
ಯಡ್ರಾಮಿ: ತಾಲ್ಲೂಕಿನ ಕಡಕೋಳ ಗ್ರಾಮದ ಮಡಿವಾಳಪ್ಪನವರ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ನಡೆಯಿತು. ರಥೋತ್ಸವವು ಆರಂಭವಾದ ಸ್ವಲ್ಪ ಹೊತ್ತಿನಲ್ಲಿ ರಥ ಚಕ್ರದ ಕಟ್ಟಿಗೆ ಮುರಿದಿದ್ದರಿಂದ ರಥೋತ್ಸವ ಸ್ಥಗಿತಗೊಂಡಿತು.
ಶುಕ್ರವಾರ ಬೆಳಿಗ್ಗೆ 6ಕ್ಕೆ ಮಡಿವಾಳೇಶ್ವರರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಮಹಾ ಮಂಗಳಾರತಿ, 10 ಗಂಟೆಗೆ ಪುರವಂತಿಕೆ, 11 ಪಲ್ಲಕ್ಕಿ ಉತ್ಸವ, 11.30ಕ್ಕೆ ಅಗ್ನಿಪ್ರವೇಶದ ಬಳಿಕ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಮುಂಜಾವಿನಿಂದಲೇ ಮಡಿವಾಳಪ್ಪನವರ ಗದ್ದುಗೆಗೆ ಪೂಜಾ ಕೈಂಕರ್ಯಗಳು ನೆರವೇರಿದವು. ವಿವಿಧ ಅಭಿಷೇಕ, ಪೂಜೆ ನೆರವೇರಿಸಲಾಯಿತು. ಮಡಿವಾಳಪ್ಪ ಮತ್ತು ಗುರು ಮಹಾಂತೇಶ್ವರರ ಉತ್ಸವ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಇರಿಸಿ ಮೆರವಣಿಗೆ ಮಾಡಲಾಯಿತು.
ಪಲ್ಲಕ್ಕಿ ಉತ್ಸವವು, ಮಡಿವಾಳೇಶ್ವರ ದೇವಸ್ಥಾನ ದ್ವಾರದಿಂದ ಹೊರ ಬರುತ್ತಿದ್ದಂತೆ ಪುರವಂತರು ಸಾಹಸ ಮೆರೆದರು. ಹಿತ್ತಾಳೆ ತಂತಿಯನ್ನು ಬಾಯಲ್ಲಿ ತೂರಿಸಿ, ಉದ್ದದ ದಾರ ಪೋಣಿಸಿ ಎಳೆದು ಭಕ್ತಿ ಪ್ರದರ್ಶಿಸಿದರು. ನೆರೆದ ಸಾವಿರಾರು ಭಕ್ತರು ಕೈಮುಗಿದರು.
ಪಲ್ಲಕ್ಕಿಯು ಅಗ್ನಿ ಕುಂಡದ ಬಳಿಗೆ ಬರುತ್ತಿದ್ದಂತೆ ರಥದ ಕಳಸಾರೋಹಣ ಮಾಡಲಾಯಿತು. ಪುರವಂತರು, ಪೂಜಾರಿಗಳು ಅಗ್ನಿಕುಂಡಕ್ಕೆ ಪೂಜೆ ಸಲ್ಲಿಸುತ್ತಿದ್ದಂತೆ ಕಡಕೋಳ ಮಡಿವಾಳಪ್ಪನವರಿಗೆ ಜೈಕಾರ ಹಾಕುವ ಮೂಲಕ ಪುರವಂತರು, ರುದ್ರಮುನಿ ಶಿವಾಚಾರ್ಯರು, ಪಲ್ಲಕ್ಕಿ ಹೊತ್ತವರು, ಕಳಸ ಹಿಡಿದ ಮಹಿಳೆಯರು, ಹರಕೆ ಹೊತ್ತ ನೂರಾರು ಭಕ್ತರು ಅಗ್ನಿಕುಂಡ ಹಾಯ್ದರು. ಅಗ್ನಿಕುಂಡದ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿ ದೇವಸ್ಥಾನಕ್ಕೆ ಮರಳಿತು. ಬಳಿಕ ಭಕ್ತರು ಭಜ್ಜಿ ಮಹಾಪ್ರಸಾದ ಸವಿದರು.
ವಿವಿಧ ರಾಜ್ಯ, ಜಿಲ್ಲೆಗಳಿಂದ ಬಂದಿದ್ದ ಭಕ್ತರು ದಾಸೋಹಕ್ಕಾಗಿ ಮಡಿವಾಳಪ್ಪನವರ ನೀಡಿದ್ದ ದವಸ ಧಾನ್ಯ, ತರಕಾರಿ ಬಳಸಿ ಎರಡು ದೊಡ್ಡ ಪಾತ್ರೆಗಳಲ್ಲಿ ಭಜ್ಜಿ, ಪಲ್ಯ ಸಿದ್ಧಪಡಿಸಲಾಗಿತ್ತು. ಸರದಿಯಲ್ಲಿ ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ರೊಟ್ಟಿಗಳನ್ನು ರಾಶಿ ಹಾಕಲಾಗುತ್ತು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಸಾಮೂಹಿಕ ಭೋಜನ ಮಾಡಿದರು.
ರಥೋತ್ಸವ ಸ್ಥಗಿತ: ದೇವಸ್ಥಾನ ಆವರಣದಲ್ಲಿ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ನೆರೆದಿದ್ದರು. ವಿವಿಧ ಬಗೆಯ ಹೂವುಗಳಿಂದ ಆಲಂಕರಿಸಲಾಗಿದ್ದ ರಥ ಎಳೆಯಲು ಯುವಕರು, ಭಕ್ತರ ದಂಡು ಕಾಯುತ್ತಿತ್ತು. ರುದ್ರಮುನಿ ಶಿವಚಾರ್ಯ ಸ್ವಾಮೀಜಿ ಅವರು, ರಥದ ಪ್ರದಕ್ಷಿಣೆ ಹಾಕಿ ಚಾಲನೆ ನೀಡಿದರು. ರಥವು ಸ್ವಲ್ಪ ದೂರ ಸಾಗುತ್ತಿದ್ದಂತೆ ಚಕ್ರದ ಸಮಸ್ಯೆಯಾಗಿ ರಥೋತ್ಸವ ಸ್ಥಗಿತಗೊಂಡಿತು.
ಭಕ್ತರು, ರಸ್ತೆಯ ಇಕ್ಕೆಲ, ತಾರಸಿಗಳು, ಕಟ್ಟೆಗಳು, ದೇವಸ್ಥಾನದ ಕೋಟೆ ಮೇಲೆ ಎಲ್ಲೆಂದರಲ್ಲಿ ಕಿಕ್ಕಿರಿದು ಸೇರಿದ ಜನರು ಹಣ್ಣು, ಉತ್ತತ್ತಿ ಎಸೆದು ಕೈಮುಗಿದು ಆಶೀರ್ವಾದ ಪಡೆದರು.
ಗುರುವಾರ ಸಂಜೆ ಖಾಂಡ, ಭಜ್ಜಿ ರೊಟ್ಟಿ ಪ್ರಸಾದ ನಡೆಯಿತು. ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಧರ್ಮಸಭೆ ನಡೆಯಿತು. ವಿವಿಧ ಕಲಾ ತಂಡಗಳಿಂದ ಸಂಗೀತ ಕಾರ್ಯಕ್ರಮ ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.