ADVERTISEMENT

‘ನಾಲವಾರ ಮಠದ ಸಮಭಾವ ನಾಡಿಗೆ ಮಾದರಿ’

‘ಮಾತೋಶ್ರೀ ಪ್ರಶಸ್ತಿ’ ಸ್ವೀಕಾರ: ಕಲಾವಿದೆ ಮಂಜಮ್ಮ ಜೋಗತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 7:24 IST
Last Updated 6 ಏಪ್ರಿಲ್ 2025, 7:24 IST
ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ಧೇಶ್ವರ ಮಠದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ‘ಮಾತೋಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಿದ್ಧತೋಟೇಂದ್ರ ಶಿವಾಚಾರ್ಯರು, ಚಂದ್ರಗುಂಡ ಶಿವಾಚಾರ್ಯರು, ಶಾಂತರುದ್ರಮುನಿ ಸ್ವಾಮೀಜಿ, ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ರಾಖೇಶ ಸ್ವಾಮೀಜಿ ಉಪಸ್ಥಿತರಿದ್ದರು
ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ಧೇಶ್ವರ ಮಠದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರಿಗೆ ‘ಮಾತೋಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸಿದ್ಧತೋಟೇಂದ್ರ ಶಿವಾಚಾರ್ಯರು, ಚಂದ್ರಗುಂಡ ಶಿವಾಚಾರ್ಯರು, ಶಾಂತರುದ್ರಮುನಿ ಸ್ವಾಮೀಜಿ, ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ರಾಖೇಶ ಸ್ವಾಮೀಜಿ ಉಪಸ್ಥಿತರಿದ್ದರು   

ಕಲಬುರಗಿ: ‘ನಾಲವಾರ ಮಠವು ಜಾತಿ, ಮತ, ಪಂಥ, ಲಿಂಗಭೇದವಿಲ್ಲದೇ ಸರ್ವರನ್ನೂ ಏಕಮುಖವಾಗಿ ಕಂಡು ಎಲ್ಲರನ್ನೂ ಸಮಭಾವದಿಂದ ಕಾಣುವ ಮೂಲಕ ನಾಡಿಗೆ ಮಾದರಿಯಾಗಿದೆ’ ಎಂದು ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಹೇಳಿದರು.

ಚಿತ್ತಾಪುರ ತಾಲ್ಲೂಕಿನ ನಾಲವಾರದ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದ ಸಿದ್ಧತೋಟೇಂದ್ರ ಸುವರ್ಣ ಭವನದಲ್ಲಿ ಶನಿವಾರ ಗೌರಮ್ಮ ತಾಯಿಯವರ 8ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಹಾಗೂ ‘ಮಾತೋಶ್ರೀ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.

‘ಮಾತೋಶ್ರೀ ಪ್ರಶಸ್ತಿಯನ್ನು ಲಿಂಗತ್ವ ಅಲ್ಪಸಂಖ್ಯಾತರ ನನ್ನಂತಹ ಕಲಾವಿದೆಗೆ ನೀಡುವುದರ ಮೂಲಕ ಮಠವು ಲಿಂಗಭೇದವನ್ನೂ ಸಹ ತೊಡೆದು ಹಾಕಿದೆ. ವೇದಿಕೆಯ ಮೇಲೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿ ಎಲ್ಲರೂ ಸಮಾನರು ಎಂಬ ಭಾವವನ್ನು ಸಾರಿದೆ’ ಎಂದರು.

ADVERTISEMENT

‘ಜಗತ್ತಿನಲ್ಲಿ ನನ್ನ ದೈಹಿಕ ಬದಲಾವಣೆ ಕಾರಣದಿಂದ ಪಡಬಾರದ ನೋವು-ಅವಮಾನಗಳನ್ನು ಅನುಭವಿಸಿದೆ. ಸಾವಿನ ಕಡೆಗೆ ಮುಖ ಮಾಡಿದಾಗ ನನಗೆ ಬದುಕುವ ಆತ್ಮಸ್ಥೈರ್ಯ ನೀಡಿದ್ದು ಜಾನಪದ ಕಲೆ. ಅಂತಹ ಕಲೆಯೇ ಇಂದು ನನ್ನನ್ನು ಹಳ್ಳಿಯಿಂದ ದಿಲ್ಲಿಯವರೆಗೆ ತಂದು ನಿಲ್ಲಿಸಿದೆ. ಘನತೆಯ ಬದುಕು ಕಟ್ಟಿಕೊಳ್ಳಲು ಹಾದಿಯೂ ಮಾಡಿಕೊಟ್ಟಿದೆ’ ಎಂದು ಹೇಳಿದರು.

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಮಾತನಾಡಿ, ‘ದಶಕಗಳ ಹಿಂದೆ ಮಠ ಆರ್ಥಿಕವಾಗಿ ಸದೃಢವಾಗಿರಲಿಲ್ಲ. ಮಠಕ್ಕೆ ಬಂದ ಭಕ್ತರನ್ನು ಮಕ್ಕಳಂತೆ ಪಾಲನೆ, ಪೋಷಣೆ ಮಾಡಿ ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದವರು ಗೌರಮ್ಮ ತಾಯಿಯವರು’ ಎಂದರು.

ಹೊನ್ನಕಿರಣಿಗಿ ರಾಚೋಟೇಶ್ವರ ಮಠದ ಚಂದ್ರಗುಂಡ ಶಿವಾಚಾರ್ಯರು ಮಾತನಾಡಿ, ‘ಸಿದ್ಧತೋಟೇಂದ್ರ ಶಿವಾಚಾರ್ಯರ ಜನ್ಮದಾತೆಯಾಗಿ, ಅವರನ್ನು ಕಾಳಜಿಯಿಂದ ಪೋಷಣೆ ಮಾಡಿದ್ದರು. ಅವರಲ್ಲಿ ಅತ್ಯುತ್ತಮ ಸಂಸ್ಕಾರವನ್ನು ಬಿತ್ತಿ ಮಹಾತ್ಮರನ್ನಾಗಿ ರೂಪಿಸಿದ ಮಹಾಮಾತೆ’ ಎಂದು ಹೇಳಿದರು.

ಪೀಠಾಧಿಪತಿ ಸಿದ್ಧತೋಟೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕರಡಕಲ್ಲ ಕೋರಿಸಿದ್ಧೇಶ್ವರ ಶಾಖಾಮಠದ ಶಾಂತರುದ್ರಮುನಿ ಸ್ವಾಮೀಜಿ, ಮುದನೂರಿನ ಸಿದ್ಧ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಾಂಡೂರಿನ ರಾಖೇಶ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಪ್ರಾಧ್ಯಾಪಕಿ ಜಗದೇವಿ ಕಲಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಮಹೇಶ ಸ್ವಾಮಿ ಚಿಂಚೋಳಿ, ಸಂಗಾರೆಡ್ಡಿ ಗೌಡ ಮಲ್ಹಾರ, ಶಿವಲೀಲಾ ಯೋಗಾನಂದ ಮಳಿಮಠ, ನಿರ್ಮಲಾದೇವಿ ಮಹೇಶ ಸ್ವಾಮಿ, ನಾಗಮ್ಮಗೌಡ್ತಿ ಮಲ್ಲಣ್ಣಗೌಡ, ಆನಂದ ಮದ್ರಿ ಬೆಂಗಳೂರು, ಮಂಜುನಾಥ ರಾವೂರ, ಮಹಾದೇವ ಗಂವ್ಹಾರ, ವಿರುಪಾಕ್ಷಯ್ಯ ಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು. ಮಠದ ಶಿವಾನುಭವ ಸಂಚಾಲಕ ಸಿದ್ದರಾಜರೆಡ್ಡಿ ಯಾದಗಿರಿ ಸ್ವಾಗತಿಸಿದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿ, ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.