ಅಫಜಲಪುರ: ಜಿಲ್ಲೆಯಲ್ಲಿ ಮಳೆ ತಗ್ಗಿದ್ದರೂ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ನದಿಗಳು ಮೈದುಂಬಿ ಹರಿಯುತ್ತಿವೆ. ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 1.50 ಲಕ್ಷ ಕ್ಯೂಸೆಕ್ ನೀರು ಬಿಟ್ಟಿದ್ದು, ತಾಲ್ಲೂಕಿನ ಮಣ್ಣೂರು ಗ್ರಾಮದ ಯಲ್ಲಮ್ಮದೇವಿ ದೇವಸ್ಥಾನ ಜಲಾವೃತಗೊಂಡಿದೆ.
ಮುಂಜಾಗ್ರತಾ ಕ್ರಮವಾಗಿ ಗುರುವಾರ ಸಂಜೆ ದೇವಸ್ಥಾನದ ಮುಖ್ಯದ್ವಾರವನ್ನು ಯಲ್ಲಮ್ಮದೇವಿ ಟ್ರಸ್ಟ್ ಕಮಿಟಿ ಬಂದ್ ಮಾಡಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಭಕ್ತರಿಗೆ ಹೊರಗಿನಿಂದ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.
ಭೀಮಾ ನದಿ ಮೈದುಂಬಿ ಹರಿಯುತ್ತಿರುವ ಕಾರಣ ಭುಯ್ಯಾರ ಬ್ಯಾರೇಜ್ ಮೇಲೆ ನೀರು ಬಂದಿದ್ದು, ಈ ಮಾರ್ಗದ ಮಣ್ಣೂರ–ಇಂಡಿಗೆ ರಸ್ತೆ ಸಂಚಾರ ಬಂದ್ ಆಗಿದೆ.
‘ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವ ಕಾರಣ ಉಜನಿ ಜಲಾಶಯದಿಂದ ಈಗಾಗಲೇ ಬಿಟ್ಟಿರುವ 1.50 ಲಕ್ಷ ಕ್ಯೂಸೆಕ್ ಸೊನ್ನ ಬ್ಯಾರೇಜ್ ತಲುಪಿದೆ. ಇದೀಗ ಅಷ್ಟೇ ಪ್ರಮಾಣದ ನೀರನ್ನು 25 ಗೇಟ್‌ಗಳ ಸೊನ್ನ ಬ್ಯಾರೇಜ್‌ನಿಂದ ಭೀಮಾ ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ. ಉಜನಿಯಿಂದ ಇನ್ನಷ್ಟು ನೀರು ಹರಿದು ಬರುವ ನಿರೀಕ್ಷೆಗಳಿದ್ದು, ನದಿಯ ದಡದ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು’ ಎಂದು ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸಂತೋಷ್ ಕುಮಾರ್ ಸಜ್ಜನ್ ಹಾಗೂ ತಹಶೀಲ್ದಾರ್ ಸಂಜುಕುಮಾರ್ ದಾಸರ್ ತಿಳಿಸಿದ್ದಾರೆ.
ಸೊನ್ನ ಬ್ಯಾರೇಜ್‌ನಿಂದ ನದಿ ಪಾತ್ರಕ್ಕೆ ಅಪಾರ ಪ್ರಮಾಣದ ನೀರು ಹರಿಸಿದ್ದರಿಂದ ಘತ್ತರಗಾ ಹಾಗೂ ದೇವಲಗಾಣಗಾಪುರ ಸೇತುವೆ ಮುಳುಗಲು ಗುರುವಾರ ರಾತ್ರಿ 11 ಗಂಟೆ ಹೊತ್ತಿಗೆ ಎರಡು ಅಡಿಗಳಷ್ಟೇ ಬಾಕಿ ಉಳಿದಿತ್ತು ಎಂದು ಮೂಲಗಳು ತಿಳಿಸಿವೆ.
ಘತ್ತರಗಾ ಗ್ರಾಮದ ಸೇತುವೆ ಮುಳುಗಡೆಯಾದರೆ, ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತವಾಗಿದೆ. ದೇವಲಗಾಣಗಾಪುರದ ಸೇತುವೆ ಜಲಾವೃತಗೊಂಡರೆ, ಜೇವರ್ಗಿ ತಾಲ್ಲೂಕಿನ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ.
ಬೆಳೆ ಹಾನಿ: ಉಜನಿ ಜಲಾಶಯದ ಮೂಲಕ ಭೀಮಾ ನದಿಗೆ ಹೆಚ್ಚು ನೀರು ಬಿಟ್ಟಿರುವುದರಿಂದ ನದಿಯ ಎರಡು ದಡದಲ್ಲಿನ ಮುಂಗಾರು ಬೆಳೆಗಳು ಹಾಳಾಗುತ್ತಿವೆ. ರೈತರ ಪಂಪಸೆಟ್‌ಗಳು ನದಿಯಲ್ಲಿ ಮುಳುಗಿವೆ. ಭೀಮಾ ನದಿ ಹಿನ್ನೀರಿನಿಂದ ಬಂಕಲ ಗ್ರಾಮ ಸೇರಿದಂತೆ ಎಂಟ್ಹತ್ತು ಗ್ರಾಮಗಳ ಜಮೀನುಗಳಲ್ಲಿ ನೀರು ನಿಂತು ಬೆಳೆಗಳು ಜಲಾವೃತಗೊಂಡಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.