ಕಲಬುರಗಿ: ‘ಮಾದಿಗ ಸಮುದಾಯಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳೊಂದಿಗೆ ಒಳಮೀಸಲಾತಿ ಜಾರಿ ನಿರ್ಧಾರದ ಮೂಲಕ ಆರನೇ ಗ್ಯಾರಂಟಿ ನೀಡಿದೆ’ ಎಂದು ಜಿಲ್ಲಾ ಮಾದಿಗ ಸಮನ್ವಯ ಸಮಿತಿಯ ಮುಖಂಡ ಶ್ಯಾಮ ನಾಟಿಕಾರ ಹರ್ಷ ವ್ಯಕ್ತಪಡಿಸಿದರು.
‘ಒಳಮೀಸಲಾತಿಗಾಗಿ ಮಾದಿಗ ಸಮುದಾಯ ಮೂರು ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಇದರಿಂದ ಜಯ ಸಿಕ್ಕಂತಾಗಿದೆ. ಇದಕ್ಕಾಗಿ ಶ್ರಮಿಸಿದ ಮುಖ್ಯಮಂತ್ರಿ, ಸಚಿವರು, ಶಾಸಕರು, ನಮ್ಮ ಸಮುದಾಯದ ಹೋರಾಟಗಾರಿಗೆ ಮಾದಿಗ ಸಮನ್ವಯ ಸಮಿತಿಯಿಂದ ಧನ್ಯವಾದಗಳು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕೃತಜ್ಞತೆ ವ್ಯಕ್ತಪಡಿಸಿದರು.
‘ಮಾದಿಗರಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ಹಿಂದೆ ಎಸ್.ಎಂ.ಕೃಷ್ಣ ಅವಧಿಯಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗ ರಚಿಸಲಾಗಿತ್ತು. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಧುಸ್ವಾಮಿ ಸಮಿತಿ, ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನ್ಯಾ.ನಾಗಮೋಹನದಾಸ ಆಯೋಗ ರಚಿಸಿತ್ತು. ಇದೀಗ ನಾಗಮೋಹನದಾಸ ಆಯೋಗದ ವರದಿಯಲ್ಲಿ ಐದು ಪ್ರವರ್ಗ ಮಾಡಿ ಒಳಮೀಸಲಾತಿಗೆ ಶಿಫಾರಸು ಮಾಡಲಾಗಿತ್ತು. ಆದರೆ, ಸರ್ಕಾರ ತಾಂತ್ರಿಕ ತೊಂದರೆಯೋ, ಒತ್ತಡವೋ ಕೆಲವು ಮಾರ್ಪಾಡು ಮಾಡಿ ಒಳಮೀಸಲಾತಿ ಕುರಿತು ಸಂತೋಷದ ಸುದ್ದಿಕೊಟ್ಟಿದೆ’ ಎಂದರು.
ಮುಖಂಡ ರಾಜು ವಾಡೇಕರ್ ಮಾತನಾಡಿ, ‘ಒಳಮೀಸಲಾತಿ ಜಾರಿಗೊಳಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದರೂ, ಮಾದಿಗರು ಮಾಡಿದ್ದ ಹೋರಾಟಕ್ಕೆ ಸಂಪೂರ್ಣ ಪ್ರತಿಫಲ ಸಿಕ್ಕಿಲ್ಲ. ಕಾಣದ ಕೈಗಳ ಅಡ್ಡಿಯಿಂದಾಗಿ ಒಳಮೀಸಲಾತಿಯಲ್ಲಿ ಜನಸಂಖ್ಯೆಗೆ ತಕ್ಕಷ್ಟು ಪಾಲು ದೊರೆತಿಲ್ಲ. ಒಳಮೀಸಲಾತಿಯಲ್ಲಿ ಇನ್ನೂ ಶೇ1ರಷ್ಟು ಪಾಲು ಪಡೆಯಲು ಹೋರಾಟ ಮುಂದುವರಿಯಲಿದೆ’ ಎಂದರು.
ಮುಖಂಡ ಗೋಪಾಲ ಕಟ್ಟಿಮನಿ ಮಾತನಾಡಿ, ‘ಒಳಮೀಸಲಾತಿಗಾಗಿ ಬೆಳಗಾವಿಯಲ್ಲಿ ಲಾಠಿ ಏಟು ತಿಂದ, ಹುಬ್ಬಳ್ಳಿಯ ಸಮಾವೇಶಕ್ಕೆ ಬರುತ್ತಿದ್ದಾಗ ಜೀವ ಕಳೆದುಕೊಂಡ ಹೋರಾಟಗಾರರಿಗೆ ಈ ಒಳಮೀಸಲಾತಿ ಹೋರಾಟದ ವಿಜಯವನ್ನು ಸಮರ್ಪಿಸುವೆ. ನ್ಯಾ.ನಾಗಮೋಹನದಾಸ ಆಯೋಗದ ಮಾಡಿದ್ದ ಶಿಫಾರಸಿನಂತೆ ಅಲೆಮಾರಿಗಳು, ಅರೆಅಲೆಮಾರಿಗಳು ರಾಜ್ಯ ಸರ್ಕಾರ ಶೇ1ರಷ್ಟು ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಜಿನಕೇರಿ, ಪ್ರದೀಪ ಭಾವೆ, ಶ್ರೀಮಂತ ಭಂಡಾರಿ, ಎ.ಎಚ್.ನಾಗೇಶ, ವಿಜಯಕುಮಾರ ಅಡಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.