ಕಲಬುರಗಿ: ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೊಡಮಾಡುವ ಮತ್ತು ಗುರುತಿಸಲ್ಪಡುವ ‘ಮುಸ್ಕಾನ್’ ಕಾರ್ಯಕ್ರಮದಡಿ ನಮ್ಮ ಜಿಲ್ಲೆ ಶೇ 92ರಷ್ಟು ಅಂಕ ಪಡೆದು ಗುರಿ ಸಾಧಿಸಿ, ರಾಷ್ಟ್ರ ಮಟ್ಟದ ಜಿಲ್ಲೆಯಾಗಿ ಹೊರ ಹೊಮ್ಮಿದೆ. ಇದು ಮತ್ತಷ್ಟು ಹೆಚ್ಚಿನ ಜವಾಬ್ದಾರಿಯಿಂದ ಸೇವೆ ಮಾಡಲು ಉತ್ತೇಜನ ನೀಡುತ್ತದೆ’ ಎಂದು ಜಿಮ್ಸ್ ನಿರ್ದೇಶಕ ಡಾ. ಉಮೇಶ್ ರೆಡ್ಡಿ ಹೇಳಿದರು.
ನಗರದ ಜಿಮ್ಸ್ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಕೇಂದ್ರ ಆರೋಗ್ಯ ಸಚಿವಾಲಯವು ಗುಣಮಟ್ಟದ ವಿಭಾಗ ಎಂದು ಪ್ರಮಾಣೀಕರಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಎಸ್‌ಎನ್‌ಸಿಯು (ವಿಶೇಷ ನವಜಾತ ಚಿಕಿತ್ಸಾ ಘಟಕ) ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗ್ರೂಪ್ ಡಿ, ವಾಚ್‌ಮನ್, ಮುಖ್ಯಸ್ಥರು, ವೈದ್ಯರು ಹಾಗೂ ವೈದ್ಯಕೇತರ ಸಿಬ್ಬಂದಿ ವರ್ಗದವರ ಶ್ರಮದಿಂದಾಗಿ ಈ ಪ್ರಶಸ್ತಿ ಲಭಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶಸ್ತ್ರಜ್ಞ ಮತ್ತು ಜಿಮ್ಸ್ ಅಧೀಕ್ಷಕ ಡಾ. ಅಂಬಾರಾಯ ರುದ್ರವಾಡಿ ಮಾತನಾಡಿ, ‘ಎಲ್ಲರ ಪರಿಶ್ರಮದಿಂದ ನಮ್ಮ ಸಂಸ್ಥೆಗೆ ಮುಸ್ಕಾನ್ ಎಂಬ ದೊಡ್ಡ ಗರಿ ಬಂದಿದೆ. ಇದಕ್ಕೂ ಮೊದಲು ಲಕ್ಷ್ಯ ಕಾರ್ಯಕ್ರಮದ ಅಡಿ ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ನಾವು ಮುಸ್ಕಾನ್ ಸಲುವಾಗಿ ಹೋಗಿಲ್ಲ. ಪರಿಶ್ರಮದ ಫಲವಾಗಿ ಮುಸ್ಕಾನ್ ಗರಿ ನಮ್ಮನ್ನು ಹುಡುಕಿಕೊಂಡು ಬಂದಿದೆ’ ಎಂದರು.
ಜಿಲ್ಲಾ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಸಂದೀಪ್ ಹರಸಣಗಿ, ನೋಡಲ್ ಅಧಿಕಾರಿ ಡಾ. ರೇವಣಸಿದ್ದಪ್ಪ ಬೋಸ್ಗಿ ಸಂತಸ ಹಂಚಿಕೊಂಡರು.
ಎನ್‌ಆರ್‌ಸಿ ಸಹಾಯಕ ಪ್ರಾಧ್ಯಾಪಕರಾದ ಡಾ. ಗೌಡಪ್ಪ ಪಾಟೀಲ, ಡಾ. ಸರಾಯು, ಡಾ. ಸಚಿನ್ ಹತ್ತಿ, ಡಾ. ರಾಹುಲ್, ಡಾ. ನವೀನ, ಡಾ. ಜ್ಯೋತಿ ಸರ್ವಿ, ಡಾ. ಅಲ್ಲಮಪ್ರಭು ದೇಶಮುಖ, ಡಾ. ಆಕಾಶ ಜವಳಗಿ, ನರ್ಸಿಂಗ್ ಅಧಿಕಾರಿ ಫಕೀರಪ್ಪ, ಎಸ್‌ಎನ್‌ಸಿಯು ಘಟಕದ ಮಂಗಳಾ, ಸಾಲೋಮಿ, ಪಿಜಿ ವಿದ್ಯಾರ್ಥಿಗಳಾದ ಡಾ. ವಿಜಯಲಕ್ಷ್ಮಿ, ಡಾ. ನೀಲಕಂಠ, ಡಾ. ಪ್ರಿಯಾ, ಡಾ. ಲಖನ್, ಡಾ. ಸೀಮಾ, ಮಂಜುನಾಥ ಕಂಬಾಳಿಮಠ ಸೇರಿದಂತೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಡಾ. ಐಶ್ವರ್ಯ ಸ್ವಾಗತಿಸಿದರು. ಡಾ. ಸೃಷ್ಟಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.