ADVERTISEMENT

ಕಲಬುರಗಿ | ಸಾಮರಸ್ಯದ ಮೊಹರಂ ಆಚರಣೆ

ಅಲಾಯಿ ಪೀರಾ ದೇವರುಗಳ ಮೆರವಣಿಗೆ: ಹಸನ್‌, ಹುಸೇನರ ಬಲಿದಾನ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 5:50 IST
Last Updated 18 ಜುಲೈ 2024, 5:50 IST
ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ ಮೊಹರಂ ಆಚರಣೆ ಅಂಗವಾಗಿ ಹಸೇನ್‌–ಹುಸೇನ್‌ರ ನೆನಪಿಗಾಗಿ ದೇಹ ದಂಡಿಸಿಕೊಂಡ ಮುಸ್ಲಿಂ ಯುವಕರು
ಕಲಬುರಗಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬುಧವಾರ ಮೊಹರಂ ಆಚರಣೆ ಅಂಗವಾಗಿ ಹಸೇನ್‌–ಹುಸೇನ್‌ರ ನೆನಪಿಗಾಗಿ ದೇಹ ದಂಡಿಸಿಕೊಂಡ ಮುಸ್ಲಿಂ ಯುವಕರು   

ಕಲಬುರಗಿ: ಮುಸ್ಲಿಮರ ಪವಿತ್ರ ಹಬ್ಬ ಮೊಹರಂ ಅಂಗವಾಗಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಅಲಾಯಿ ಪೀರಾ ದೇವರುಗಳ ಮೆರವಣಿಗೆ ಬುಧವಾರ ನಡೆಯಿತು.

ಪ್ರವಾದಿ ಮೊಹಮದ್‌ ಅವರ ಮೊಮ್ಮಕ್ಕಳಾದ ಹಸನ್‌ ಹಾಗೂ ಹುಸೇನ್‌ ಅವರ ಬಲಿದಾನದ ಪ್ರತೀಕವಾಗಿ ಆಚರಿಸುವ ಮೊಹರಂ ಉತ್ಸವದಲ್ಲಿ ಹಿಂದೂ, ಮುಸ್ಲಿಮರು ಸೇರಿದಂತೆ ಎಲ್ಲ ಧರ್ಮೀಯರೂ ಪಾಲ್ಗೊಂಡಿದ್ದರು. ಬುಧವಾರ ಬೆಳಿಗ್ಗೆಯಿಂದಲೇ ದರ್ಗಾಗಳಲ್ಲಿ ಅಲಾಯಿ, ಪಂಜಾ, ಡೋಲಿಗಳನ್ನು ಎಬ್ಬಿಸುವ ಆಚರಣೆಗಳು ಜರುಗಿದವು.

ಮುಸ್ಲಿಂ ಧರ್ಮಗುರುಗಳು ಹಬ್ಬದ ಸಂದೇಶ ನೀಡಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಯುವಕರು ಪಂಜಾಗಳ ಮುಂದೆ ಹಲಗೆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ADVERTISEMENT

ರೋಜಾ ಬಡಾವಣೆಯ ಹುಸೇನಿ ಆಲಂ ಏರಿಯಾ, ಪಾಶ್ಚಾಪುರ ಬಡಾವಣೆಯ ಹಳೆ ದರ್ಗಾ, ಅಂಜುಮನ್‌ ಪ್ರದೇಶಗಳಲ್ಲಿ ಕೂಡ ದೇವರುಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಹಳೆ ಜೇವರ್ಗಿ ರಸ್ತೆಯಲ್ಲಿರುವ ಹಳೆ ದರ್ಗಾ, ಎಂಎಸ್‌ಕೆ ಮಿಲ್, ಸ್ಟೇಷನ್‌ ರಸ್ತೆ ಹಾಗೂ ಬ್ರಹ್ಮಪುರ ಪ್ರದೇಶಗಳ ದರ್ಗಾಗಳಿಂದ ಕೂಡ ಅಲಾಯಿಗಳ ಮೆರವಣಿಗೆ ನಡೆಸಲಾಯಿತು.

ಸ್ಟೇಷನ್‌ ರಸ್ತೆಯ ಹುಸೇನ್ ಬಾಷಾ ನಾಲಾ ಐದರ್ ದೇವರ ಪಂಜಾ ಮೆರವಣಿಗೆ ಗಮನ ಸೆಳೆಯಿತು. ಮಾರ್ಗದ ಉದ್ದಕ್ಕೂ ‘ಹಸನ್‌ ಹುಸೇನ್‌ ಕಿ ದೋಸ್ತ್‌ರಾಹೋದ್ದಿನ್‌...’ ಎಂಬ ಘೋಷಣೆ ಮೊಳಗಿತು.

ಹಲವು ಮಹಿಳೆಯರು, ಮಕ್ಕಳು ದೇವರನ್ನು ಪ್ರತಿಷ್ಠಾಪಿಸಿದ ಸ್ಥಳಗಳಿಗೆ ಹೋಗಿ ಎಡೆ ನೀಡಿದರು. ಹಿಂದೂಗಳು ಕೂಡ ಕಾಯಿ, ಕರ್ಪೂರ, ಊದು, ಎಣ್ಣೆದೀಪ ಹಾಗೂ ಮಾದಲಿಯ ನೈವೇದ್ಯ ಅರ್ಪಿಸಿದರು. ನೈವೇದ್ಯ ನೀಡಲು ಬಂದ ಭಕ್ತರಿಗೆ ಉತ್ಸವದ ಮುಖಂಡರು ನವಿಲುಗರಿಯನ್ನು ತಲೆ ಮೇಲೆ ನೇವರಿಸುವ ಮೂಲಕ ಆಶೀರ್ವಾದ ಮಾಡಿದರು.

ದೇಹ ದಂಡನೆ: ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಯುವಕರು ಸೇರಿದ್ದರು. ಖರ್ಬಾಲಾ ಯುದ್ಧದಲ್ಲಿ ಪ್ರಾಣ ಬಲಿದಾನ ಮಾಡಿದ ಮೊಹಮ್ಮದ್‌ ಪೈಗಂಬರರ ಮೊಮ್ಮಕ್ಕಳಾದ ಹಸೇನ್‌–ಹುಸೇನ್‌ ಅವರ ನೆನಪಿಗಾಗಿ ತಮ್ಮ ದೇಹವನ್ನು ದಂಡಿಸಿಕೊಂಡರು. ರಕ್ತವನ್ನು ಅರ್ಪಣೆ ಮಾಡಿ ಅವರ ತ್ಯಾಗವನ್ನು ಸ್ಮರಿಸಿದರು.

ಅಲಾಯಿ ಕುಣಿತ: ಮಂಗಳವಾರ ರಾತ್ರಿ ಜಾಗರಣೆ ವೇಳೆ ಅಲಾಯಿ ಮತ್ತು ರಿವಾಯತ್ ಪದಗಳಲ್ಲಿ ಹಸೇನ್– ಹುಸೇನ್ ಮತ್ತು ಅವರ ಮಕ್ಕಳ ಬಲಿದಾನ ಕಥೆಗಳನ್ನು ಕಲಾವಿದರು ಹಾಡಿದರು. ಕೆಂಡದಿಂದ ಮಾಡಿದ ಕೊಂಡದ ಸುತ್ತ ಹಿಂದೂ–ಮುಸ್ಲಿಮರು ಹಲಗೆಯ ನಾದಕ್ಕೆ ಅಲಾಯಿ ಕುಣಿತ ಹಾಕಿದರು.

ಮೇಳದ ನಾಯಕನ ಮೊಹರಂನ ನೀತಿಯುಕ್ತ ಹಾಡುಗಳಿಗೆ ಮೇಳದವರೂ ಧ್ವನಿಗೂಡಿಸುತ್ತಾ ಜೋಡು ಹಲಗೆ ನಾದದ ಲಯ, ಗತಿಗೆ ತಕ್ಕಂತೆ ಹೆಜ್ಜೆ ಹಾಕಿದರು.

ನಗರದ ಪ್ರಮುಖ ಸ್ಥಳಗಳು, ವೃತ್ತಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಕಲಬುರಗಿಯ ಬ್ರಹ್ಮಪುರದಲ್ಲಿ ಬುಧವಾರ ಮೊಹರಂ ಹಬ್ಬದ ಅಂಗವಾಗಿ ಅಲಾಯಿ ಪೀರಾ ದೇವರುಗಳ ಮೆರವಣಿಗೆ ನಡೆಯಿತು
ಕಲಬುರಗಿಯ ಎಂಎಸ್‌ಕೆ ಮಿಲ್‌ ಪ್ರದೇಶದಲ್ಲಿ ಬುಧವಾರ ಮೊಹರಂ ಹಬ್ಬದ ಅಂಗವಾಗಿ ನಡೆದ ಅಲಾಯಿ ಪೀರಾ ದೇವರುಗಳ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.