ADVERTISEMENT

ಅಂತರ ಕಾಯ್ದುಕೊಂಡು ಹಾಲೆರದ ಮಹಿಳೆಯರು, ಕೆಲವೆಡೆ ಮೌಢ್ಯದ ವಿರುದ್ಧ ಜಾಗೃತಿ

ನಾಗಪಂಚಮಿ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 9:06 IST
Last Updated 25 ಜುಲೈ 2020, 9:06 IST
ಕಲಬುರ್ಗಿಯ ಶಕ್ತಿನಗರ ಬಡಾವಣೆಯಲ್ಲಿ ಅಂತರ ಕಾಯ್ದುಕೊಂಡು ನಾಗರ ಪೂಜೆ ಸಲ್ಲಿಸಲಾಯಿತು
ಕಲಬುರ್ಗಿಯ ಶಕ್ತಿನಗರ ಬಡಾವಣೆಯಲ್ಲಿ ಅಂತರ ಕಾಯ್ದುಕೊಂಡು ನಾಗರ ಪೂಜೆ ಸಲ್ಲಿಸಲಾಯಿತು   

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಶನಿವಾರ ನಾಗರ ಪಂಚಮಿ ಆಚರಿಸಲಾಯಿತು. ಆದರೆ, ನಗರದಲ್ಲಿ ಪ್ರತಿ ವರ್ಷದಂತೆ ಈ ಬಾರಿ ನಾಗರಕಟ್ಟೆ ಹಾಗೂ ಹುತ್ತಗಳ ಬಳಿ ಜನಜಂಗುಳಿ ಕಾಣಿಸಲಿಲ್ಲ.

ಇಲ್ಲಿನ ಶಕ್ತಿನಗರದಲ್ಲಿ ಅರಳಿ ಮರದ ಕೆಳಗೆ ಇರುವ ನಾಗರ ದೇವಸ್ಥಾನದಲ್ಲಿ ಅಂತರ ಕಾಯ್ದುಕೊಂಡು ಹಾಲೆರೆಯಲಾಯಿತು. ಹಲವು ಮಹಿಳೆಯರು ನಸಿಕಿನ 5ರಿಂದಲೇ ದೇವಸ್ಥಾನದ ಮುಂದೆ ಸಾಲುಗಟ್ಟಿ ನಿಂತರು. ಚಿಕ್ಕ ಗುಡಿಯ ಒಳಗೆ ಇರುವ ಶಿವಲಿಂಗ ಹಾಗೂ ಆವರಣದಲ್ಲಿರುವ ನಾಗರ ಮೂರ್ತಿಗೆ ಹಾಲೆರೆದು ಭಕ್ತಿ ಸಮರ್ಪಿಸಿದರು.

ಹಳೆ ಎಸ್‌‍ಪಿ ಕಚೇರಿಯ ಹಿಂಬದಿಯಲ್ಲಿರುವ ದೇವಸ್ಥಾನದಲ್ಲೂ ನಾಗರ ಮೂರ್ತಿಗೆ ಪೂಜೆ ಸಲ್ಲಿಸಿ ಹಾಲೆರದರು. ಪೂಜೆ ಮಾಡಿದ ನಂತರ ಯುವತಿಯರು ಮೂರ್ತಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ADVERTISEMENT

ಹುತ್ತಗಳ ಸುತ್ತ ಪೂಜೆ: ಎಂಎಸ್‌ಕೆ ಮಿಲ್ ರಸ್ತೆಯಲ್ಲಿರುವ ಐಟಿಐ ಕಾಲೇಜು ಹಿಂಭಾಗ, ಶಾಂತಿನಗರ ಬಡಾವಣೆ, ಗಂಗಾನಗರ, ಶಕ್ತಿನಗರ, ಬ್ರಹ್ಮಪೂರ, ಲಾಳಗೇರಿ ಮುಂತಾದೆಡೆ ಇರುವ ನಾಗರ ಹಾವಿನ ಹುತ್ತಗಳಿಗೂ ಜನ ಪೂಜೆ ಸಲ್ಲಿಸಿದರು. ‌

ಬೆಳಿಗ್ಗೆಯೇ ಹುತ್ತ ಹುಡುಕುತ್ತ ಕುಟುಂಬ ಸಮೇತರಾಗಿ ಬಂದ ಹಲವರು, ಅರಿಸಿನ, ಕುಂಕುಮ ಹಚ್ಚಿ, ಹೂಮಾಲೆ, ಅಕ್ಷತೆ ಹಾಕಿ, ಊದುಬತ್ತಿ ಬೆಳಗಿ ಪೂಜೆ ಸಲ್ಲಿಸಿದರು.

ಉಳಿದಂತೆ, ವೀರೇಂದ್ರ ಪಾಟೀಲ ಬಡಾವಣೆ, ಹೀರಾಪುರ, ನೃಪತುಂಗ ನಗರದಲ್ಲಿ ಇರುವ ನಾಗರಕಟ್ಟೆಗಳಲ್ಲಿ ಮಧ್ಯಾಹ್ನದವರೆಗೂ ಜನ ಆಗಾಗ ಬಂದು ಪೂಜೆ ಸಲ್ಲಿಸಿದ್ದು ಕಂಡುಬಂತು.‌

‘ಬಸವ ಪಂಚಮಿ’ ಆಚರಣೆ
ನಗರದ ಹೀರಾಪುರ ಬಡಾವಣೆಯಲ್ಲಿ ಪ್ರಗತಿ ಅಭಿವೃದ್ಧಿ ಸಂಸ್ಥೆ ಹಾಗೂ ನಾಗರಿಕರು ಅಪೌಷ್ಟಿಕ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ‘ಬಸವ ಪಂಚಮಿ’ ಆಚರಿಸಿದರು.

ಬಡಾವಣೆಯ ಹಲವು ಪುರುಷರು ಹಾಗೂ ಮಹಿಳೆಯರು ಸೇರಿಕೊಂಡು ಮಕ್ಕಳನ್ನೂ ಕರೆತಂದು ಬಿಸಿ ಮಾಡಿದ ಹಾಲನ್ನು ಅವರಿಗೆ ಕುಡಿಯಲು ನೀಡಿದರು.

ಇನ್ನೊಂದೆಡೆ, ಶಹಾಬಾದ್‌ ರಸ್ತೆಯಲ್ಲಿರುವ ಅಲೆಮಾರಿ ಸಮುದಾಯದ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ನಾಗಪಂಚಮಿ ಆಚರಿಸಲಾಯಿತು.

ಆದರೆ, ಈ ಸಮಾರಂಭಗಳಲ್ಲಿ ಅತಿಥಿಗಳಾಗಿ ಪಾಲ್ಗೊಂಡವರು, ಜನ ಹಾಗೂ ಮಕ್ಕಳ ಮಧ್ಯೆ ಕನಿಷ್ಠ ಅಂತರ ಕೂಡ ಕಾಯ್ದುಕೊಳ್ಳಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.