ADVERTISEMENT

‘ಗಾಂಧೀಜಿ ಅಂತರಂಗದ ಬೆಳಕಾಗಲಿ’

ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ, ಸರ್ವಧರ್ಮ ಪ್ರಾರ್ಥನೆ–ಗೀತಗಾಯನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 12:11 IST
Last Updated 2 ಅಕ್ಟೋಬರ್ 2019, 12:11 IST

ಕಲಬುರ್ಗಿ: ಜಗತ್ತಿಗೆ ಶಾಂತಿ ಸಂದೇಶ ಸಾರಿದ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿಯನ್ನು ಸಾಕ್ಷ್ಯಚಿತ್ರ ಪ್ರದರ್ಶನ, ಸರ್ವಧರ್ಮ ಪ್ರಾರ್ಥನೆ, ಸದ್ಭಾವನಾ ಗೀತಗಾಯನದ ಮೂಲಕ ಆಚರಿಸಲಾಯಿತು.

ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಸೇವಾದಳದ ವತಿಯಿಂದ ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ, ಗಾಂಧೀಜಿ ಅವರ ಅಹಿಂಸಾ ತತ್ವಗಳನ್ನು ಪಾಲಿಸಬೇಕು. ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಆ ಮೂಲಕ ಗಾಂಧೀಜಿ ಅವರ ಕನಸನ್ನು ನನಸು ಮಾಡಬೇಕು ಎಂದರು.

ADVERTISEMENT

ಹಿರಿಯ ಸಾಹಿತಿ ಡಾ.ವಸಂತ ಕುಷ್ಟಗಿ ಮಾತನಾಡಿ, ಶಾಲೆ, ಕಾಲೇಜುಗಳಲ್ಲಿ ಸಂವಾದ ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಗಾಂಧೀಜಿ ಅವರ ತತ್ವಗಳನ್ನು ತಿಳಿಸಬೇಕು. ಇಂದಿನ ತಾಂತ್ರಿಕ ಜೀವನದಲ್ಲಿ ನಾವು ಹೇಗೆ ಬದುಕಬೇಕು ಎಂಬುದಕ್ಕೆ ಅವರ ಜೀವನ ನಿದರ್ಶನವಾಗಿದೆ. ಅವರು ನಮ್ಮ ಅಂತರಂಗದ ಬೆಳಕಾಗಬೇಕು ಎಂದು ಹೇಳಿದರು.

ಗಾಂಧೀಜಿ ಒಮ್ಮೆಲೆ ಮಹಾತ್ಮ ಆಗಲಿಲ್ಲ. ತಮ್ಮ ಜೀವನದುದ್ದಕ್ಕೂ ಸತ್ಯ, ಪ್ರಾಮಾಣಿಕತೆಯನ್ನು ಪಾಲಿಸಿದರು. ಇಂದು ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಅವರ ತತ್ವಗಳನ್ನು ಅಸ್ತ್ರಗಳಾಗಿ ಬಳಸಬಹುದು ಎಂದರು.

ಗಾಂಧೀಜಿ 1927ರಲ್ಲಿ ನಗರಕ್ಕೆ ಬಂದಿದ್ದರು. ಇಲ್ಲಿನ ಶರಣಬಸವೇಶ್ವರ ಸಂಸ್ಥಾನ, ಖಾಜಾ ಬಂದಾ ನವಾಜ್ ದರ್ಗಾಕ್ಕೆ ಭೇಟಿ ನೀಡಿದ್ದರು. ಸ್ವಾಮಿ ರಾಮಾನಂದ ತೀರ್ಥರು ಗಾಂಧೀಜಿ ಅವರ ಅನುಯಾಯಿ ಆಗಿದ್ದರು. ಹೀಗಾಗಿ ನಗರದ ರೈಲು ನಿಲ್ದಾಣದಿಂದ ಸೂಪರ್‌ ಮಾರ್ಕೆಟ್‌ ವರೆಗಿನ ರಸ್ತೆಗೆ ಅವರ ಹೆಸರಿಡಬೇಕು. ಈ ಬಗ್ಗೆ ಸರ್ಕಾರದ ಆದೇಶವೂ ಇದೆ ಎಂದು ಮನವಿ ಮಾಡಿದರು.

ಸಿದ್ಧಾರ್ಥ ಬುದ್ಧ ವಿಹಾರದ ಸಂಘಾನಂದ ಭಂತೇಜಿ ಮಾತನಾಡಿ, ಸತ್ಯವೇ ಗಾಂಧೀಜಿ ಅವರ ಉಸಿರಾಗಿತ್ತು. ಭಗವಾನ್ ಬುದ್ಧರು ಆರನೇ ಶತಮಾನದಲ್ಲಿ ಶಾಂತಿ ಸಂದೇಶ ಸಾರಿದರು. ಅದೇ ಮಾರ್ಗದಲ್ಲಿ ನಡೆದ ಗಾಂಧೀಜಿ ಶಾಂತಿಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದರು ಎಂದರು.

ಗಾಂಧೀಜಿ ಅವರ ಸ್ಮರಣೆ ನಿತ್ಯ ಆಗಬೇಕು. ಅವರ ತತ್ವಗಳನ್ನು ಪಾಲನೆ ಮಾಡಬೇಕು ಎಂದರು.

ಫಾದರ್ ವಿನ್ಸೆಂಟ್ ಫೆರಿರಾ ಮಾತನಾಡಿ, ಗಾಂಧೀಜಿ ಜೀವನದುದ್ದಕ್ಕೂ ಸರಳಾಗಿ ಬದುಕಿದರು. ಕೊನೆಯವರೆಗೂ ಸಮಾನತೆ ತರಲು, ಅಸ್ಪೃಶ್ಯತೆ ನಿವಾರಣೆಗೆ ಹೋರಾಟ ನಡೆಸಿದರು ಎಂದು ಹೇಳಿದರು.

ಸಮಾಜದಲ್ಲಿ ಬಾಲ್ಯ ವಿವಾಹ, ದೌರ್ಜನ್ಯಗಳು ಇಂದಿಗೂ ನಡೆಯುತ್ತಿವೆ. ಇವು ನಿವಾರಣೆ ಆಗಬೇಕು. ಆಗ ಮಾತ್ರ ಅಭಿವೃದ್ಧಿಗೆ ಅರ್ಥ ಬರುತ್ತದೆ. ಎಲ್ಲರೂ ಸಮಾನತೆಯಿಂದ, ಪ್ರೀತಿಯಿಂದ ಬಾಳಬೇಕು ಎಂದರು.

ಜಿಲ್ಲಾಧಿಕಾರಿ ಬಿ.ಶರತ್ ಮಾತನಾಡಿ, ಸಾಬರಮತಿಯ ಸಂತ ಗಾಂಧೀಜಿ ಅವರನ್ನು ಇಡೀ ಜಗತ್ತು ಮಹಾತ್ಮ ಎಂದು ಒಪ್ಪಿಕೊಂಡಿದೆ. ಇದಕ್ಕೆ ಕಾರಣ ಅವರ ವ್ಯಕ್ತಿತ್ವ ಎಂದು ಹೇಳಿದರು.

ಇಲ್ಲಿ ಎಂಜಿನಿಯರಿಂಗ್, ವೈದ್ಯಕೀಯ ಓದಿದವರು ಬೇರೆ ದೇಶದಲ್ಲಿ ಉದ್ಯೋಗ ಮಾಡುತ್ತಾರೆ. ಆದರೆ, ಗಾಂಧೀಜಿ ಬೇರೆ ದೇಶದಲ್ಲಿ ಓದಿ ಇಲ್ಲಿಗೆ ಬಂದರು. ಅವರು ನುಡಿದಂತೆ ಜೀವನದಲ್ಲಿ ಬದುಕಿದರು. ಅವರ ಮಾತು, ಕೃತಿ ಒಂದೇ ಆಗಿತ್ತು ಎಂದರು.

ಗುಟ್ಕಾ ತಿಂದು ಪಾಕೆಟ್ ಎಸೆಯುವುದರಿಂದ ಹೊರಗಿನ ಪರಿಸರ ಹಾಳಾಗುವ ಜತೆಗೆ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಉಂಟಾಗುತ್ತದೆ. ಹೀಗಾಗಿ ಮಕ್ಕಳು ಮನೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.