
ಕಲಬುರಗಿ: 'ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಪರಿಷ್ಕರಣೆ ವಿಚಾರವಾಗಿ ಸಂಸದ ತೇಜಸ್ವಿ ಸೂರ್ಯ ಸುಮ್ಮನೆ ನಮ್ಮ ಮೇಲೆ ಗೂಬೆ ಕೂರಿಸೋಕೆ ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಏನಾದರೂ ಆಗುತ್ತೆ ಅಂತ ಕಾಯುತ್ತಾ ಕುಳಿತಿರುತ್ತಾರೆ. ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರದಲ್ಲೂ ನಮ್ಮ ಮೇಲೆ ಗೂಬೆ ಕೂರಿಸೋಕೆ ನೋಡಿದರು. ಆದರೆ, ಇವಾಗ ನಿಜಾಂಶ ಬಯಲಾಗಿದೆ ಎಂದು ಸಚಿವ ದಿನೇಶ ಗುಂಡೂರಾವ್ ಟೀಕಿಸಿದರು.
ನಗರದ ಐವಾನ್ ಎ ಶಾಹಿ ಅತಿಥಿಗೃಹದಲ್ಲಿ ಭಾನುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೆಟ್ರೊ ಪ್ರಯಾಣ ದರ ಪರಿಷ್ಕರಣೆ ಮಾಡೋದು ಕೇಂದ್ರ ಸರ್ಕಾರ. ನಾವೇನೂ ಅವರ ಮೇಲೆ ದರ ಹೇರುತ್ತಿಲ್ಲ. ಬಿಜೆಪಿ ಸಂಸದರೇ ಕೇಂದ್ರ ಸರ್ಕಾರದ ಬಳಿ ಪ್ರಯತ್ನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಕೂಡಾ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ದರ ಪರಿಷ್ಕರಣ ಕಮಿಟಿ ಮಾಡಿ ಎಂದಿದ್ದಾರೆ ಎಂದರು.
ಜಿಬಿಎ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆಗೆ ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ದೊಡ್ಡ ದೊಡ್ಡ ರಾಷ್ಟ್ರಗಳೇ ಇವಿಎಂ ಬಳಸುತ್ತಿಲ್ಲ. ಪಾರದರ್ಶಕವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಬ್ಯಾಲೆಟ್ ಬಳಕೆಗೆ ನಿರ್ಧಾರ ಮಾಡಿದ್ದೇವೆ. ಇವಿಎಂ ಬಗ್ಗೆ ಸಾಕಷ್ಟು ಸಂಶಯ ಬಂದಿದ್ದರೂ ಕೇಂದ್ರ ಚುನಾವಣಾ ಆಯೋಗ ಗೊಂದಲ ಪರಿಹರಿಸುವ ಕೆಲಸ ಮಾಡಿಲ್ಲ. ಹೀಗಾಗಿ ಬ್ಯಾಲೆಟ್ ಪೇಪರ್ ಬಳಕೆಗೆ ನಿರ್ಧರಿಸಿದ್ದೇವೆ' ಎಂದರು.
'ಶಾಸಕ ಯತೀಂದ್ರ ಅವರು ಏನು ಹೇಳಿದ್ದಾರೆ ಗೊತ್ತಿಲ್ಲ. ಆದರೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಸಿಎಂ,ಡಿಸಿಎಂ ಅವರೇ ಹೇಳಿದ್ದಾರೆ. ಯಾರ್ಯಾರಿಗೆ ಏನೇನು ಯೋಗ ಇದೆಯೋ ಯಾರಿಗೆ ಗೊತ್ತು? ಅವರ(ಡಿಸಿಎಂ) ಯೋಗದ ಬಗ್ಗೆ ಮಾತನಾಡೋಕೆ ನಾನೇನು ಜ್ಯೋತಿಷಿ ಅಲ್ಲ' ಎಂದು ಸಿಎಂ ಆಗಿ ಸಿದ್ದರಾಮಯ್ಯ ಐದು ವರ್ಷ ಮುಂದುವರಿಯುವ ಕುರಿತ ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.