ADVERTISEMENT

ಪ್ರತಿ ತಾಲ್ಲೂಕಿನಲ್ಲಿ ಇಸ್ರೇಲ್ ಮಾದರಿ ಕೃಷಿ: ಮುರುಗೇಶ ನಿರಾಣಿ

ಯೋಜನೆ ರೂಪಿಸಲು ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಸಚಿವ ನಿರಾಣಿ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 15:48 IST
Last Updated 27 ಜೂನ್ 2021, 15:48 IST
ಮುರುಗೇಶ ನಿರಾಣಿ
ಮುರುಗೇಶ ನಿರಾಣಿ   

ಕಲಬುರ್ಗಿ: ‘ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ತಲಾ 100 ಎಕರೆ ಪ್ರದೇಶದಲ್ಲಿ ಇಸ್ರೇಲ್ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಗಣಿ, ಭೂವಿಜ್ಞಾನ ಹಾಗೂಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

‘ಇಸ್ರೇಲ್‌ನಲ್ಲಿ ಅನುಷ್ಠಾನಗೊಳಿಸಿರುವ ನೀರಾವರಿ ಪದ್ಧತಿಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸುವ ಯೋಜನೆ ಹಾಕಿಕೊಂಡಿದ್ದು, ಅದಕ್ಕಾಗಿ ಈಗ ಪ್ರತಿ ತಾಲ್ಲೂಕಿನಲ್ಲೂ ಕೃಷಿ, ತೋಟಗಾರಿಕೆ, ರೇಷ್ಮೆ, ಹಣ್ಣು ತರಕಾರಿ ಬೆಳೆಯುವಂತೆ ಮಾಡಲು ಯೋಜನೆ ರೂಪಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಜಿಲ್ಲೆಯನ್ನು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಗೆ ತರಲು ನಿರ್ಧರಿಸಲಾಗಿದ್ದು, ಅದಕ್ಕೆ ಪೂರಕವಾಗಿ ಇಸ್ರೇಲ್ ಮಾದರಿ ಕೃಷಿ ಅಳವಡಿಸಿಕೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಕೃಷಿಗೆ ಒತ್ತು ನೀಡಿ ಈ ಯೋಜನೆ ಕೈಗೆತ್ತಿಕೊಂಡು ಆಯಾ ತಾಲ್ಲೂಕಿನ ವಾತಾವರಣ, ನೀರು ಲಭ್ಯತೆ ನೋಡಿಕೊಂಡು ಒಂದೊಂದು ಬೆಳೆಯನ್ನು ಆಯ್ಕೆ ಮಾಡಿಕೊಂಡು ಬೆಳೆಸಬೇಕು. ಒಂದು ತಾಲ್ಲೂಕಿನಲ್ಲಿ ಬೆಳೆದ ಬೆಳೆಯನ್ನು ಪಕ್ಕದ ತಾಲ್ಲೂಕಿನ ರೈತರು ಬಂದು ನೋಡಿಕೊಂಡು ಹೋಗುತ್ತಾರೆ. ಇದರಿಂದ ಎ‌ಲ್ಲರಿಗೂ ಪರಸ್ಪರ ಇಸ್ರೇಲ್ ಕೃಷಿ ಪದ್ಧತಿ ಜ್ಞಾನ ಹಂಚಿಕೆ ಮಾಡಿಕೊಳ್ಳಲು ಸಹಕಾರಿಯಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಜಿಲ್ಲೆಯಲ್ಲಿ ತೊಗರಿ ಬೆಳೆದರೆ ಪ್ರತಿ ಎಕರೆಗೆ ಎಷ್ಟು ಆದಾಯ ಬರುತ್ತದೆ. ಅದನ್ನೇ ಗ್ರೀನ್ ಹೌಸ್ ಮಾಡಿ ಇಸ್ರೇಲ್ ಮಾದರಿ ವ್ಯವಸಾಯ ಮಾಡಿದಾಗ ಎಷ್ಟು ಆದಾಯ ಬರುತ್ತದೆ ಎಂಬುದನ್ನು ತೋರಿಸುವ ಮೂಲಕ ಅಲ್ಲಿನ ಜನರು ನೀರಾವರಿಗೆ ವಾಲುವಂತೆ ಮಾಡಲಾಗುವುದು. ಉದ್ಯಮ ಕ್ಷೇತ್ರದಲ್ಲೂ ಮುಂಚೂಣಿಗೆ ತರಲು ಯೋಜನೆ ರೂಪಿಸಲಾಗಿದೆ’ ಎಂದಿದ್ದಾರೆ.

‘ಹಿಂದುಳಿದಿರುವ ಕಲಬುರ್ಗಿ ಜಿಲ್ಲೆಯನ್ನು ಎಲ್ಲ ವಿಭಾಗಗಳಲ್ಲಿ ಮುಂಚೂಣಿಗೆ ತರುವ ನಿಟ್ಟಿನಲ್ಲಿ ವಿಜನ್–2050 ಯೋಜನೆ ರೂಪಿಸಲಾಗುತ್ತಿದೆ. ಮುಂದಿನ 30 ವರ್ಷಗಳಲ್ಲಿ ಎಲ್ಲ ರೀತಿಯಲ್ಲೂ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ನೀಲಿನಕ್ಷೆ ತಯಾರಿಸಲಾಗುತ್ತಿದೆ. ವಿವರವಾದ ಡಿಪಿಆರ್‌ ಶೀಘ್ರ ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರವಾಸ ಭಾಗ್ಯ: ಜಿಲ್ಲೆಯ ರೈತರಿಗೆ ನೀರಾವರಿಯ ವಿವಿಧ ವಿಧಾನಗಳನ್ನು ಪರಿಚಯ ಮಾಡಿಸುವ ಉದ್ದೇಶದಿಂದ ಮೊದಲ ಹಂತದಲ್ಲಿ ಆಯ್ದ ರೈತರಿಗೆ ನೀರಾವರಿ ಪ್ರವಾಸ ಆಯೋಜಿಸುವ ಚಿಂತನೆ ಇದೆ ಎಂದು ನಿರಾಣಿ ತಿಳಿಸಿದ್ದಾರೆ.

ಜಿಲ್ಲೆಯ ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ರೈತರಿಗೆ ಬಸ್ ವ್ಯವಸ್ಥೆ ಮಾಡಿ ಬೆಳಗಾವಿ ವಿಭಾಗ ಮತ್ತು ಮಹಾರಾಷ್ಟ್ರದ ಕೊಲ್ಹಾಪುರ ಭಾಗದಲ್ಲಿ ನೀರಾವರಿಯನ್ನು ಅಲ್ಲಿನ ರೈತರು ಹೇಗೆ ಮಾಡಿಕೊಂಡಿದ್ದಾರೆ ಎಂಬುದನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು. ಜಿಲ್ಲೆಯಲ್ಲಿ ಸಾಕಷ್ಟು ನೀರಾವರಿ ಯೋಜನೆಗಳಿವೆ. ಕೃಷ್ಣಾ ಮೇಲ್ದಂಡೆ ಯೋಜನೆಯು ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ನೀರಾವರಿ ವಿಚಾರದಲ್ಲಿ ಅಭಿವೃದ್ಧಿ ಪಡಿಸಲು ಹೊಸ ಯೋಜನೆ ಹಾಕಿಕೊಂಡು ರೈತರಲ್ಲಿ ನೀರಾವರಿ ಬಗ್ಗೆ ಒಲವು ಹಚ್ಚಿಸುವ ಮೂಲಕ ಕೃಷಿಯಲ್ಲಿ ಸಾಧನೆ ಮಾಡಲಾಗುವುದು. ಅದಕ್ಕಾಗಿ ಕಲ್ಯಾಣ ಕರ್ನಾಟಕ ಕೃಷಿ ಮತ್ತು ಸಾಂಸ್ಕೃತಿಕ ಸಂಘ, ನೀರಾವರಿ ತಜ್ಞರ, ಮಾದರಿ ರೈತರ ಸಹಕಾರ ಪಡೆದುಕೊಂಡು ಈ ಕೆಲಸ ಆರಂಭಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.