ADVERTISEMENT

ಡೆಂಗಿ, ಚಿಕೂನ್‌ ಗುನ್ಯಾ ತಡೆಗಟ್ಟಲು ಜಾಗೃತಿ ಮೂಡಿಸಿ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 20:00 IST
Last Updated 7 ನವೆಂಬರ್ 2019, 20:00 IST
ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಶರತ್‌ ಬಿ. ಮಾತನಾಡಿದರು. ಜಿ.ಪಂ. ಸಿಇಒ ಡಾ.ಪಿ. ರಾಜಾ ಇದ್ದರು
ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಶರತ್‌ ಬಿ. ಮಾತನಾಡಿದರು. ಜಿ.ಪಂ. ಸಿಇಒ ಡಾ.ಪಿ. ರಾಜಾ ಇದ್ದರು   

ಕಲಬುರ್ಗಿ: ಜಿಲ್ಲೆಯಲ್ಲಿ ಈಗಾಗಲೇ ಡೆಂಗಿ, ಚಿಕೂನ್‌ಗುನ್ಯಾ ಹತೋಟಿಯಲ್ಲಿದ್ದು, ಮುಂಜಾಗೃತಾ ಕ್ರಮವಾಗಿ ಈ ರೋಗಗಳನ್ನು ತಡೆಗಟ್ಟಲು ಹೆಚ್ಚು ಜನಸಂದಣಿಯ ಪ್ರದೇಶಗಳಾಗುವ ಸೇರುವ ಪ್ರದೇಶಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಶಾಲೆಗಳು ಹಾಗೂ ಗ್ರಾಮೀಣ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಅರಿವು ಮೂಡಿಸುವ ಮೂಲಕ ಸ್ವಚ್ಛತೆ ಹಾಗೂ ರೋಗ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಶರತ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ನಡೆದ ಡೆಂಗಿ ಮತ್ತು ಚಿಕೂನ್‍ಗುನ್ಯಾ ರೋಗಗಳ ನಿಯಂತ್ರಣ ಕುರಿತು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದಲ್ಲಿ ಆರೋಗ್ಯ ಇಲಾಖೆ ಮಹಾನಗರ ಪಾಲಿಕೆಯೊಂದಿಗೆ ಜೊತೆಗೂಡಿ ಮುಂಜಾಗ್ರತಾ ಹಾಗೂ ನಿಯಂತ್ರಣದ ಅರಿವು ಕಾರ್ಯಕ್ರಮಗಳನ್ನು ಕೈಗೊಂಡಿರುವ ಕಾರಣ ಜನವರಿಯಿಂದ ಇಲ್ಲಿಯವರೆಗೆ ಯಾವುದೇ ಹೊಸದಾಗಿ ಡೆಂಗಿ ಪ್ರಕರಣಗಳಲ್ಲಿ ಸಾವು ಸಂಭವಿಸಿಲ್ಲ. ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಈ ವರ್ಷ ಡೆಂಗಿ ಪ್ರಕರಣಗಳಲ್ಲಿ ಇಳಿಮುಖವಾಗಿದೆ ಎಂದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಮಾಧವರಾವ ಕೆ. ಪಾಟೀಲ ಮಾತನಾಡಿ, ‘ಸೊಳ್ಳೆಗಳ ಸಾಂದ್ರತೆ ಹೆಚ್ಚು ಕಂಡು ಬಂದಲ್ಲಿ ಹಾಗೂ ಡೆಂಗಿ ಪ್ರಕರಣಗಳು ಕಾಣಿಸಿಕೊಂಡ ಪ್ರದೇಶದಲ್ಲಿ ನಿಯಮಿತವಾಗಿ ಫಾಗಿಂಗ್ ಚಟುವಟಿಕೆಗಳನ್ನು ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆ ವೈದ್ಯರಿಗೆ ಈಗಾಗಲೇ ಈ ರೋಗದ ಕುರಿತು ಮಾಹಿತಿ ನೀಡಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ಡೆಂಗಿ ರೋಗಿಗಳಿಗೆ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡೆಂಗಿ ಪ್ರಕರಣಗಳನ್ನು ಖಚಿತಪಡಿಸಿಕೊಳ್ಳಲು ನಗರದ ಜಿಲ್ಲಾಸ್ಪತ್ರೆಯಲ್ಲಿ ಡಿಪಿಎಚ್‍ಎಲ್ ಲ್ಯಾಬ್‍ನಲ್ಲಿ ಉಚಿತವಾಗಿ ತಪಾಸಣೆ ಮಾಡಿಸಿಕೊಡಲಾಗುತ್ತಿದೆ’ ಎಂದು ತಿಳಿಸಿದರು.

ಡೆಂಗ್ಯೂ ಜ್ವರದ ಲಕ್ಷಣಗಳು: ಒಂದು ವೇಳೆ ಜ್ವರ ಮೈಕೈ ನೋವು, ಕಣ್ಣಿನ ಹಿಂಭಾಗದಲ್ಲಿ ನೋವು ಹಾಗೂ ಮೈಮೇಲೆ ಕೆಂಪು ಚುಕ್ಕೆಗಳು ಕಾಣುವುದು ಹಾಗೂ ಯಾವುದೇ ತರಹದ ಜ್ವರಗಳು ಕಾಣಿಸಿಕೊಂಡಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ. ರಾಜಾ, ಸಿ.ಸಿ.ಟಿ ಅಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಶರಣಬಸಪ್ಪ ಭೂಸನೂರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ರಾಜಕುಮಾರ, ಜಿಮ್ಸ್ ಸಂಸ್ಥೆಯ ಮಕ್ಕಳ ತಜ್ಞ ಡಾ.ಸಂದೀಪ ಹರಸಣಗಿ, ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನರಸಿಂಹ ಮೆಂಡನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.