ADVERTISEMENT

ನೆಮ್ಮದಿ ಹುಡುಕುತ್ತ ಗ್ರಾಮಕ್ಕೆ ಬಂದ ಸಿ.ಎಂ: ಮಾಲೀಕಯ್ಯ ಗುತ್ತೇದಾರ್ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 10:18 IST
Last Updated 18 ಜೂನ್ 2019, 10:18 IST
ಮಾಲೀಕಯ್ಯ ಗುತ್ತೇದಾರ
ಮಾಲೀಕಯ್ಯ ಗುತ್ತೇದಾರ   

ಕಲಬುರ್ಗಿ: ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೆಂಗಳೂರಿನಲ್ಲಿ ಉಸಿರುಗಟ್ಟುತ್ತಿದೆ. ಅಲ್ಲಿನ ಕಾಟದಿಂದ ತಪ್ಪಿಸಿಕೊಳ್ಳಲು ಅವರು ಗ್ರಾಮ ವಾಸ್ತವ್ಯ ಎಂಬ ಶೋ ಆರಂಭಿಸಿ, ಶಾಲೆಗಳಲ್ಲಿ ನೆಮ್ಮದಿಯಿಂದ ಮಲಗುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ ಲೇವಡಿ ಮಾಡಿದರು.

‘ಒಂದು ಕಡೆ ಬಂಡಾಯ ಶಾಸಕರ ಒತ್ತಡ, ಇನ್ನೊಂದು ಕಡೆ ಸಿದ್ದರಾಮಯ್ಯ ಅವರ ದರ್ಪ. ಈ ಎರಡರಿಂದಲೂ ಮುಖ್ಯಮಂತ್ರಿಗೆ ನೆಮ್ಮದಿ ಇಲ್ಲ. ಈಗ ಅವರು ಮಾಡುತ್ತಿರುವ ಗ್ರಾಮ ವಾಸ್ತವ್ಯ ಸ್ವಂತ ನೆಮ್ಮದಿ ಕಂಡುಕೊಳ್ಳಲೇ ಹೊರತು; ಗ್ರಾಮೀಣಾಭಿವೃದ್ಧಿಗೆ ಅಲ್ಲ ಎಂಬುದು ಮೇಲ್ನೊಟಕ್ಕೇ ಗೊತ್ತಾಗುತ್ತದೆ’ ಎಂದು ಅವರು ನಗರದಲ್ಲಿ ಮಂಗಳವಾರ ಮಾಧ್ಯಮಗಳ ಮುಂದೆ ಹೇಳಿದರು.

‘ಮಂಡ್ಯದಲ್ಲಿ ಕುಮಾರಸ್ವಾಮಿ, ಕಲಬುರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ; ಇಬ್ಬರೂ ತಮ್ಮ ಮಕ್ಕಳಿಂದಾಗಿಯೇ ನೆಮ್ಮದಿ ಕಳೆದುಕೊಂಡಿದ್ದಾರೆ. ಹಾಗಾಗಿ, ಎಲ್ಲೆಲ್ಲೋ ಸುತ್ತುತ್ತಿದ್ದಾರೆ’ ಎಂದೂ ಕಿಚಾಯಿಸಿದರು.

ADVERTISEMENT

‘ಗ್ರಾಮ ವಾಸ್ತವ್ಯಕ್ಕೆ ನಮ್ಮದೇನೂ ತಕರಾರು ಇಲ್ಲ. ಅದೊಂದು ಉತ್ತಮ ಪ್ರಯತ್ನ. ಮಂತ್ರಿಗಳು ಹಳ್ಳಿ ಜನರ ಜತೆಗೆ ಇದ್ದು ಕೆಲಸ ಮಾಡುವುದು ಒಳ್ಳೆಯ ಬೆಳವಣಿಗೆ. ಆದರೆ, ಈವರೆಗೆ ಕುಮಾರಸ್ವಾಮಿ ವಾಸ್ತವ್ಯ ಮಾಡಿದ ಯಾವ ಗ್ರಾಮ ಉದ್ಧಾರವಾಗಿದೆ? 2006ರಲ್ಲಿ ಜಿಲ್ಲೆಯ ಮಣ್ಣೂರ ಗ್ರಾಮದಲ್ಲೂ ಅವರು ವಾಸ್ತವ್ಯ ಮಾಡಿದ್ದರು. ‘ಸುವರ್ಣ ಗ್ರಾಮ’ ಯೋಜನೆಗೂ ಇದನ್ನು ಆಯ್ಕೆ ಮಾಡಿದ್ದರು. ಆದರೆ, ಒಂದೇಒಂದು ಮೂಲ ಸೌಕರ್ಯವೂ ಅಲ್ಲಿ ಇಲ್ಲ. ಆದ್ದರಿಂದ ಈ ವಾಸ್ತವ್ಯ ಬರೀ ಫೋಕಸ್‌ ಆಗದಿರಲಿ ಎಂಬುದಷ್ಟೇ ನಮ್ಮ ಕಳಕಳಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.