ಕಲಬುರಗಿ: ‘ಅಹಮದಾಬಾದ್‌ನಲ್ಲಿ ಸಂಭವಿಸಿದ ವಿಮಾನ ದುರಂತ ಪ್ರಕರಣವನ್ನು ಸುಪ್ರೀಂಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನಿಷ್ಪಕ್ಷಪಾತವಾಗಿ ಉನ್ನತ ಮಟ್ಟದಲ್ಲಿ ತನಿಖೆ ಮಾಡಬೇಕು’ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ಬಂದ ಮಾಹಿತಿ ಪ್ರಕಾರ ಕೆಲವರು ಲಂಡನ್‌ಗೆ ತೆರಳಲು ಆತುರರಾಗಿದ್ದರು. ಬೇಗನೆ ವಿಮಾನ ಬಿಡುವಂತೆ ಒತ್ತಡ ಹಾಕಿದ್ದರು. ವಾತಾವರಣ ಸರಿ ಇಲ್ಲ ಎಂದರೂ ಏನು ಆಗಲ್ಲ ವಿಮಾನ ಬಿಡುವಂತೆ ಹೇಳಿದ್ದಾರೆ ಎಂಬ ಮಾಹಿತಿ ಇದೆ. ಇಂತಹ ಸಂದರ್ಭದಲ್ಲಿ ಅಸತ್ಯ, ಕೆಟ್ಟದ್ದು ನುಡಿಯಬಾರದು. ಈ ಬಗ್ಗೆ ಪರಿಶೀಲನೆ ನಡೆಸಿ, ಸಮಗ್ರವಾಗಿ ತನಿಖೆ ಮಾಡಬೇಕು’ ಎಂದರು.
‘ತನಿಖೆಯ ಹೊಣೆಯನ್ನು ನ್ಯಾಯಮೂರ್ತಿಗೆ ವಹಿಸಿ ಮೂರು ತಿಂಗಳ ಗಡುವು ನೀಡಬೇಕು. ವಿಮಾನ ಹಾರಿದ ಕೆಲವೇ ನಿಮಿಷಗಳಲ್ಲಿ ನೆಲಕ್ಕೆ ಅಪ್ಪಳಿಸಿ ದೊಡ್ಡ ದುರಂತ ಸಂಭವಿಸಿದೆ. ಇದರಲ್ಲಿ ತಾಂತ್ರಿಕ ದೋಷವಾಗಿದೆಯಾ? ಪೈಲಟ್ ತಪ್ಪು ಮಾಡಿದ್ದರಾ? ಪ್ರಯಾಣಿಕರ ಒತ್ತಡ ಇತ್ತೋ? ಆಡಳಿತ ಅಥವಾ ಬೇರೆ ಯಾರಾದರು ಪ್ರಮಾದ ಎಸಗಿದ್ದಾರೋ ಎಂಬುದನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ವಿಮಾನ ಇಂಗ್ಲೆಂಡ್‌ಗೆ ತೆರಳುತ್ತಿದ್ದರಿಂದ ಅದರ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಹೊತ್ತುಕೊಳ್ಳಬೇಕು’ ಎಂದು ಹೇಳಿದರು.
‘ದುರಂತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡವ ಕೆಲಸವನ್ನು ಎಲ್ಲರೂ ಮಾಡಬೇಕು. ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ನೆರವಾಗಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.