ADVERTISEMENT

ಕೋಟ್ಯಂತರ ರೂಪಾಯಿ ಅವ್ಯವಹಾರ: ಆರೋಪ

ಬಳಬಟ್ಟಿಯ ವ್ಯವಸಾಯ ಸೇವಾ ಸಹಕಾರ ಸಂಘ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 12:57 IST
Last Updated 23 ಜನವರಿ 2020, 12:57 IST

ಯಡ್ರಾಮಿ: ತಾಲ್ಲೂಕಿನ ಬಳಬಟ್ಟಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಭಾರಿ ಅವ್ಯವಹಾರವಾಗಿದ್ದು, ರೈತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಗುಳುಂ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಇದಕ್ಕೆ ಪೂರಕ ಎನ್ನುವಂತೆ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿಯೇ ಒಬ್ಬೊಬ್ಬ ರೈತರ ಹೆಸರಿನಲ್ಲಿ 3 ಖಾತೆಗಳನ್ನು ಮಾಡಿಸಿದ್ದು ಮಾಹಿತಿ ಹಕ್ಕಿನಲ್ಲಿ ತಿಳಿದು ಬಂದಿದೆ. ಬಳಬಟ್ಟಿ ಗ್ರಾಮದಲ್ಲಿ ಒಟ್ಟು 900 ಖಾತೆಗಳಿದ್ದು, ಸರ್ಕಾರಕ್ಕೆ ಸರಿಯಾದ ಮಾಹಿತಿ ಕೊಡದ ಹಿನ್ನೆಲೆಯಲ್ಲಿ ಅದರಲ್ಲಿ ಖಾತೆದಾರರ ಸಾಲಮನ್ನಾಆಗದೆ ಹಾಗೆಯೇ ಉಳಿದುಕೊಂಡಿದೆ. ಈ ವ್ಯವಸಾಯ ಸಹಕಾರ ಸಂಘದ ವ್ಯಾಪ್ತಿಯಲ್ಲಿ ಪಡದಳ್ಳಿ, ಜಮಖಂಡಿ, ಬಿಳವಾರ, ಕಾಚೂರ, ಕೊಣ್ಣೂರ ತಾಂಡಾ, ಶಿವಪೂರ, ಅಂಬರಖೇಡ, ಮಲ್ಲಾಬಾದ ಬಳಬಟ್ಟಿ ಸೇರಿ ಒಟ್ಟು ಒಂಬತ್ತು ಗ್ರಾಮಗಳು ಬರುತ್ತವೆ.

ಈ ಸಂಘ ಪ್ರಾರಂಭವಾದ ಮೇಲೆ ಇಲ್ಲಿಯವರೆಗೆ ಸಾಮಾನ್ಯ ಸಭೆಯನ್ನೇ ಕರೆದಿಲ್ಲ. ಹೊಸ ಸದಸ್ಯರ ನೇಮಕ ಮಾಡಿಕೊಳ್ಳಲು ಮತ್ತು ಚುನಾವಣೆ ನಡೆಸಲು ಪತ್ರಿಕೆಗೆ ಜಾಹಿರಾತು ನೀಡಿ ಜನರಿಗೆ ಮಾಹಿತಿ ನೀಡಬೇಕು ಎಂದಿದೆ. ಆದರೆ ಯಾರಿಗೂ ಮಾಹಿತಿ ನೀಡದೆ ಕಾರ್ಯದರ್ಶಿ ತಮಗೆ ಬೇಕಾದವರನ್ನು ಮಾತ್ರ ಸದಸ್ಯರನ್ನಾಗಿ ನೇಮಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಸಂಘದ ಹೆಸರಿನಲ್ಲಿ ಅಪಾರ ಪ್ರಮಾಣದ ಆಸ್ತಿ, ಟ್ರ್ಯಾಕ್ಟರ್, ನೇಗಿಲು ಮತ್ತು ಕೃಷಿ ಪರಿಕರಗಳು ಇವೆ. ಅವೆಲ್ವನ್ನೂ ಕಾರ್ಯದರ್ಶಿ ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ರೈತರದ್ದು. ಈ ಬಗ್ಗೆ ಹಲವಾರು ಸಲ ಮೇಲಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂಬುದು ರೈತರ ಹೇಳಿಕೆ.

ಸಂಘ ಸ್ಥಾಪನೆಯಾದ ಮೇಲೆ ಒಮ್ಮೆಯೂ ಲೆಕ್ಕ ಪರಿಶೋಧನೆ ಆಗಿಲ್ಲ. ವ್ಯವಸಾಯ ಸೇವಾ ಸಹಕಾರ ಸಂಘದ ನಿಯಮ–64 ವಿಧಿಯ ಪ್ರಕಾರ ಅವ್ಯವಹಾರದ ತನಿಖೆಯನ್ನು ನೋಂದಣಿ ಅಧಿಕಾರಿಯಿಂದ ನಡೆಸಬೇಕು ಎಂದಿದೆ. ಆದರೆ ಇಲ್ಲಿ ಮಾತ್ರ ಸಂಘದ ಕಾರ್ಯದರ್ಶಿ ಆಡಿದ್ದೇ ಆಟ, ಮಾಡಿದ್ದೇ ಕೆಲಸ ಎನ್ನುವಂತಿದೆ. 1993ರಿಂದ ಖಾತೆದಾರರಾದ ರೈತರಿಗೆ ಕೇವಲ ₹15 ಸಾವಿರ ಸಾಲ ನೀಡಲಾಗಿದೆ. ಆದರೆ 2015-16ರಲ್ಲಿ ಹೊಸದಾಗಿ ನೇಮಕಗೊಂಡ ಅವರ ಸಂಬಂಧಿಕ ರೈತರಿಗೆ ಲಕ್ಷಾಂತರ ರೂಪಾಯಿ ಸಾಲ ನೀಡಲಾಗಿದೆ.

ಭೀಮರೆಡ್ಡಿ ದೇಸಾಯಿ ಎಂಬುವವರು ಕೇವಲ ₹18 ಸಾವಿರ ಸಾಲ ಪಡೆದಿದ್ದಾರೆ. ಆದರೆ ಅವರ ಹೆಸರಿನಲ್ಲಿ ಸಾಲ ತೋರಿಸಿದ್ದು ₹38 ಸಾವಿರ. ಹೀಗೆ ಹಲವಾರು ರೀತಿಯಿಂದ ರೈತರನ್ನು ವಂಚಿಸುತ್ತಾ ಬರಲಾಗಿದೆ.

ಇದೇ ರೀತಿ ತಾಲ್ಲೂಕಿನ 8 ಸಹಕಾರ ಸಂಘಗಳ ಮೇಲೆ ತನಿಖೆ ನಡೆಸಲಾಗುತ್ತಿದೆ. ಆದರೆ ರೈತರು ಮಾತ್ರ ತಮ್ಮದಲ್ಲದ ತಪ್ಪಿಗೆ ಹಾಗೂ ಸರಕಾರಕ್ಕೆ ಕಾರ್ಯದರ್ಶಿ ಸರಿಯಾದ ಮಾಹಿತಿ ನೀಡದೆ ಇರುವುದರಿಂದ ತಮ್ಮ ಸಾಲ ಮನ್ನಾ ಮಾಡಿಸಿಕೊಳ್ಳದೆ ಹಾಗೆ ಉಳಿದುಕೊಂಡು ಬಿಟ್ಟಿದ್ದಾರೆ. ಕೂಡಲೇ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಮೋಸ ಮಾಡುತ್ತಿರುವ ಕಾರ್ಯದರ್ಶಿ ಮೇಲೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.

ತಡೆಯಾಜ್ಞೆ: ಸಂಘದ ಬಗ್ಗೆ 64ರಡಿಯಲ್ಲಿ ತನಿಖೆ ನಡೆಯುತ್ತಿದ್ದು, ಕಾರ್ಯದರ್ಶಿ ತರಾತುರಿಯಲ್ಲಿ ಸಂಘದ ಅಧ್ಯಕ್ಷ ಸ್ಥಾನದ ಚುನಾವಣೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸೋಮುನಗೌಡ ಎಸ್.ಬಳಬಟ್ಟಿ. ಅರಣುಕುಮಾರ, ಶಂಕರಗೌಡ, ಶಿವಶಂಕರಪ್ಪ ಗುಂಡಗುರ್ತಿ ಸೇರಿದಂತೆ ಅನೇಕರು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಗುರುವಾರ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.