ADVERTISEMENT

ನಂದಿನಿ ಸ್ವೀಟ್ಸ್‌ ಮಾರಾಟ ‘ದುಪ್ಪಟ್ಟು’

ಹಬ್ಬದ ಸಡಗರ: ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟದ ಸಾಧನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 8:05 IST
Last Updated 24 ಅಕ್ಟೋಬರ್ 2025, 8:05 IST
...
...   

ಕಲಬುರಗಿ: ಸಾಲು–ಸಾಲು ಹಬ್ಬಗಳು ಕಲಬುರಗಿ–ಬೀದರ್–ಯಾದಗಿರಿ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ‘ಸಂಭ್ರಮ’ ಹೆಚ್ಚಿಸಿವೆ.

ನವರಾತ್ರಿ–ವಿಜಯದಶಮಿ ಹಾಗೂ ದೀಪಾವಳಿ ಹಬ್ಬದಲ್ಲಿ ಈ ಒಕ್ಕೂಟವು ಬಗೆಬಗೆಯ ನಂದಿನಿ ಸಿಹಿತಿನಿಸುಗಳ ಮಾರಾಟದಲ್ಲಿ ಗುರಿ ಮೀರಿ ಸಾಧನೆ ತೋರಿದ್ದು, 25 ಟನ್‌ಗಳಷ್ಟು ನಂದಿನಿ ಸ್ವೀಟ್ಸ್‌ಗಳನ್ನು ಮಾರಾಟ ನಡೆಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ನಂದಿನಿ ಸಿಹಿ ತಿನಿಸುಗಳಿಗೆ ಎರಡು ಪಟ್ಟು ಬೇಡಿಕೆ ಹೆಚ್ಚಿದೆ.

2024ರಲ್ಲಿ ಈ ಒಕ್ಕೂಟವು 13 ಟನ್‌ಗಳಷ್ಟು ನಂದಿನಿ ಸ್ವೀಟ್ಸ್‌ಗಳನ್ನು ಮಾರಾಟ ನಡೆಸಿತ್ತು. 2023ರಲ್ಲಿ ಒಕ್ಕೂಟವು ಎರಡು ಟನ್‌ಗಳಷ್ಟು ಸಿಹಿ ತಿನಿಸುಗಳ ಮಾರಾಟದ ಗುರಿಯನ್ನು ಹಾಕಿಕೊಂಡು, ಮೂರು ಟನ್‌ಗಳಿಗೂ ಅಧಿಕ ವಹಿವಾಟು ನಡೆಸಿತ್ತು.

ADVERTISEMENT

‘ದಸರಾ ಸಮಯದಲ್ಲಿ 10 ಟನ್‌ ನಂದಿನಿ ಸ್ವೀಟ್‌ಗಳ ಮಾರಾಟ ಗುರಿ ಹೊಂದಲಾಗಿತ್ತು. ಗುರಿ ಮೀರಿ ಒಟ್ಟು 11 ಟನ್‌ ಸಿಹಿ ತಿನಿಸುಗಳ ಮಾರಾಟವಾಗಿತ್ತು. ದೀಪಾವಳಿಗೂ 10 ಟನ್‌ ಗುರಿ ಹೊಂದಲಾಗಿತ್ತು. ಅ.23 ರವರೆಗೆ 14 ಟನ್‌ಗಳಷ್ಟು ನಂದಿನಿ ಸ್ವೀಟ್ಸ್‌ ಮಾರಾಟವಾಗಿದೆ’ ಎನ್ನುತ್ತಾರೆ ಒಕ್ಕೂಟ ಅಧಿಕಾರಿಗಳು.

ಫೇಡಾಗೆ ಅಗ್ರಸ್ಥಾನ: ದಸರಾ–ದೀಪಾವಳಿ ಹಬ್ಬಗಳ ಅವಧಿಯಲ್ಲಿ ಒಕ್ಕೂಟದಿಂದ ನಂದಿನಿ ಫೇಡಾ, ಮೈಸೂರು ಪಾಕ್‌, ವಿವಿಧ ಬಗೆಯ ಲಾಡು, ವಿವಿಧ ಬಗೆಯ ಬರ್ಫಿ, ಖೋವಾ, ರಸಗುಲ್ಲಾ, ಜಾಮೂನು ಸೇರಿದಂತೆ ಹಲವು ಬಗೆಯ ಸಿಹಿ ತಿನಿಸುಗಳ ಮಾರಾಟ ಜೋರಾಗಿತ್ತು. ಅದರಲ್ಲಿ ಈ ಸಲವೂ ‘ನಂದಿನಿ ಫೇಡಾ’ ಜನರ ನೆಚ್ಚಿನ ಸಿಹಿಯಾಗಿ ಬೇಡಿಕೆ ಪಡೆದಿದ್ದು, ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. ದಸರಾ ಸಮಯದಲ್ಲಿ 3.5 ಟನ್‌ ಹಾಗೂ ದೀಪಾವಳಿ ಹಬ್ಬದಲ್ಲಿ 5.5 ಟನ್‌ಗಳಷ್ಟು ಸೇರಿ ಒಟ್ಟು 9 ಟನ್‌ಗಳಷ್ಟು ನಂದಿನಿ ಫೇಡಾ ಮಾರಾಟವಾಗಿದೆ. ಇನ್ನುಳಿದಂತೆ ಮೈಸೂರು ಪಾಕ್‌, ವಿವಿಧ ಬಗೆಯ ಬರ್ಫಿ ಸಿಹಿ ತಿನಿಸುಗಳು ಮಾರಾಟದಲ್ಲಿ ನಂತರದ ಸ್ಥಾನದಲ್ಲಿವೆ.

ಫಲಿಸಿದ ತಂತ್ರ: ‘ಸಹಜವಾಗಿಯೇ ಗುಣಮಟ್ಟದಿಂದಾಗಿ ನಂದಿನಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯಿದೆ. ಆದರೆ, ಖಾಸಗಿಯವರ ಪೈಪೋಟಿಯೂ ಸಾಕಷ್ಟಿದೆ. ಹೀಗಾಗಿ ನಮ್ಮ ಬಲವನ್ನು ಅರಿತು ಹಬ್ಬಗಳಿಗೂ ಮೊದಲೇ ತಂಡಗಳನ್ನು ನಿರ್ಮಿಸಿ, ವ್ಯಾಪಕ ಪ್ರಚಾರ ಕೈಗೊಳ್ಳಲಾಗಿತ್ತು. ವಿಶೇಷವಾಗಿ ಕಲಬುರಗಿ ನಗರದಲ್ಲಿ 10ಕ್ಕೂ ಅಧಿಕ ಕಾರ್ಮಿಕರು ಇರುವ ಸಂಘ–ಸಂಸ್ಥೆಗಳು, ಅಂಗಡಿಗಳನ್ನು ಸಂಪರ್ಕಿಸಿ ನಂದಿನಿ ಸಿಹಿ ಉತ್ಪನ್ನಗಳ ಬಗೆಗೆ ಮನವರಿಕೆ ಮಾಡಿಸಲಾಯಿತು. ಇದರಿಂದ ನಿರೀಕ್ಷೆಯಂತೆ ಗುರಿ ಮೀರಿ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಪಾಟೀಲ ಹೇಳಿದರು.

ತುಪ್ಪ ಮಾರಾಟದಲ್ಲೂ ಮೇಲುಗೈ

ಕಲಬುರಗಿ–ಬೀದರ್‌–ಯಾದಗಿರಿ ಒಕ್ಕೂಟವು ನಂದಿನಿ ತುಪ್ಪ ಮಾರಾಟದಲ್ಲೂ ಮುಂಚೂಣಿಯಲ್ಲಿದೆ. ‘ಸೆಪ್ಟೆಂಬರ್‌ನಲ್ಲಿ 11 ಟನ್‌ಗಳಷ್ಟು ನಂದಿನಿ ತುಪ್ಪ ಮಾರಾಟವಾಗಿದೆ. ಅಕ್ಟೋಬರ್‌ನಲ್ಲಿ 12.3 ಟನ್‌ಗಳಷ್ಟು ನಂದಿನಿ ತುಪ್ಪ ಮಾರಾಟವಾಗಿದೆ’ ಎಂದು ಹಾಲು ಒಕ್ಕೂಟದ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.