ADVERTISEMENT

ಮಾವಿನ ಹಣ್ಣಿಗೆ ಡಿಮ್ಯಾಂಡಪೋ ಡಿಮ್ಯಾಂಡು! ದುಬಾರಿಯಾದರೂ ಸುವಾಸನೆಗೆ ಬರವಿಲ್ಲ

ಮಾರುಕಟ್ಟೆಗೆ ಲಗ್ಗೆ ಇಟ್ಟ ಹಣ್ಣುಗಳ ರಾಜ

ಶಶಿಧರ ಬಿಕ್ಕಣ್ಣವರ
Published 27 ಏಪ್ರಿಲ್ 2019, 20:00 IST
Last Updated 27 ಏಪ್ರಿಲ್ 2019, 20:00 IST
ಕಲಬುರ್ಗಿಯ ಸುಪರ್ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸುತ್ತಿರುವ ಗ್ರಾಹಕರು
ಕಲಬುರ್ಗಿಯ ಸುಪರ್ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಖರೀದಿಸುತ್ತಿರುವ ಗ್ರಾಹಕರು   

ಕಲಬುರ್ಗಿ: ಮ್ಯಾಂಗೋ, ಮ್ಯಾಂಗೋ... ಆಪುಸ್ಸಾ ಲೇಲೋ ದೋಸೌ, ತುತ್ತಾಪುರಿ ಲೇಲೋ ಸೌ. ಗ್ಯರಂಟಿ ಮಾಲ್‌. ಖಾಲಿ ಖಾಲಿ ಖಾಲಿ..!

ಸೂಪರ್‌ ಮಾರುಕಟ್ಟೆಯ ಸುತ್ತ ಹೋದರೆ ಸಾಕು ನಿಮ್ಮ ಕಿವಿಗೆ ಇವೇ ಪದಗಳು ಪದೇಪದೇ ಕೇಳಿಸುತ್ತವೆ. ರಸ್ತೆ ಪಕ್ಕದಲ್ಲಿ, ತಳ್ಳುವ ಗಾಡಿಗಳಲ್ಲಿ, ಒಪ್ಪ ಓರಣವಾಗಿ ಪೇರಿಸಿಟ್ಟ ಅಂಗಡಿಗಳಿಂದ ವ್ಯಾಪಾರಿಗಳು ಅರಚಾಡುವುದು ನಿಮ್ಮ ಚಿತ್ತ ಸೆಳೆಯುತ್ತದೆ. ಇದೀಗ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ತಹರೇವಾರು ಮಾವಿನ ಹಣ್ಣುಗಳ ವ್ಯಾಪಾರದ ಹುರುಪು ಇದು. ಒಬ್ಬರಿಗಿಂತ ಒಬ್ಬರು ದೊಡ್ಡ ಧ್ವನಿ ಮಾಡಿ ಕೂಗಿಕೂಗಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಯತ್ನಿಸುತ್ತಾರೆ. ಮತ್ತೆ ಕೆಲವರು ಕೈಯಲ್ಲಿ ನಾಲ್ಕಾರು ಹಣ್ಣು ಹಿಡಿದುಕೊಂಡು ಅಂಗಡಿ ಮುಂದೆ ದಾಟುವವರ ಮೂಗಿಗೆ ಹಿಡಿದು ಅವುಗಳ ಘಮಲು ಬಡಿಸುತ್ತಾರೆ. ಅಪ್ಪಿತಪ್ಪಿ ಅಂಗಡಿಯತ್ತ ಮುಖ ಮಾಡಿದರೆ ಸಾಕು; ಚರ್ರನೇ ಒಂದು ಹಣ್ಣು ಕೊಯ್ದು ತಿನ್ನಲು ಕೊಟ್ಟು ವ್ಯಾಪಾರ ಗಿಟ್ಟಿಸಿಕೊಳ್ಳುವುದು ಈಗ ಸಾಮಾನ್ಯ ನೋಟ.

ಹ‌ೌದು. ಪ್ರತಿ ವರ್ಷ ಹೀಗೇ ಆಗುತ್ತದೆ. ಬೇಸಿಗೆ ಆರಂಭಕ್ಕೆ ಎಲ್ಲೆಲ್ಲಿಂದಲೋ ಬರುವ ಮಾವಿನ ಹಣ್ಣುಗಳು ಏಕಾಏಕಿ ಸ್ಥಳೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಈ ಬಾರಿ ಕೂಡ ಅದೇ ಪರಿಸ್ಥಿತಿ ಮುಂದುವರಿದಿದೆ. ಮಳೆ ಇಲ್ಲ, ಬೆಲೆ ಇಲ್ಲ, ನೀರಿಲ್ಲ, ಬರಕ್ಕೆ ಪರಿಹಾರವಿಲ್ಲ. ಏನಿಲ್ಲವೆಂದರೂ ಮಾವಿನ ಹಣ್ಣಿಗೆ ಬೇಡಿಕೆ ನಿಲ್ಲುವುದಿಲ್ಲ. ಅಷ್ಟರಮಟ್ಟೆಗೆ ಇದು ವ್ಯಾಪಾರಿಗಳಿಗೂ, ಗ್ರಾಹಕರಿಗೂ ಅಪ್ಯಾಯಮಾನ.

ADVERTISEMENT

ಮಾರುಕಟ್ಟೆಯಲ್ಲಿ ಕಾಲ್ಲಿಟ್ಟರೆ ದೂರದಿಂದಲೇ ವಿವಿಧ ನಮೂನೆಯ ಮಾವಿನ ಹಣ್ಣಿನ ಘಮಘಮ ವಾಸನೆ ಬರುತ್ತದೆ. ಹಣ್ಣುಗಳನ್ನು ಯಾವಾಗ ಸವಿಯುತ್ತೇವೋ ಎಂದೆನಿಸಿ ನಾಲಿಗೆ ಚಪ್ಪರಿಸುವಂತಾಗುತ್ತದೆ. ಸುಂದರ ಹಳದಿ ಬಣ್ಣದ ಹಣ್ಣುಗಳು ಕಣ್ಣು ಕುಕ್ಕುತ್ತವೆ. ಹಾಗಾಗಿ, ಇದಕ್ಕೆ ಹಣ್ಣುಗಳ ರಾಜನ ಸ್ಥಾನ ನೀಡಲಾಗಿದೆ.

ಆಪುಸಾ, ತೋತಾಪುರಿ, ರತ್ನಗಿರಿ, ರಸಪೂರಿ, ಬಾದಾಮಿ, ಸಿಂಧೂರ, ಮರಗೋವಾ ಸೇರಿದಂತೆ ವಿವಿಧ ತಳಿಯ ಹಣ್ಣುಗಳು ಈಗ ಲಭ್ಯ. ಇದರಲ್ಲಿ ಮರಗೋವಾ, ರತ್ನಗಿರಿ ಹಾಗೂ ಬಾದಾಮಿ ಹಣ್ಣುಗಳನ್ನು ಹಾಗೇ ತಿನ್ನಲು ಬಲುರುಚಿ. ಆಪುಸಾ, ತೋತಾಪುರಿ, ರಸಪೂರಿ ಹಣ್ಣುಗಳು ಸಿಹಿಕರಣಿ ಮಾಡಲೆಂದೇ ಹುಟ್ಟಿದವು. ಹಾಗಾಗಿ, ಈ ಮೂರೂ ತಳಿಗಳಿಗೆ ಉಳಿದೆಲ್ಲಕ್ಕಿಂತ ಹೆಚ್ಚು ಡಿಮ್ಯಾಂಡು.

ಕಳೆದ ವಾರ ಹಣ್ಣಿನ ದರ ತುಸು ದುಬಾರಿಯಾಗಿತ್ತು. ಈಗ ಲೋಡ್‌ಗಟ್ಟಲೆ ಹಣ್ಣು ಬರುತ್ತಿದ್ದ ಕಾರಣ ದರದಲ್ಲೂ ಇಳಿಕೆಯಾಗಿದೆ. ಸಹಜವಾಗಿ ಜನ ಮುಗಿಬಿದ್ದು ಖರೀದಿ ನಡೆಸಿದ್ದಾರೆ.

ಬಿಸಿಲಿನ ಧಗೆಯಿಂದ ಬೆಚ್ಚಿಬಿದ್ದ ಜನ ಮಜ್ಜಿಗೆ, ಲಸ್ಸಿ, ಜ್ಯೂಸ್‌ ಮುಂತಾದ ತಂಪು ಪಾನೀಯಗಳತ್ತ ವಾಲಿದ್ದರು. ಅವರ ಗಮನ ಈಗ ಮಾವಿನ ಹಣ್ಣುಗಳ ಕಡೆಯೂ ವಾಲಿದೆ. ಮಾವಿನ ಹಣ್ಣಿನ ಜ್ಯೂಸ್‌, ಮಾವಿನ ಮಿಲ್ಕ್‌ಶೇಕ್‌ ಅಂಗಡಿಗಳ ಮುಂದೆ ಜನಜಂಗುಳಿ ಕಾಣಿಸುತ್ತಿದೆ.

ದುಪ್ಪಟ್ಟಾದ ದರ:

ಯಾದಗಿರಿ ಜಿಲ್ಲೆಯ ಸುರಪುರ, ಬೆಳಗಾವಿ, ಕೊಲ್ಹಾಪುರದಿಂದ ನಗರಕ್ಕೆ ಮಾವು ತರಲಾಗುತ್ತದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ್ದರಿಂದ ಕಳೆದ ವರ್ಷಕ್ಕಿಂತ ಈ ಬಾರಿ ಎಲ್ಲ ತಳಿಗಳ ದರವೂ ಹೆಚ್ಚಿದೆ ಎಂಬುದು ವ್ಯಾಪಾರಿಗಳ ಹೇಳಿಕೆ.

ಆಪುಸಾ ಕೆ.ಜಿ.ಗೆ ₹ 150ರಿಂದ ₹ 200, ತೋತಾಪುರಿ ₹ 100, ಸಿಂಧೂರ ₹ 150 ರಿಂದ ₹ 200 ಹೀಗೆ ದರ ಇದೆ. ಕೆ.ಜಿ ಲೆಕ್ಕದಲ್ಲಿ ಬೇಡಾದವರು ಬಾಕ್ಸ್ ಲೆಕ್ಕದಲ್ಲಿ ಖರೀದಿಸುತ್ತಾರೆ. ಒಂದು ಬಾಕ್ಸ್‌ನಲ್ಲಿ 12ರಿಂದ 18 ಹಣ್ಣುಗಳು ಇರುತ್ತವೆ. ಮತ್ತೆ ಕೆಲವರು ಡಜನ್‌ ಲೆಕ್ಕದಲ್ಲಿ ಖರೀದಿ ಮಾಡುತ್ತಾರೆ. ಈಗ ಡಜನ್ ಆಪುಸಾ ಹಣ್ಣಿಗೆ ₹ 800 ರಿಂದ ₹1,000 ದರವಿದೆ.

ಸೂಪರ್ ಮಾರ್ಕೆಟ್‌, ಜಗತ್ ವೃತ್ತ ಹಾಗೂ ಸರ್ದಾರ್ ವಲ್ಲಭಭಾಯ್‌ ಪಟೇಲ್ ವೃತ್ತ, ವಿದ್ಯಾನಗರ, ಕನ್ನಿ ಮಾರುಕಟ್ಟೆ, ಮುಸ್ಲಿಂ ಚೌಕ್‌, ರಾಮಮಂದಿರ ಸರ್ಕಲ್‌, ಶಹಾಬಾದ್‌ ರಸ್ತೆ ಮುಂತಾದೆಡೆ ಮಾವಿನ ಹಣ್ಣುಗಳು ಗ್ರಾಹಕರನ್ನು ಸೆಳೆಯುತ್ತಿವೆ. ಕೆಲವರು ತಳ್ಳುವ ಗಾಡಿಗಳಲ್ಲಿ ಹಣ್ಣು ಹಾಕಿಕೊಂಡು ಗಲ್ಲಿಗಲ್ಲಿ ಸುತ್ತಿ ಮಾರಾಟ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.