ADVERTISEMENT

ಅಫಜಲಪುರ: ಮಳೆಗೆ ಮಾಶಾಳದ 4 ಕೆರೆಗಳು ಭರ್ತಿ

ಶಿವಾನಂದ ಹಸರಗುಂಡಗಿ
Published 15 ಜುಲೈ 2020, 18:05 IST
Last Updated 15 ಜುಲೈ 2020, 18:05 IST
ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ರಾಮನಗರದ ಗೋಕಾಟ ಎಂದು ಕರೆಯುವ ಕೆರೆ ಬುಧವಾರ ಭರ್ತಿಯಾಗಿದೆ
ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದ ರಾಮನಗರದ ಗೋಕಾಟ ಎಂದು ಕರೆಯುವ ಕೆರೆ ಬುಧವಾರ ಭರ್ತಿಯಾಗಿದೆ   

ಅಫಜಲಪುರ: ತಾಲ್ಲೂಕಿನಲ್ಲಿ ಮಾಶಾಳ ಗ್ರಾಮದಲ್ಲಿ ಮಂಗಳವಾರ, ಬುಧವಾರ ಸುರಿದ ಮಳೆಯಿಂದ ನರೇಗಾ ಯೋಜನೆ ಅಡಿಯಲ್ಲಿ ನಿರ್ಮಿಸಿದ 4 ಕೆರೆಗಳಿಗೆ ನೀರು ಬಂದಿದ್ದು, ಗ್ರಾಮಸ್ಥರಲ್ಲಿ ಸಂತಸ ತಂದಿದೆ.

ಮಾಶಾಳದಲ್ಲಿ ಕೃಷಿ ಭಾಗ್ಯ ಹಾಗೂ ತೋಟಗಾರಿಕೆ ಇಲಾಖೆಯಿಂದ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ನರೇಗಾದಲ್ಲಿ 4 ಕೆರೆಗಳನ್ನು ತೋಡಲಾಗಿದೆ. ಗ್ರಾಮದಲ್ಲಿ ವಿವಿಧ ಯೋಜನೆಗಳಲ್ಲಿ ಕೊರೆದಿರುವ ನೂರಕ್ಕೂ ಹೆಚ್ಚು ಕೊಳವೆ ಬಾವಿಗಳಿವೆ. ಕೆಲವು ಹಾಳು ಬಾವಿಗಳಿವೆ. ಕೆರೆಗಳು ಮತ್ತು ಕೃಷಿ ಹೊಂಡಗಳು ತುಂಬಿಕೊಂಡಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎನ್ನುತ್ತಾರೆ ಗ್ರಾಮಸ್ಥರು.

ಕಳೆದ 2– 3 ವರ್ಷಗಳಿಂದ ಸರಿಯಾಗಿ ಮಳೆಯಾಗದ ಕಾರಣ ಕೃಷಿ ಹೊಂಡಗಳು, ಕೆರೆಗಳು ತುಂಬಿರಲಿಲ್ಲ. ಅವುಗಳಲ್ಲಿ ರಾಮನಗರದ ‘ಗೋಕಾಟ’ ಎಂದು ಕರೆಯುವ ಕೆರೆ ಈಗ ಭರ್ತಿಯಾಗಿದೆ. ಇನ್ನೂ ಹೀಗೆ 2 – 3 ಮಳೆ ಬಂದರೆ ಕೆರೆಗಳೆಲ್ಲ ಭರ್ತಿಯಾಗಿ ಕೊಳವೆ ಬಾವಿಗಳಿಗೆ, ಪುರಾತನ ಬಾವಿಗಳಿಗೆ ನೀರು ಬರುತ್ತದೆ. ನೂರಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಗ್ರಾಮ ಪಂಚಾಯಿತಿಯವರು ಕೆರೆಗಳ ರಕ್ಷಣೆಗೆ ಮುಂದಾಗಬೇಕು ಎಂದು ಕೆರೆಗಳನ್ನು ಬುಧವಾರ ವೀಕ್ಷಿಸಿದ ಗ್ರಾಮದ ಮುಖಂಡರಾದ ಸಿದ್ದು ಜಿಡಗಿ, ಪಂಡಿತ ನಾವಿ, ಸುರೇಶ ರಾಖಾ, ರೇವಣಸಿದ್ಧ ನ್ಯಾಮಗೊಂಡ, ಮಕ್ಬುಲ್ ನಿಗೇವಾನ್ ಒತ್ತಾಯಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿಯ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರಮೇಶ ಪಾಟೀಲ ಮಾಹಿತಿ ನೀಡಿ, ಮಾಶಾಳದಲ್ಲಿ 2 ದಿನಗಳಿಂದ ಮಳೆಯಾಗಿರುವುದರಿಂದ ಕೆರೆಗಳು ತುಂಬಿಕೊಂಡಿವೆ. ನರೇಗಾದಲ್ಲಿ ಅನುದಾನ ಖರ್ಚು ಮಾಡಿದ್ದು ಸಾರ್ಥಕವಾಗಿದೆ. ಗ್ರಾಮದಲ್ಲಿ ಕೃಷಿ ಭಾಗ್ಯ, ನರೇಗಾ ಯೋಜನೆ ಅಡಿಯಲ್ಲಿ ಸುಮಾರು 750 ಕೃಷಿ ಹೊಂಡಗಳನ್ನು ತೋಡಲಾಗಿದೆ. ಇವೆಲ್ಲವೂ ಭರ್ತಿಯಾಗಿವೆ. ರೈತರಿಂದ ಕೃಷಿ ಹೊಂಡಗಳಿಗೆ ಇನ್ನೂ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಕೊರೆಯಲಾಗುವುದು ಎಂದರು.

ಬೇಸಿಗೆಯಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಘದವರು ‘ಗೋಕಾಟ’ ಕೆರೆಯ ಹೂಳು ತೆಗೆಯುವ ಕೆಲಸ ಮಾಡಿದ್ದರಿಂದ ಹೆಚ್ಚು ನೀರು ಸಂಗ್ರಹವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.