ADVERTISEMENT

ಕಲಬುರಗಿ | ಕೌಟುಂಬಿಕ ಕಲಹ: ಮಗುವನ್ನು ಬಾವಿಗೆಸೆದು ತಾಯಿ ಆತ್ಮಹತ್ಯೆ 

​ಪ್ರಜಾವಾಣಿ ವಾರ್ತೆ
Published 15 ಮೇ 2022, 6:56 IST
Last Updated 15 ಮೇ 2022, 6:56 IST
ಕವಿತಾಬಾಯಿ
ಕವಿತಾಬಾಯಿ    

ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಚಂದಾಪುರ ಗಂಗೂನಾಯಕ ತಾಂಡಾದಲ್ಲಿ ಭಾನುವಾರ ಬೆಳಿಗ್ಗೆ, ಮಹಿಳೆಯೊಬ್ಬರು ತಮ್ಮ ಎರಡು ವರ್ಷದ ಮಗುವನ್ನು ಬಾವಿಗೆ ಎಸೆದು ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾಂಡಾದ ನಿವಾಸಿ ಕವಿತಾಬಾಯಿ (23) ಅವರ ಮಗು ಪವನ ಜೊತೆಗೆ ಸಾವಿಗೆ ಶರಣಾಗಿದ್ದಾರೆ. ಪತಿ ಹಾಗೂ ಅವರ ಮನೆಯವರು ನೀಡುತ್ತಿದ್ದ ಕಿರುಕುಳವೇ ಘಟನೆಗೆ ಕಾರಣ ಎಂದು ಮೃತಳ ಸಂಬಂಧಿಕರು ದೂರು ನೀಡಿದ್ದಾರೆ.

ಚಂದಾಪುರದ ಸುರೇಶ ಹಾಗೂ ಕವಿತಾ ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರೂ ಬೇರೆ ಬೇರೆ ಜಾತಿಯವರಾಗಿದ್ದು, ಮದುವೆ ನಂತರ ತಾಂಡಾದಲ್ಲಿಯೇ ಬದುಕು ಕಟ್ಟಿಕೊಂಡಿದ್ದರು.

ADVERTISEMENT

ಇತ್ತೀಚೆಗೆ ಪತಿ- ಪತ್ನಿ ಮಧ್ಯೆ ಪದೇಪದೇ ಜಗಳ ನಡೆಯುತ್ತಿತ್ತು. ಸುರೇಶ ಹಾಗೂ ಅವರ ಮನೆಯವರು ಕವಿತಾಗೆ ಪ್ರತಿದಿನ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಹಿರಿಯರು ಹಲವು ಬಾರಿ ತಿಳಿ ಹೇಳಿದರೂ ಕಿರುಕುಳ ನಿಲ್ಲಿಸಲಿಲ್ಲ. ಇದರಿಂದ ಬೇಸತ್ತು ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಯಿ ಮತ್ತು ಮಗನ ಶವವನ್ನು ಬಾವಿಯಿಂದ ಹೊರ ತೆಗೆಯಲಾಗಿದ್ದು, ತಾಲ್ಲೂಕು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಚಿಂಚೋಳಿ ಠಾಣೆಯ ಪೊಲೀಸರು ಸ್ಥಳ ಪರಿಶೀಲಿಸಿದರು.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.