ಕಲಬುರಗಿಯ ಹಳೇ ಜೇವರ್ಗಿ ರಸ್ತೆ ಬದಿಯಲ್ಲಿ ಪ್ರತಿಷ್ಠಾಪಿಸಲಾದ ಅಲಾಯಿ ದೇವರಿಗೆ ಶನಿವಾರ ನೈವೇದ್ಯ ಸಮರ್ಪಿಸಿ ಆಶೀರ್ವಾದ ಪಡೆದ ಭಕ್ತರು
ಪ್ರಜಾವಾಣಿ ಚಿತ್ರ
ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮೊಹರಂ ಆಚರಣೆಯ 9ನೇ ದಿನವಾದ ಶನಿವಾರದಂದು ಅಲಾಯಿ ದೇವರುಗಳ ಮೆರವಣಿಗೆ ಹಾಗೂ ನೈವೇದ್ಯವನ್ನು ಸಮರ್ಪಿಸಲಾಯಿತು.
ನಗರದ ಹಳೇ ಜೇವರ್ಗಿ ರಸ್ತೆಯಲ್ಲಿರುವ ಹಳೇ ದರ್ಗಾ, ಸ್ಟೇಷನ್ ರಸ್ತೆ, ರೋಜಾ ಬಡಾವಣೆಯ ಹುಸೇನಿ ಆಲಂ ಪ್ರದೇಶ, ಪಾಶ್ಚಾಪುರ ಬಡಾವಣೆಯ ಹಳೇ ದರ್ಗಾ, ಅಂಜುಮನ್ ಏರಿಯಾ ಸೇರಿದಂತೆ ಹಲವೆಡೆ ದೇವರುಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಮುಸ್ಲಿಮೇತರರು ಬೆಳಿಗ್ಗೆಯಿಂದಲೇ ಅಲಾಯಿ ದೇವರ ದರ್ಶನ ಪಡೆದು, ನೈವೇದ್ಯ ನೀಡಿದರು. ಮೊಹರಂ ಕೊನೆಯ ಮೂರು ದಿನಗಳ ಎರಡನೇ ದಿನದಂದು ಮಹಿಳೆಯರು ಮತ್ತು ಪುರುಷರು ಉಪಾಸನೆ (ರೋಜಾ) ಕೈಗೊಂಡು, ಸಂಜೆ ವೇಳೆ ಇಫ್ತಾರಿ ಮುಗಿಸಿದರು. ಇದೇ ಉಪಾಸನೆಯನ್ನು ಹಬ್ಬದ ಕೊನೆಯ ದಿನವಾದ ಭಾನುವಾರವೂ ಆಚರಿಸಲಿದ್ದಾರೆ.
10 ದಿನಗಳ ಮೊಹರಂ ಆಚರಣೆಯು ಭಾನುವಾರ ಸಂಪನ್ನಗೊಳ್ಳಲಿದೆ. ಐತಿಹಾಸಿಕ ಖಾಜಾ ಬಂದಾ ನವಾಜ್ ದರ್ಗಾದಲ್ಲಿ ಕುಟುಂಬದವರು ಹಾಗೂ ಧರ್ಮಗುರುಗಳ ನೇತೃತ್ವದಲ್ಲಿ ಮೊಹರಂ ಸಂಪ್ರದಾಯಗಳು ನೆರವೇರಲಿವೆ. ನಗರದ ಎಲ್ಲ ಆಶ್ರಖಾನಿಗಳಿಂದ ಹೊತ್ತು ತರುವ ಅಲಾಯಿ ದೇವರುಗಳ ಮೆರವಣಿಗೆ ಸಮಾಪನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.