ಜೇವರ್ಗಿ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಡಗೈ ಸಮುದಾಯಕ್ಕೆ ಶೇ 6 ಒಳಮೀಸಲಾತಿ ನೀಡಲು ನಿರ್ಧರಿಸಿದ ಹಿನ್ನೆಲೆ ಮಾದಿಗ ಸಮನ್ವಯ ಸಮಿತಿ ಬುಧವಾರ ಪಟ್ಟಣದ ಡಾ.ಬಾಬು ಜಗಜೀವನರಾಂ ಪುತ್ಥಳಿ ಬಳಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಾಚರಣೆ ಮಾಡಿದರು.
ಮುಖಂಡ ಮರೆಪ್ಪ ಕೋಬಾಳಕರ್ ಮಾತನಾಡಿ, ‘ನಾಗಮೋಹನದಾಸ್ ವರದಿಯಲ್ಲಿ ಒಳಮೀಸಲಾತಿ ವಿಂಗಡಣೆ ಮಾಡಲಾಗಿತ್ತು. ಆದರೆ, ಸರ್ಕಾರ 3 ಗುಂಪುಗಳಾಗಿ ವರ್ಗೀಕರಣ ಮಾಡಿದೆ. 18 ಜಾತಿಗಳಿರುವ ಎಡಗೈ ಸಮುದಾಯಕ್ಕೆ ಶೇ 6 ಮೀಸಲಾತಿ ನೀಡಲು ತೀರ್ಮಾನ ಕೈಗೊಂಡಿದ್ದು ಸಂತಸ ತಂದಿದೆ’ ಎಂದರು.
ರಾಜ್ಯದಲ್ಲಿ ಒಳ ಮೀಸಲಾತಿ 3ದಶಕಗಳ ಬೇಡಿಕೆಯಾಗಿತ್ತು, ರಾಜ್ಯ ಸಚಿವ ಸಂಪುಟ ಪರಿಶಿಷ್ಟಜಾತಿಗಳಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಲು ಒಪ್ಪಿಗೆ ನೀಡಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ಯಾರಿಗೂ ಅಸಮಾಧಾನವಾಗದಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದರು.
‘ಸರ್ಕಾರದ ಈ ತೀರ್ಮಾನದಿಂದ ಭಾಂಬಿ, ಅಸೋಡಿ, ಚಮಡಿಯಾ, ಚಮಗಾರ, ಹರಳಯ್ಯ, ಹರಳಿ, ಮಚಿಗಾರ, ಮೋಚಿಗಾರ, ಮಾದರ, ಮಾದಿಗ, ಮೋಚಿ, ಮುಚ್ಚಿ, ರೋಹಿತ್, ಸಮ್ಗರ್, ಹಕ್ಕಳಯ್ಯ, ಧೋರ್ಕ, ಹಕ್ಕಳಯ್ಯ, ಧೋರ್ಕಾ ಹಲಸ್ವರ, ಹಸ್ಲ, ಕಡಯ್ಯನ್, ಕೆಪ್ಮರಿಸ್, ಮಾದಿಗ, ಮಾವಿಲನ್, ಮೊಗೇರ್, ಪಂಚಮ, ಪರಯ, ಸಮಗಾರ ಸೇರಿದಂತೆ 18 ಜಾತಿಗಳಿಗೆ ಅನುಕೂಲವಾಗಲಿದೆ’ ಎಂದರು.
ಮುಖಂಡರಾದ ಮಾನಪ್ಪ ಗೋಗಿ, ಮಲ್ಲಿಕಾರ್ಜುನ್ ಬಿಲ್ಲಾರ್, ಮಹೇಶ ಕೆಂಭಾವಿ, ಗಂಗಾಧರ್ ವರ್ಚನಹಳ್ಳಿ, ಮಲ್ಲಪ್ಪ ಕುಳಗೇರಿ, ಪರಶುರಾಮ ಜಮಖಂಡಿ, ಅಂಬರೀಶ್ ದೊಡ್ಡಮನಿ, ಲಕ್ಷ್ಮಣ್ ಡೊಳ್ಳೆ, ವಿಶ್ವ ನರಿಬೋಳ, ರಾಘು ಕೆಂಭಾವಿ ಸೇರಿದಂತೆ ಅನೇಕರಿದ್ದರು.
ಆಳಂದ: ಪರಿಶಿಷ್ಟಜಾತಿಯ ಒಳಮೀಸಲಾತಿ ಕಲ್ಪಿಸುವ ನ್ಯಾ.ನಾಗಮೋಹನದಾಸ್ ವರದಿ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ ಹಿನ್ನಲೆ ಬುಧವಾರ ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಘಟಕದಿಂದ ಸಂಭ್ರಮಾಚರಣೆ ಮಾಡಲಾಯಿತು.
ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ಮೋಘಾ ಮಾತನಾಡಿ, ‘ರಾಜ್ಯ ಸರ್ಕಾರ ನಾಗಮೋಹನದಾಸ್ ವರದಿ ಪರಿಷ್ಕರಿಸಿ ಎಲ್ಲ ಒಳಪಂಗಡಗಳಿಗೂ ಅನ್ಯಾಯವಾಗದ ರೀತಿಯಲ್ಲಿ ವರದಿ ಜಾರಿಗೆ ಬಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಜಂಗಲೆ ಆಳಂದ, ಹೋರಾಟಗಾರ ಮಲ್ಲಿಕಾರ್ಜುನ ಭೋಳಣಿ ಮಾತನಾಡಿದರು. ಮುಖಂಡರಾದ ಅಂಬರೀಷ ಇಕ್ಕಳಕಿ, ಶಿವಪ್ಪ ಕಡಗಂಚಿ, ಅವಿನಾಶ ದೇವನೂರು, ಶರಣಬಸಪ್ಪ ನರೋಣೆ, ದತ್ತಾ ಮೇಲಿನಕೇರಿ, ಮಲ್ಲಿಕಾರ್ಜುನ ಶೃಂಗೇರಿ, ಲಕ್ಷ್ಮಿಕಾಂತ ಭಜನ್, ಪಂಡಿತ ದೋಣಿ, ಸುಧಾಕರ ಮೊದಲೆ, ರತಿಕಾಂತ, ಅಂಬರೀಷ ಪಾಲ್ಗೊಂಡಿದರು.
ಚಿಂಚೋಳಿ: ರಾಜ್ಯಸರ್ಕಾರ ಒಳ ಮೀಸಲಾತಿಗೆ ಒಪ್ಪಿಗೆ ನೀಡಿದ್ದು ಸ್ವಾಗತಾರ್ಹ. ತಾಲ್ಲೂಕಿನಲ್ಲಿ ಮಾದಿಗ ಸಮಾಜದ ಸಮಾವೇಶ ನಡೆಸಿ ಸಂಭ್ರಮಾಚರಣೆ ನಡೆಸಲಾಗುವುದು ಎಂದು ಮುಖಂಡ ಗೋಪಾಲರಾವ್ ಕಟ್ಟಿಮನಿ ತಿಳಿಸಿದರು.
ಇಲ್ಲಿನ ಬಸ್‌ನಿಲ್ದಾಣದ ಎದುರು ಮಾದಿಗ ಸಮಾಜದಿಂದ ನಡೆದ ಸಂಭ್ರಮಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಒಳ ಮೀಸಲಾತಿ ಹೋರಾಟದ ಸಮಿತಿ ಅಧ್ಯಕ್ಷ ಮಲ್ಲು ಕೂಡಾಂಬಲ್, ವಿಜಯರಾಜ್ ಕೊರಡಂಪಳ್ಳಿ, ಸುರೇಶ ಶೇರಿಕಾರ, ನರಸಪ್ಪ ಕಿವುಣೋರ್, ಶಾಮರಾವ್ ಚಿಂಚೋಳಿ, ವಿನೋದ ಓಂಕಾರ, ವಿಜಯಕುಮಾರ ಶಾಬಾದಿ, ಜಗನ್ನಾಥ ಪೋಲಕಪಳ್ಳಿ, ಭೀಮಶೆಟ್ಟು ಜಾಬಶೆಟ್ಟಿ ಅಶ್ವತ್ಥ ಕಟ್ಟಿಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.