ADVERTISEMENT

ಕಲಬುರ್ಗಿಯಲ್ಲೇ ಜ್ಯುವೆಲ್ಲರಿ ಪಾರ್ಕ್‌: ಮುರುಗೇಶ್ ನಿರಾಣಿ

ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುರುಗೇಶ ನಿರಾಣಿ ನೇಮಕ

​ಪ್ರಜಾವಾಣಿ ವಾರ್ತೆ
Published 3 ಮೇ 2021, 3:53 IST
Last Updated 3 ಮೇ 2021, 3:53 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಬೆಂಗಳೂರು: ಕಲಬುರ್ಗಿಯಲ್ಲಿ ಆಭರಣ ತಯಾರಿಕೆ ಘಟಕ (ಜ್ಯುವೆಲ್ಲರಿ ಪಾರ್ಕ್‌) ಆರಂಭಿಸಲು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ನಿರ್ಧರಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಭಾನುವಾರ ನೇಮಕಗೊಂಡ ಬೆನ್ನಲ್ಲೇ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ಘಟಕವನ್ನು ಬೀದರ್ ಅಥವಾ ಕಲಬುರ್ಗಿಯಲ್ಲಿ ಆರಂಭಿಸುವುದಾಗಿ ಅವರು ಈ ಹಿಂದೆ ಹೇಳಿದ್ದರು.

ಸರ್ಕಾರಿ- ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 50ರಿಂದ 75 ಎಕರೆ ಜಾಗದಲ್ಲಿಜ್ಯುವೆಲ್ಲರಿ ಪಾರ್ಕ್ ನಿರ್ಮಿಸಲಾಗುವುದು. ಅಭರಣಗಳ‌ ತಯಾರಿಕೆ, ಗ್ರಾಹಕರು ಒಂದೇ ಸೂರಿನಡಿ ಖರೀದಿಗೆ ಅವಕಾಶ ಮಾಡಿಕೊಡುವುದರ ಜೊತೆಗೆ, ದೇಶ- ವಿದೇಶಕ್ಕೆ ಇಲ್ಲಿಂದಲೇ ಪೂರೈಕೆ ಮಾಡಲಾಗುವುದು ಎಂದು ನಿರಾಣಿ ತಿಳಿಸಿದ್ದಾರೆ.

ADVERTISEMENT

ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಒತ್ತು ಕೊಡುವ ಸಂವಿಧಾನದ 371ನೇ (ಜೆ) ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ಅವಕಾಶ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಈ ಭಾಗದ ಶಾಸಕರು, ಸಂಸದರು ಸೇರಿದಂತೆ ಪಕ್ಷಾತೀತವಾಗಿ‌ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯ ‌ಅಭಿವೃದ್ದಿಗೆ ಶ್ರಮಿಸುತ್ತೇನೆ.ಶೀಘ್ರದಲ್ಲಿ ಜಿಲ್ಲೆಯ ಅಧಿಕಾರಿಗಳ ಸಭೆ ಕರೆದು ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ’ ನಡೆಸುತ್ತೇನೆ’ ಎಂದು ನಿರಾಣಿ ಹೇಳಿದ್ದಾರೆ.

‘ಇಂಥದ್ದೇ ಜಿಲ್ಲೆಯ ಉಸ್ತುವಾರಿ ಕೊಡುವಂತೆ ಮುಖ್ಯಮಂತ್ರಿ ಬಳಿ ಬೇಡಿಕೆ ಇಟ್ಟಿರಲಿಲ್ಲ. ಸಚಿವ ಸಂಪುಟಕ್ಕೆ ತೆಗೆದುಕೊಳ್ಳುವಾಗ ಮತ್ತು ಖಾತೆ ಹಂಚಿಕೆ ಮಾಡುವಾಗಲೂ ಯಾವುದೇ ಒತ್ತಡ ಹಾಕಿರಲಿಲ್ಲ. ಮೊದಲಿನಿಂದಲೂ ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.