ADVERTISEMENT

ಕೆರೆಗಳ ಅಭಿವೃದ್ಧಿಗೆ ಆದ್ಯತೆ:ಮಾಧುಸ್ವಾಮಿ

ಸುನೀಲ ವಲ್ಯಾಪುರೆ ಪ್ರಶ್ನೆಗೆ ಉತ್ತರ ನೀಡಿದ ಮಾಧುಸ್ವಾಮಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:37 IST
Last Updated 25 ಸೆಪ್ಟೆಂಬರ್ 2020, 1:37 IST
ಸುನೀಲ ವಲ್ಯಾಪುರೆ
ಸುನೀಲ ವಲ್ಯಾಪುರೆ   

ಕಲಬುರ್ಗಿ: ಕಲಬುರ್ಗಿ, ಯಾದಗಿರಿ ಹಾಗೂ ಬೀದರ್‌ ಜಿಲ್ಲೆಗಳಲ್ಲಿ ಒಟ್ಟು 363 ಕೆರೆಗಳಿವೆ. ಇವುಗಳಲ್ಲಿ 2019ನೇ ಸಾಲಿನಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ 3 ಹಾಗೂ ಬೀದರ್‌ ಜಿಲ್ಲೆಯಲ್ಲಿ 17 ಕೆರೆಗಳನ್ನು ದುರಸ್ತಿ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯರ ಸುನೀಲ ವಲ್ಯಾಪುರೆ ಅವರು ಅಧಿವೇಶನದಲ್ಲಿ ಬುಧವಾರ ಕೇಳಿದ ಪ್ರಮುಖ ಪ್ರಶ್ನೆಗಳಿಗೆ ಅವರು ಗುರುವಾರ ಉತ್ತರ ನೀಡಿದರು.

ಕಲಬುರ್ಗಿ ಜಿಲ್ಲೆಯಲ್ಲಿ 166, ಯಾದಗಿರಿ– 72 ಹಾಗೂ ಬೀದರ್‌ನಲ್ಲಿ 125 ಕೆರೆಗಳು ಇವೆ. ಪ್ರತಿ ವರ್ಷ ಇಲಾಖೆಗೆ ಒದಗಿಸುವ ಅನುದಾನ ಬಳಸಿ ಅವಶ್ಯಕತೆ ಇದ್ದಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ADVERTISEMENT

ನಬಾರ್ಡ್‌ ಕೆರೆಗಳ ಆಧುನೀಕರಣ ಯೋಜನೆ, ನಾನ್‌ ನಬಾರ್ಡ್‌ ಕೆರೆಗಳ ಆಧುನೀಕರಣ, ವಿಶೇಷ ಅಭಿವೃದ್ಧಿ ಯೋಜನೆ, ಕೆರೆಗಳ ಅಭಿವೃದ್ಧಿ– ನಾಡಿನ ಶ್ರೇಯೋಭಿವೃದ್ಧಿ ಹೀಗೆ ವಿವಿಧ ಯೋಜನೆಗಳು ಸೇರಿದಂತೆ ಮೂರೂ ಜಿಲ್ಲೆಗಳಿಗೆ ಈವರೆಗೆ ಒಟ್ಟು ₹ 5.15 ಕೋಟಿ ಅಂದಾಜು ಮಾಡಲಾಗಿತ್ತು. ಅದರಲ್ಲಿ ₹ 2.85 ಕೋಟಿಯನ್ನು ಈಗಾಗಲೇ ವೆಚ್ಚ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಭೂ ಕಂದಾಯ, ಭೂ ಸುಧಾರಣೆ ಹಾಗೂ ಮಂಜೂರಾತಿಗೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳು ಇತ್ಯರ್ಥವಾಗಿವೆ, ಎಷ್ಟು ಬಾಕಿ ಇವೆ ಎಂದೂ ಸುನೀಲ ವಲ್ಯಾಪುರೆ ಅವರು ಪ್ರಶ್ನೆ ಮಾಡಿದ್ದರು.

ಇದಕ್ಕೆ ಉತ್ತರಿಸಿದ ಕಂದಾಯ ಸಚಿವ ಆರ್‌. ಅಶೋಕ ಅವರು, ‘ಕಂದಾಯ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು ಆದ್ಯತೆ ಮೇರೆಗೆ ವಿಚಾರಣೆ ನಡೆಸಿ, ಇತ್ಯರ್ಥಪಡಿಸಲಾಗುತ್ತಿದೆ. ಪ್ರತಿ ವಾರ ಕನಿಷ್ಠ 2ರಿಂದ 3 ಬಾರಿ ನಿಯತಕಾಲಿಕವಾಗಿ ವಿಚಾರಣೆಯನ್ನು ನಿಗದಿಮಾಡಲಾಗುತ್ತಿದೆ. ತ್ವರಿತಗತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಮಾಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.