ADVERTISEMENT

ಮಾಲದಂಡಿ ಜೋಳ ಬಂಪರ್ ಇಳುವರಿ ನಿರೀಕ್ಷೆ

ಚಿಂಚೋಳಿ: ಕಣ್ಮರೆಯಾದ ಕಾಟಿ, ಕೋಡಮುರಕಿ ಜೋಳ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 10:22 IST
Last Updated 3 ಜನವರಿ 2020, 10:22 IST
ಚಿಂಚೋಳಿಯ ಪ್ರಗತಿಪರ ರೈತ ಶ್ರೀನಿವಾಸ ಬಂಡಿ ಅವರ ಹೊಲದಲ್ಲಿ ತೆನೆ ಬಿಡುವ ಹಂತದಲ್ಲಿರುವ ಜೋಳದ ಬೆಳೆ
ಚಿಂಚೋಳಿಯ ಪ್ರಗತಿಪರ ರೈತ ಶ್ರೀನಿವಾಸ ಬಂಡಿ ಅವರ ಹೊಲದಲ್ಲಿ ತೆನೆ ಬಿಡುವ ಹಂತದಲ್ಲಿರುವ ಜೋಳದ ಬೆಳೆ   

ಚಿಂಚೋಳಿ: ತೊಗರಿ ಕಣಜ ಖ್ಯಾತಿಯ ಕಲಬುರ್ಗಿ ಜಿಲ್ಲೆಯಲ್ಲಿ ಮಾಲದಂಡಿ (ಎಂ.35/1) ತಳಿಯ ಜೋಳದ ಬೇಸಾಯ ಪ್ರಸಕ್ತ ವರ್ಷ ಬಂಪರ್ ಇಳುವರಿಯ ನಿರೀಕ್ಷೆ ಹುಟ್ಟಿಸಿದೆ.

ಜೋಳದ ಬೇಸಾಯಕ್ಕೆ ಪೂರಕವಾದ ವಾತಾವರಣ ಇರುವುದರಿಂದ ಮುತ್ತಿನಂತಹ ಜೋಳದ ಕಾಳುಗಳು ರೈತರ ಕೈ ಹಿಡಿಯುವುದರಲ್ಲಿ ಅನುಮಾನವಿಲ್ಲ.

ಜೋಳದ ಬೇಸಾಯದಿಂದ ರೈತರಿಗೆ ಎರಡು ರೀತಿಯ ಲಾಭಗಳಿವೆ. ಜೋಳ ರೈತನ ಹೊಟ್ಟೆ ತುಂಬಿಸಿದರೆ, ಜೋಳದ ಕಣಕಿ (ಮೇವು) ಜಾನುವಾರುಗಳಿಗೆ ಆಹಾರವಾಗುತ್ತದೆ. ಇದರಿಂದ ರೈತರು ಇತ್ತೀಚಿನ ದಿನಗಳಲ್ಲಿ ಡಬಲ್‌ ಆದಾಯ ಪಡೆಯುತ್ತಿದ್ದಾರೆ.

ADVERTISEMENT

ಪ್ರಸಕ್ತ ವರ್ಷ ಜೋಳದ ಬೇಸಾಯ ಪ್ರದೇಶ ಕಡಿಮೆ ಇರುವುದರಿಂದ ಜೋಳಕ್ಕೂ ಮೇವಿಗೂ ಹೆಚ್ಚಿನ ಬೇಡಿಕೆ ಬರುತ್ತದೆ ಎಂಬ ವಿಶ್ವಾಸದಲ್ಲಿ ರೈತರಿದ್ದಾರೆ. ಪ್ರಸ್ತುತ ಜೋಳದ ಬೆಳೆ ಬಹುತೇಕ ತೆನೆ ಬಿಡುವ ಹಂತದಲ್ಲಿದೆ. ತೇವಾಂಶದ ಕೊರತೆ ಇರುವ ಕಡೆಗಳಲ್ಲಿ ಬೆಳೆ ಬಾಟಿ (ತೆನೆ ಬಿಡದೇ ಒಣಗುವುದು) ಬಂದಿದ್ದು, ಫಲವತ್ತಾದ ಹೊಲಗಳಲ್ಲಿ ಜೋಳದ ಬೆಳೆ ನಳನಳಿಸುತ್ತಿದೆ.

ತಾಲ್ಲೂಕಿನಲ್ಲಿ ಸರಿ ಸುಮಾರು 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಜೋಳದ ಬೇಸಾಯ ನಡೆಯುತ್ತಿದೆ. ಕುಂಚಾವರಂ ಸುತ್ತಲೂ ಬಿಳಿ ಜೋಳದ ಬೇಸಾಯ ಕಡಿಮೆ. ಚಿಮ್ಮನಚೋಡ, ಸುಲೇಪೇಟ ಹಾಗೂ ಕೋಡ್ಲಿ, ಚಿಂಚೋಳಿ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳೆಯು ಉತ್ತಮ ಬೆಳವಣಿಗೆ ಹಂತದಲ್ಲಿದೆ ಎನ್ನುತ್ತಾರೆ ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ರಾಠೋಡ್‌.ಎರಡು ದಶಕಗಳ ಹಿಂದೆ ಎಲ್ಲಿ ನೋಡಿದರಲ್ಲಿ ಜೋಳದ ಬೆಳೆ ಕಾಣಿಸುತ್ತಿತ್ತು. ಹಿರಿ ಬಿತ್ತನೆ ಎಂದೇ ಜೋಳ ಹೆಸರಾಗಿತ್ತು. ಆದರೆ ಈಗ ಅದು ಕಿರಿ ಬಿತ್ತನೆಯಾಗಿದೆ. ರೈತರು ತಮ್ಮ ಕುಟುಂಬಕ್ಕೆ ಬೇಕಾದಷ್ಟು ಜೋಳ ಬೇಸಾಯ ನಡೆಸಿದರೆ ಉಳಿದ ಹೊಲಗಳಲ್ಲಿ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೆಲವರು ಬೆಳೆ ಬದಲಾವಣೆ ನಿಟ್ಟಿನಲ್ಲಿ ಜೋಳ ಬೇಸಾಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.