ADVERTISEMENT

ಮಾರುಕಟ್ಟೆಗೆ ದಾಂಗುಡಿ ಇಟ್ಟ ಜನರು- ಮೂರು ದಿನಗಳವರೆಗೆ ದೀಪಾವಳಿ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 3:00 IST
Last Updated 3 ನವೆಂಬರ್ 2021, 3:00 IST
ದೀಪಾವಳಿ ಅಂಗವಾಗಿ ಮಂಗಳವಾರ ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದ ನೋಟ
ದೀಪಾವಳಿ ಅಂಗವಾಗಿ ಮಂಗಳವಾರ ಕಲಬುರಗಿಯ ಸೂಪರ್‌ ಮಾರ್ಕೆಟ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಖರೀದಿಯಲ್ಲಿ ತೊಡಗಿದ್ದ ನೋಟ   

ಕಲಬುರಗಿ: ಬೆಳಕಿನ ಹಬ್ಬ ದೀಪಾವಳಿಯ ಅದ್ಧೂರಿ ಆಚರಣೆಗೆ ಕ್ಷಣಗಣನೆ ಆರಂಭವಾಗಿದೆ.

ಕೋವಿಡ್‌ ಸೋಂಕು ಕಡಿಮೆಯಾದ ಬಳಿಕ ಬರುತ್ತಿರುವ ಮೊದಲ ದೊಡ್ಡ ಹಬ್ಬವಾದ್ದರಿಂದ ಜನರು ಬಟ್ಟೆ, ಆಕಾಶಬುಟ್ಟಿ, ಹಣತೆ, ಚಿನ್ನಾಭರಣಗಳು, ವಾಹನಗಳು, ‍ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಮುಗಿ ಬೀಳುತ್ತಿದ್ದಾರೆ.

ನಗರದ ಸೂ‍ಪರ್‌ ಮಾರ್ಕೆಟ್‌ನಲ್ಲಿ ಕಳೆದ ಎರಡು ಮೂರು ದಿನಗಳಿಂದ ಜನಸಂಚಾರ ವಿರಳವಾಗುವ ಮಧ್ಯಾಹ್ನದ ಹೊತ್ತಿನಲ್ಲಿ ಕೊಳ್ಳುವವರಿಂದ ಗಿಜಿಗುಡುತ್ತಿದೆ. ಎರಡು ವರ್ಷಗಳಿಂದ ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿದ್ದ ವ್ಯಾಪಾರಿಗಳ ಮುಖದಲ್ಲೂ ಮಂದಹಾಸ ಕಂಡು ಬರುತ್ತಿದೆ. ಬಟ್ಟೆ ಅಂಗಡಿಗಳು ದೂರದ ಮುಂಬೈ, ಹೈದರಾಬಾದ್, ಸೂರತ್‌ಗಳಿಂದ ಹೊಸ ಬಟ್ಟೆಯ ಸಂಗ್ರಹವನ್ನು ತರಿಸಿಕೊಂಡಿವೆ. ಅಂಗಡಿಗಳ ಹೊರಭಾಗದಲ್ಲಿ ಝಗಮಗಿಸುವ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿದೆ.

ADVERTISEMENT

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಭಾರದ ಮಧ್ಯೆಯೂ ಜನರು ಹೊಸ ಬೈಕ್, ಕಾರುಗಳನ್ನು ಖರೀದಿಸಲು ಮುಂದೆ ಬರುತ್ತಾರೆ ಎಂಬ ನಿರೀಕ್ಷೆಯಿಂದ ಬೈಕ್, ಸ್ಕೂಟರ್, ಕಾರಿನ ಶೋರೂಮ್‌ಗಳು ಜನರ ಓಡಾಟ ಹೆಚ್ಚಿರುವ ರಸ್ತೆಗಳ ಪಕ್ಕದಲ್ಲಿ ವಾಹನಗಳ ಪ್ರದರ್ಶನ ಮತ್ತು ಮಾರಾಟವನ್ನು ಆಯೋಜಿಸುತ್ತಿದ್ದಾರೆ. ಎರಡು ದಿನಗಳಿಂದ ವಾಹನ ಮಾರಾಟದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.

ವಿದ್ಯುತ್ ದೀಪದ ಬೆಳಕಿನಲ್ಲಿ ನಗರವನ್ನು ನೋಡುವುದೇ ಚಂದ. ಎಸ್‌ವಿಪಿ ವೃತ್ತದಿಂದ ಸೂಪರ್‌ ಮಾರ್ಕೆಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಇಕ್ಕೆಲಗಳಲ್ಲಿನ ವಾಣಿಜ್ಯ ಮಳಿಗೆಗಳು, ಹೋಟೆಲ್, ಬಟ್ಟೆ ಅಂಗಡಿ, ಮಾಲ್‌ಗಳು, ಸರ್ಕಾರಿ ಕಚೇರಿ ಇರುವ ಕಟ್ಟಡಗಳು, ವೃತ್ತಗಳನ್ನು ಮದುವಣಗಿತ್ತಿಯಂತೆಸಿಂಗರಿಸಲಾಗಿದೆ.

ಕಿರಾಣಿ ಅಂಗಡಿ, ಶಾಪಿಂಗ್ ಮಾಲ್‌ಗಳ ಎದುರು ತರಹೇವಾರಿ ಆಕಾಶಬುಟ್ಟಿಗಳನ್ನು ತೂಗಿ ಹಾಕಲಾಗಿದ್ದು, ಜನರು ತಂಡೋಪತಂಡವಾಗಿ ಕುಟುಂಬದ ಸದಸ್ಯರೊಂದಿಗೆ ಬಂದು ಖರೀದಿ ಮಾಡುತ್ತಿದ್ದಾರೆ. ದೀಪಾವಳಿ ಎಂದರೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದವರಿಗೆ ಹೊಸ ಆರ್ಥಿಕ ವರ್ಷ ಆರಂಭವಾದಂತೆ. ಹೀಗಾಗಿ, ಅಂಗಡಿಯನ್ನು ಸ್ವಚ್ಛಗೊಳಿಸಿ ಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಮಾಡಲಾಗುತ್ತದೆ. ಅದಕ್ಕಾಗಿ ಹೊಸದಾಗಿ ಸುಣ್ಣ ಬಣ್ಣ ಬಳಿದು ತಳಿರು ತೋರಣಗಳಿಂದ ಸಿಂಗರಿಸುವ ಕಾರ್ಯವೂ ವೇಗ ಪಡೆದುಕೊಂಡಿದೆ.

ಹಬ್ಬದ ಖರೀದಿಗಾಗಿ ಕುಟುಂಬ ಸದಸ್ಯರೊಂದಿಗೆ ನಗರದ ವಿವಿಧ ಬಡಾವಣೆಗಳ ಜನರಷ್ಟೇ ಅಲ್ಲದೇ ಸುತ್ತಮುತ್ತಲಿನ ತಾಲ್ಲೂಕಿನಿಂದಲೂ ವಾಹನಗಳನ್ನು ತೆಗೆದುಕೊಂಡು ಬರುತ್ತಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಗೂ ಸಿಹಿಖಾದ್ಯಗಳಿಗೂ ವಿಶೇಷ ನಂಟು ಹೀಗಾಗಿ, ಬಹುತೇಕ ಮನೆಗಳಲ್ಲಿ ಖಾದ್ಯಕ್ಕೆ ಬೇಕಾದ ವಸ್ತುಗಳ ಖರೀದಿಯೂ ಆಗಿದೆ.

ಹಬ್ಬದ ಸಂದರ್ಭದಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೂ ಜನರು ಆಸಕ್ತಿ ತೋರಿಸುತ್ತಾರೆ. ಹೀಗಾಗಿ, ನಗರದ ಪ್ರಮುಖ ಎಲೆಕ್ಟ್ರಾನಿಕ್ಸ್ ಮಳಿಗೆಗಳು, ಫರ್ನೀಚರ್ ಅಂಗಡಿಗಳು ವಿಶೇಷ ರಿಯಾಯಿತಿಯನ್ನು ಘೋಷಿಸಿವೆ. ಸುಮಾರು 20 ತಿಂಗಳಿಂದ ಸಾರ್ವಜನಿಕರಿಗೆ ಕೊರೊನಾ ಭೀತಿಯಿಂದಾಗಿ ಹಬ್ಬ ಆಚರಣೆಗೆ ಅನುಮತಿ ಇರಲಿಲ್ಲ. ಹೀಗಾಗಿ, ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.