ADVERTISEMENT

ಹೊಲಿಗೆ ಗೊತ್ತಿರುವ ಗ್ರಾಮೀಣ ಮಹಿಳೆಯರಿಗೆ ಮಾಸ್ಕ್ ತಯಾರಿ ಉದ್ಯೋಗ

ಸಂತೋಷ ಈ.ಚಿನಗುಡಿ
Published 27 ಮೇ 2020, 11:55 IST
Last Updated 27 ಮೇ 2020, 11:55 IST
ಕಲಬುರ್ಗಿಯ ನಿಸರ್ಗ ಸಂಸ್ಥೆಯಿಂದ ಮಾಸ್ಕ್‌ ಹೊಲಿಯಲು ಸಿದ್ಧಗೊಂಡ ಮಹಿಳೆಯರ ತಂಡ
ಕಲಬುರ್ಗಿಯ ನಿಸರ್ಗ ಸಂಸ್ಥೆಯಿಂದ ಮಾಸ್ಕ್‌ ಹೊಲಿಯಲು ಸಿದ್ಧಗೊಂಡ ಮಹಿಳೆಯರ ತಂಡ   

ಕಲಬುರ್ಗಿ: ಕೊರೊನಾದಿಂದ ಉಂಟಾದ ಸಂದಿಗ್ಧ ಪರಿಸ್ಥಿತಿಯನ್ನೇ ಬಳಸಿಕೊಂಡು, ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಮುಂದಾಗಿದೆ ಇಲ್ಲಿನ ‘ನಿಸರ್ಗ’ ಗ್ರಾಮೀಣ ಮಹಿಳಾ ಅಭಿವೃದ್ಧಿ ಸಂಸ್ಥೆ.

ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಮಾಸ್ಕ್‌, ಸ್ಯಾನಿಟೈಸರ್‌, ಕೈಗವಸು, ಪಿಪಿಇ ಕಿಟ್‌ ಸೇರಿದಂತೆ ಅಗತ್ಯ ವಸ್ತುಗಳ ತಯಾರಿ ಹಾಗೂ ಸರಬರಾಜಿನಲ್ಲಿ ತೊಡಗಿದ್ದಾರೆ.

ಸಂಸ್ಥೆಯ ವತಿಯಿಂದ ನಗರದಲ್ಲಿಯೇ ಕಾಟನ್‌ ಬಟ್ಟೆ ಖರೀದಿಸಿ ಹೊಲಿಗೆ ಯಂತ್ರ ಇರುವ ಮಹಿಳೆಯರಿಗೆ ನೀಡಲಾಗುತ್ತಿದೆ. ಮಹಿಳೆಯರು ಮನೆಯಲ್ಲೇ ಸಿದ್ಧಪಡಿಸಿದ ಮಾಸ್ಕ್‌ಗಳನ್ನು ಖರೀದಿಸಿ, ನಂತರ ಅಗತ್ಯ ಇರುವ ಕಡೆ ಸರಬರಾಜು ಮಾಡಲಾಗುತ್ತಿದೆ. ಈಗಾಲೇ 50 ಸಾವಿರಕ್ಕೂ ಹೆಚ್ಚು ಮಾಸ್ಕ್‌ಗಳನ್ನು ಮಾರಲಾಗಿದೆ. ಸಾವಿರಾರು ಮಾಸ್ಕ್‌ಗಳನ್ನು ವಾರಿಯರ್ಸ್‌ಗಳಿಗೆ ಉಚಿತವಾಗಿ ಹಂಚಲಾಗಿದೆ. ಇನ್ನೂ ಒಂದು ಲಕ್ಷಕ್ಕೂ ಹೆಚ್ಚು ಮಸ್ಕ್‌ಗಳು ಈ ಸಂಸ್ಥೆಯ ಬಳಿ ಸಂಗ್ರಹ ಇವೆ.

ADVERTISEMENT

‘ಎರಡು ಮತ್ತು ಮೂರು ಪದರಿನ ಮಾಸ್ಕ್‌ಗಳನ್ನು ಮಹಿಳೆಯರು ಹೊಲಿಯುತ್ತಿದ್ದಾರೆ. ಕಾಟನ್‌ ಬಟ್ಟೆಯ ಮಾಸ್ಕ್‌ಗಳು ಗುಣಮಟ್ಟದಿಂದ ಕೂಡಿದ್ದು, ಕನಿಷ್ಠ 50 ಒಗೆತದವರೆಗೂ ತಾಳುತ್ತವೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಮಾರ್ಗದರ್ಶನದಂತೆ 30 ಒಗೆತ ಆದ ಮೇಲೆ ಮಾಸ್ಕ್‌ ಬಳಕೆ ನಿಲ್ಲಿಸುವಂತೆ ತಿಳಿಸುತ್ತಿದ್ದೇವೆ. ಮಾರುಕಟ್ಟೆಯಲ್ಲಿ ಇವುಗಳ ದರ ₹ 40. ಆದರೆ, ನಾವು ₹ 20ರವರೆಗೆ ಮಹಿಳೆಯರಿಂದ ಖರೀದಿಸಿ, ಅಷ್ಟೇ ದರಕ್ಕೆ ಮಾರುತ್ತೇವೆ‘ ಎನ್ನುತ್ತಾರೆ ಸಂಸ್ಥೆಯ ನಿರ್ದೇಶಕಿ ದಿವ್ಯಾರಾಣಿ ಕುಲಕರ್ಣಿ.

ಇವರ ಉತ್ಪನ್ನದ ಗುಣಮಟ್ಟ ಕಂಡು ಅಲ್ಟ್ರಾಟೆಕ್‌ ಸಿಮೆಂಟ್‌ ಕಾರ್ಖಾನೆಯವರು 20 ಸಾವಿರ ಮಾಸ್ಕ್‌ ಖರೀದಿಸಿದ್ದಾರೆ. ಇದೇ ರೀತಿ ವಿವಿಧ ಸಂಸ್ಥೆಗಳು, ಕುಟುಂಬಗಳವರು ಸಹ ಸಾವಿರ ಸಂಖ್ಯೆಯಲ್ಲಿ ಕೇಳುತ್ತಿದ್ದಾರೆ.

ಸ್ವ ಸಹಾಯ ಸಂಘಗಳಿಗೆ ಅನುಕೂಲ: ಒಂದು ಮಾಸ್ಕ್‌ನಿಂದ ಒಬ್ಬ ಮಹಿಳೆಗೆ ₹ 5 ಉಳಿಯುತ್ತದೆ. ದಿನಕ್ಕೆ ಕನಿಷ್ಠ 100 ಮಾಸ್ಕ್‌ ಹೊಲಿದರೂ‌ ₹ 500 ಗಳಿಕೆ. ವಾರಕ್ಕೆ ಒಂದು ಸಾವಿರ ಹೊಲಿದು ₹ 5 ಸಾವಿರ ಗಳಿಸಿದವರೂ ಈ ತಂಡದಲ್ಲಿ ಇದ್ದಾರೆ.

ಹಳ್ಳಿಗಳಲ್ಲಿ ಇರುವ ಮಹಿಳಾ ಸ್ವಸಹಾಯ ಸಂಘಗಳು ಇದನ್ನು ಗುತ್ತಿಗೆ ಪಡೆದರೆ ಸಾಕಷ್ಟು ಲಾಭ ಗಳಿಸಬಹುದು. ಹಾಗಾಗಿ, ಹಳ್ಳಿಯ ಮಹಿಳೆರಿಗೆ ಇದರ ಅರಿವು ಮೂಡಿಸಲಾಗುತ್ತಿದೆ.

ಮಾಸ್ಕ್‌ ಜತೆಗೆ ಪಿಪಿಇ ಕಿಟ್‌, ನೈಸರ್ಗಿಕ ಸ್ಯಾನಿಟೈಸರ್‌, ಫೇಸ್‌ ಶೀಲ್ಡ್‌, ಕೈಗವಸು ಮುಂತಾದವುಗಳನ್ನು ಬೇರೆ ಬೇರೆ ಕಂಪನಿಗಳಿಂದ ತರಿಸಿ, ಸ್ವಯಂ ಸೇವಕರ ಮೂಲಕ ವಿತರಿಸುವ ಕೆಲಸವೂ ನಡೆದಿದೆ. ಬ್ಯಾಂಕ್‌ ಸಿಬ್ಬಂದಿ, ಸರ್ಕಾರಿ ಕಚೇರಿಗಳು, ಆಶಾ ಕಾರ್ಯಕರ್ತೆಯರಿಗೆ ಇವುಗಳನ್ನು ತಲುಪಿಸಲಾಗುತ್ತಿದೆ. ಇದಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಕೂಡ ಪಡೆದಿದ್ದಾಗಿ ಸಂಸ್ಥೆ ನಿರ್ದೇಶಕರು ಹೇಳುತ್ತಾರೆ.

ಮಾಸ್ಕ್‌ ಹಾಗೂ ಇತರ ಸುರಕ್ಷತಾ ಸಾಮಗ್ರಿ ಬೇಕಾದವರು ದಿವ್ಯಾರಾಣಿ (74062 11941) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.