ADVERTISEMENT

ಕಲಬುರಗಿ | ನಾಗಮೋಹನ್‌ ದಾಸ ವರದಿಯಲ್ಲಿ ಲೋಪ: ಸಚಿನ್‌ ಚವಾಣ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 7:03 IST
Last Updated 9 ಆಗಸ್ಟ್ 2025, 7:03 IST
ಸಚಿನ್ ಚವಾಣ್
ಸಚಿನ್ ಚವಾಣ್   

ಕಲಬುರಗಿ: ‘ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ದಾಸ್‌ ನೇತೃತ್ವದ ಏಕಸದಸ್ಯ ಆಯೋಗ ಸಲ್ಲಿಸಿರುವ ವರದಿಯಲ್ಲಿ ಅನೇಕ ತಪ್ಪುಗಳಿವೆ’ ಎಂದು ಬಂಜಾರ, ಭೋವಿ, ಕೊರಚ ಮತ್ತು ಕೊರಮ ಸಮಾಜಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ  ಸಚಿನ್‌ ಚವಾಣ್‌ ದೂರಿದರು.

‘ಸಮಿತಿಯು ಈ ವರದಿಯನ್ನು ತರಾತುರಿಯಲ್ಲಿ ಸಿದ್ಧಪಡಿಸಿದೆ. ರಾಜ್ಯದಲ್ಲಿ 3,900ರಷ್ಟು ತಾಂಡಾಗಳಿದ್ದು, ಅಲ್ಲಿ ಸರಿಯಾದ ಸಮೀಕ್ಷೆಯೇ ನಡೆದಿಲ್ಲ’ ಎಂದು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ವರದಿಯಲ್ಲಿನ ಲೋಪಗಳನ್ನು ಸರಿಪಡಿಸಲು ಅಂಕಿ–ಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಶೇ 100ರಷ್ಟು ಸಮೀಕ್ಷೆ ನಡೆಸಬೇಕು. ಈ ವರದಿ ಜಾರಿಗೊಳಿಸುವುದಾದರೆ, ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಕ್ಕೆ ಶೇ 7ರಷ್ಟು ಮೀಸಲಾತಿ ನೀಡಬೇಕು. ವರದಿಯಲ್ಲಿ ಪ್ರಸ್ತಾಪಿಸಿರುವ ಸ್ಪರ್ಶ ಜಾತಿಗಳು ಎಂಬ ಪ್ರಸ್ತಾಪವಿದ್ದು, ಅದೊಂದು ಅಸಾಂವಿಧಾನಿಕ ಪದವಾಗಿದೆ. ಅದನ್ನು ಕೂಡಲೇ ವರದಿಯಿಂದ ತೆಗೆದು ಹಾಕಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಶೇ 100ರಷ್ಟು ಸಮೀಕ್ಷೆಯೇ ಮಾಡದೆ ಎಡಗೈ ಸಮುದಾಯಗಳಿಗೆ ಶೇ 6.5 ಹಾಗೂ ಬಲಗೈ ಸಮುದಾಯಗಳಿಗೆ ಶೇ 5.5ರಷ್ಟು ಮೀಸಲು ನೀಡುವ ಸಿದ್ಧತೆ ನಡೆದಿದೆ. ಬಂಜಾರ, ಭೋವಿ ಸಮುದಾಯಗಳಿಗೆ ಶೇ 4 ಹಾಗೂ ಇತರರಿಗೆ ಶೇ 1ರಷ್ಟು ಒಳಮೀಸಲಾಗಿ ವರ್ಗೀಕರಿಸಿ ಜಾರಿಗೊಳಿಸಿದರೆ, ‘ಕಾಂಗ್ರೆಸ್‌ ಹಟಾವೋ’ ಘೋಷಣೆಯೊಂದಿಗೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪಾಠ ಕಲಿಸಲಾಗುವುದು’ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶಾಮರಾವ ಪವಾರ, ವಿನೋದ ಚವಾಣ, ಖೇಮಸಿಂಗ್‌ ರಾಠೋಡ, ಚಂದು ಜಾಧವ ಸೇರಿದಂತೆ ಹಲವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.