾಡಲು ಮುಂದಾಗಿದ್ದರಿಂದ ನಮ್ಮ 18 ಶಾಸಕರನ್ನು ಅಮಾನತು ಮಾಡಿ ವಿಧಾನ ಸಭಾಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಶಾಸಕರ ವರ್ತನೆ ಸರಿಯಿಲ್ಲ ಎನ್ನುವ ಅಭಿಪ್ರಾಯ ಬಂದಿದ್ದರೇ ಅವರ ಅಧಿಕಾರಕ್ಕೆ ಸಿಮೀತವಾಗಿ ಆದೇಶ ಮಾಡಬೇಕಾಗಿತ್ತು. ಷರತ್ತುಗಳನ್ನು ವಿಧಿಸಿ 6 ತಿಂಗಳು ಅಮಾನತು ಮಾಡಿದ್ದು ಕಾನೂನುಬಾಹಿರ. ಇದು ಶಾಸಕರ ಆಯಾ ಕ್ಷೇತ್ರಗಳ ಮತದಾರರಿಗೆ ಮಾಡಿದ ಅಪಮಾನ. ಕೂಡಲೇ ಸಭಾಧ್ಯಕರು ತಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು’ ಎಂದು ಹೇಳಿದರು.
ಮದುವೆ ನಿಶ್ಚಯ; ವಿಎಚ್‌ಪಿ ಉತ್ತರ ಪ್ರಾಂತ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಅವರ ಪುತ್ರಿಯನ್ನು ಸಂಸದ ಬಿ.ವೈ. ರಾಘವೇಂದ್ರ ಅವರ ಪುತ್ರ ಸುಭಾಷ್ ಅವರೊಂದಿಗೆ ಮದುವೆ ನಿಶ್ಚಯದ ಕುರಿತು ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಲಿಂಗರಾಜಪ್ಪ ಅವರ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಕಲಬುರಗಿಯ ಯುವತಿ ವರಿಸಲಿರುವ ಬಿಎಸ್‌ವೈ ಮೊಮ್ಮಗ ಈಗಾಗಲೇ ಪುತ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಕಲಬುರಗಿಯ ಶಿವಾನಂದ ಮಾನಕರ ಪುತ್ರಿಯನ್ನು ಸೊಸೆಯನ್ನಾಗಿ ತಂದುಕೊಂಡಿರುವ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಇದೀಗ ಮೊಮ್ಮಗ (ಸಂಸದ ಬಿ.ವೈ. ರಾಘವೇಂದ್ರ ಪುತ್ರ) ಸುಭಾಷ್ ಅವರಿಗೂ ಕಲಬುರಗಿಯ ಯುವತಿಯನ್ನು ಗೊತ್ತು ಮಾಡಿದ್ದಾರೆ. ಶರಣಬಸವೇಶ್ವರ ಸಂಸ್ಥಾನದ ಕುಟುಂಬಕ್ಕೆ ಸೇರಿದ ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷರೂ ಆದ ಲಿಂಗರಾಜಪ್ಪ ಅಪ್ಪ ಅವರ ಪುತ್ರಿ ಶ್ರಾವಣಾ ಅವರೊಂದಿಗೆ ಸುಭಾಷ್ ಅವರ ನಿಶ್ಚಿತಾರ್ಥ ಕಲಬುರಗಿಯಲ್ಲಿ ಸೋಮವಾರ ನೆರವೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.