ಚಿಂಚೋಳಿ ವನ್ಯಜೀವಿ ಧಾಮದಲ್ಲಿರುವ ಕುಸ್ರಂಪಳ್ಳಿ ಗ್ರಾಮದ ಬಳಿಯ ಮಾಣಿಕಪುರ ಜಲಪಾತ
ಪ್ರಜಾವಾಣಿ ಚಿತ್ರ: ಜಗನ್ನಾಥ ಡಿ. ಶೇರಿಕಾರ
ಚಿಂಚೋಳಿ: ದೃಷ್ಟಿಯುದ್ದಕ್ಕೂ ಹಸಿರು ರಾಶಿ, ಚಿಲಿಪಿಲಿ ಗುಟ್ಟುವ ಬಾನಾಡಿಗಳ ಕಲರವ, ಇವುಗಳ ಮಧ್ಯೆ ಎಲ್ಲೆಂದರಲ್ಲಿ ಜುಳು ಜುಳು ಸದ್ದು, ಕಾಡೊಳಗೆ ಹೆಜ್ಜೆ ಹಾಕುತ್ತ ನಡೆದರೆ ಚಾರಣದ ಅನುಭೂತಿ. ಈ ಅನುಭವ ನಿಮ್ಮದಾಗಬೇಕಾದರೆ ನೀವೊಮ್ಮೆ ಇಲ್ಲಿಗೆ ಭೇಟಿ ನೀಡಲೇಬೇಕು.
ಚಿಂಚೋಳಿ ವನ್ಯಜೀವಿ ಧಾಮದ ಕುಸ್ರಂಪಳ್ಳಿ ಬಳಿ ಕಾಡಿನಲ್ಲಿರುವ ಜನವಸತಿ ರಹಿತ ಗ್ರಾಮವಾದ ಮಾಣಿಕಪುರ ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಹರಿಯುವ ರಾಚೇನಹಳ್ಳ ನಾಲಾ. ಇದೊಂದು ಸರಣಿ ಜಲಪಾತಗಳ ಸಂಗಮ ತಾಣ. ಜಲಪಾತದಲ್ಲಿ ಈಗ ಹರಿಯುತ್ತಿರುವ ನೀರು ಅಕ್ಷರಶಃ ಹಾಲಿನಂತೆ ಗೋಚರಿಸುತ್ತಿದೆ. ಕಪ್ಪು ಕಲ್ಲುಗಳ ಬೃಹತ್ ಬಂಡೆಗಳ ಮೇಲೆ ಹಾಲು ಚೆಲ್ಲಿದಂತೆ ಕಾಣಿಸುವ ಮಾಣಿಕಪುರ ಜಲಪಾತ ನೋಡಿದರೆ ಪ್ರಕೃತಿಯ ಸೌಂದರ್ಯಕ್ಕೆ ಮನ ಸೋಲುವುದರಲ್ಲಿ ಎರಡು ಮಾತಿಲ್ಲ.
ಚಿಂಚೋಳಿ ತಾಲ್ಲೂಕು ಕೇಂದ್ರದಿಂದ ಸುಮಾರು 15 ಕಿ.ಮೀ ಅಂತರದಲ್ಲಿರುವ ಜಲಪಾತ ಪ್ರವಾಸಿಗರನ್ನು ಸೆಳೆಯುತ್ತಿದೆ. ಮುರ್ಕಿ ಹಂದರಕಿ ರಾಜ್ಯ ಹೆದ್ದಾರಿ 122ರಲ್ಲಿ ಬರುವ ಕುಸ್ರಂಪಳ್ಳಿ ಗ್ರಾಮದಿಂದ 1 ಕಿ.ಮೀವರೆಗೆ ವಾಹನಗಳಲ್ಲಿ ತೆರಳಿ ಅಲ್ಲಿಂದ 2 ಕಿ.ಮೀ ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ರಾಚೇನಹಳ್ಳ ನಾಲಾ ಕಾಣ ಸಿಗುತ್ತದೆ.
ನಾಲೆಯಲ್ಲಿ ನೀರಿನ ಭೋರ್ಗರೆತ ಮನಸ್ಸನ್ನು ಹದಗೊಳಿಸುತ್ತದೆ. ಇಲ್ಲಿನ ಜಲಪಾತ ವೀಕ್ಷಿಸಲು ತೆರಳುವ ಮೊದಲು ಅರಣ್ಯ ಇಲಾಖೆಗೆ ಸಂಪರ್ಕಿಸಿ ಸುರಕ್ಷತೆಯಿಂದ ತೆರಳುವುದು ಉತ್ತಮ.
ರಾಜ್ಯ ಹೆದ್ದಾರಿಯಿಂದ ಅರ್ಧ ಕಿ.ಮೀ ಕಚ್ಚಾ ರಸ್ತೆಯಿದ್ದು ನಂತರ ಅರಣ್ಯ ಇಲಾಖೆಯವರು ವಾಹನಗಳನ್ನು ಬರದಂತೆ ಗೇಟು ಅಳವಡಿಸಿದ್ದು, ಪ್ರವಾಸಿಗರು ಕಾಲ್ನಡಿಗೆಯಲ್ಲಿಯೇ ತೆರಳಬೇಕು. ಇದರಿಂದ ಚಾರಣದ ಅನುಭವವೂ ಪ್ರವಾಸಿಗರಿಗೆ ದೊರೆಯುತ್ತದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಧಾಮದಲ್ಲಿರುವ ಕುಸ್ರಂಪಳ್ಳಿ ಗ್ರಾಮದ ಬಳಿಯ ಮಾಣಿಕಪುರ ಜಲಪಾತ
ಕಲಬುರಗಿ ಜಿಲ್ಲೆಯ ಚಿಂಚೋಳಿ ವನ್ಯಜೀವಿ ಧಾಮದಲ್ಲಿರುವ ಕುಸ್ರಂಪಳ್ಳಿ ಗ್ರಾಮದ ಬಳಿಯ ಮಾಣಿಕಪುರ ಜಲಪಾತ
ನಿಸರ್ಗದ ಸೌಂದರ್ಯ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಮೋಜು ಮಸ್ತಿ ಮಾಡಲು ಅವಕಾಶವಿಲ್ಲ. ಪ್ಲಾಸ್ಟಿಕ್‌ಗಳನ್ನು ತಂದಿದ್ದರೆ ಬಳಸಿದ ನಂತರ ಮರಳಿ ಜತೆಗೆ ಒಯ್ಯಬೇಕುಸಿದ್ಧಾರೂಢ ಹೊಕ್ಕುಂಡಿ ಉಪ ವಲಯ ಅರಣ್ಯಾಧಿಕಾರಿ ಚಿಂಚೋಳಿ
ಮಾಣಿಕಪುರ ಜಲಪಾತದ ಪ್ರವಾಸಿ ತಾಣದಲ್ಲಿ ಮೂಲ ಸೌಕರ್ಯಗಳಿಲ್ಲ. ಸುರಕ್ಷತೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಮಣ್ಣಿನ ರಸ್ತೆ ಪುನರ್ ನಿರ್ಮಿಸಬೇಕುಗೌಡಪ್ಪ ಪಾಟೀಲ ಪ್ರವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.