ADVERTISEMENT

ಮಾತೆ ಮಾಣಿಕೇಶ್ವರಿ ಪ್ರಕರಣ: ಹೈಕೋರ್ಟ್‌ಗೆ ಹಾಜರಾದ ಡಿಸಿ, ಎಸ್ಪಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 10:58 IST
Last Updated 14 ಜೂನ್ 2019, 10:58 IST
ಮಾತೆ ಮಾಣಿಕೇಶ್ವರಿ
ಮಾತೆ ಮಾಣಿಕೇಶ್ವರಿ    

ಕಲಬುರ್ಗಿ: ಸೇಡಂ ತಾಲ್ಲೂಕಿನ ಯಾನಾಗುಂದಿಯ ಮಾತೆ ಮಾಣಿಕೇಶ್ವರಿ ದೇವಿ ಅವರನ್ನು ಟ್ರಸ್ಟ್‌ನವರು ಒತ್ತಾಯ ಪೂರ್ವಕವಾಗಿ ಕೂಡಿಹಾಕಿದ್ದಾರೆ. ಅವರನ್ನು ಬಿಡುಗಡೆ ಮಾಡಿಸಬೇಕು ಎಂಬ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖುದ್ದು ಹಾಜರಾಗಿ ಹೇಳಿಕೆ ನೀಡಿದರು.

ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಹಾಗೂ ಅಶೋಕ ನಿಜಗಣ್ಣವರ ಅವರಿದ್ದ ವಿಭಾಗೀಯ ಪೀಠದ ಎದುರು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹಾಗೂ ಎಸ್ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಹಾಜರಾದರು.

ಮಾತೆ ಮಾಣಿಕೇಶ್ವರಿ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ನೀಡುವಂತೆ ಪೀಠವು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಮೇ 31ರಂದು ಯಾನಾಗುಂದಿಗೆ ಭೇಟಿ ನೀಡಿದ್ದ ಡಿ.ಸಿ, ಎಸ್ಪಿ ಹಾಗೂ ವೈದ್ಯಾಧಿಕಾರಿಗಳ ತಂಡ ಮಾತೆ ಮಾಣಿಕೇಶ್ವರಿ ಅವರೊಂದಿಗೆ ತೆಲುಗು ಭಾಷಾಂತರಕಾರರ ಸಹಾಯದಿಂದ ಸಂಭಾಷಣೆ ‌ನಡೆಸಿತ್ತು.

ADVERTISEMENT

ಈ ಸಂದರ್ಭದಲ್ಲಿ ಮಾತೆ ಅವರು, ತಮ್ಮನ್ನು ಯಾರೂ ಕೂಡಿ ಹಾಕಿಲ್ಲ. ತಾವು ಆರೋಗ್ಯದಿಂದ ಇರುವುದಾಗಿ ತಿಳಿಸಿದ್ದರು. ಆದರೆ‌ ವೈದ್ಯಕೀಯ ‌ತಪಾಸಣೆಗೆ ಒಳಪಡಲು ನಿರಾಕರಿಸಿದ್ದರು.

ಮಾಣಿಕೇಶ್ವರಿ ಅವರ ಕಾಲಿಗೆ ಪೆಟ್ಟಾಗಿದ್ದು, ಹಾಸಿಗೆ ಹಿಡಿದಿದ್ದಾರೆ. ನಡೆದಾಡಲು ಆಗುತ್ತಿಲ್ಲ. ಹಲವು ವರ್ಷಗಳಿಂದ ಆಹಾರ ಸೇವಿಸದೇ ಇರುವುದರಿಂದ ನಿತ್ರಾಣಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ವರದಿಯಲ್ಲಿ ತಿಳಿಸಿದ್ದರು.

ಆದರೆ, ಖುದ್ದು ಹಾಜರಾಗಲು ಹೈಕೋರ್ಟ್ ಸೂಚಿಸಿದ್ದರಿಂದ ಡಿ.ಸಿ. ಹಾಗೂ ಎಸ್ಪಿ ಶುಕ್ರವಾರ ನ್ಯಾಯಪೀಠದ ಎದುರು ಹಾಜರಾದರು.

ಜೂನ್ 17ಕ್ಕೆ ಪ್ರಕರಣದ ವಿಚಾರಣೆಯನ್ನು ‌ಮುಂದೂಡಲಾಯಿತು.

ನಿಡಗುಂದಾ ಶಿವಕುಮಾರ್ ಎಂಬುವವರು ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿ‌ ಸಲ್ಲಿಸಿದ್ದರಿಂದ ಕಲಬುರ್ಗಿ ಹೈಕೋರ್ಟ್ ಪೀಠ ಹಲವು ದಿನಗಳಿಂದ ಅರ್ಜಿ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.