ADVERTISEMENT

ಬಿಸಿಲಲ್ಲೇ ನರೇಗಾ ಕಾಮಗಾರಿ: ಕೆಲಸದ ಸ್ಥಳದಲ್ಲಿಲ್ಲ ಟೆಂಟ್, ಕುಡಿಯುವ ನೀರು

ಜಿಲ್ಲೆಯ ಹಲವೆಡೆ 44 ಡಿಗ್ರಿ ಬಿಸಿಲಲ್ಲೇ ನರೇಗಾ ಕಾಮಗಾರಿ! ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೂಚನೆಗೂ ಕಿಮ್ಮತ್ತಿಲ್ಲ

ಮನೋಜ ಕುಮಾರ್ ಗುದ್ದಿ
Published 5 ಏಪ್ರಿಲ್ 2024, 6:18 IST
Last Updated 5 ಏಪ್ರಿಲ್ 2024, 6:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಜಿಲ್ಲೆಯಾದ್ಯಂತ ದಿನೇ ದಿನೇ ಉಷ್ಣಾಂಶ ಹೆಚ್ಚಾಗುತ್ತಿದ್ದು, ಸರಾಸರಿ 42ರಿಂದ 44 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲೇ ನರೇಗಾ ಯೋಜನೆಯಡಿ ಕಾರ್ಮಿಕರು ಕೆಲಸ ಮಾಡಬೇಕಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ನೆರಳಿಗಾಗಿ ಟೆಂಟ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದರೂ ಬಹುತೇಕ ಕಡೆ ಅದು ಪಾಲನೆಯಾಗುತ್ತಿಲ್ಲ.

ಜಿಲ್ಲೆಯಲ್ಲಿ ಬಿಸಿಲಿನ ಪ್ರಮಾಣ ಜಾಸ್ತಿಯಾಗುತ್ತಿದ್ದಂತೆಯೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಅಡಿ ನಡೆಯುತ್ತಿರುವ ಸ್ಥಳಗಳಲ್ಲಿ ನೀರು, ನೆರಳಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಭಂವರ್ ಸಿಂಗ್ ಮೀನಾ ಅವರು, ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಕೆಲಸದ ಸ್ಥಳದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ತಾಕೀತು ಮಾಡಿದ್ದಾರೆ.

ADVERTISEMENT

ಇಷ್ಟಾಗಿಯೂ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ನರೇಗಾ ಕಾಮಗಾರಿ ವೀಕ್ಷಣೆಗಾಗಿ ಜಿ.ಪಂ. ಸಿಇಒ, ತಾ.ಪಂ. ಇಒ, ನರೇಗಾ ಸಹಾಯಕ ನಿರ್ದೇಶಕರು ಬರುತ್ತಾರೆ ಎಂಬ ಮಾಹಿತಿ ಸಿಕ್ಕರಷ್ಟೇ ಕೆಲ ಪಿಡಿಒಗಳು ತರಾತುರಿಯಲ್ಲಿ ಟೆಂಟ್ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಾರೆ ಎನ್ನಲಾಗುತ್ತಿದೆ.

ಆಳಂದ, ಅಫಜಲಪುರ, ಜೇವರ್ಗಿ, ಯಡ್ರಾಮಿ, ಚಿತ್ತಾಪುರ, ವಾಡಿ, ಸೇಡಂ, ಚಿಂಚೋಳಿ, ಕಾಳಗಿ, ಕಮಲಾಪುರ ಹಾಗೂ ಕಲಬುರಗಿ ತಾಲ್ಲೂಕಿನ ಹಲವೆಡೆ ಏಪ್ರಿಲ್ 1ರಿಂದ ನರೇಗಾ ಕಾಮಗಾರಿಗಳು ಪುನರಾರಂಭಗೊಂಡಿವೆ. ಕೆಲಸಕ್ಕೆ ಬೇಡಿಕೆಯೂ ಹೆಚ್ಚಿದೆ. ಆದರೆ, ನೀರು, ನೆರಳಿನ ವ್ಯವಸ್ಥೆ ಇಲ್ಲ ಎಂದು ಹಲವು ಕೂಲಿಕಾರರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಶಹಾಬಾದ್‌ ತಾಲ್ಲೂಕಿನಲ್ಲಿ ಹಲವು ಕಡೆ ನರೇಗಾ ಕಾಮಗಾರಿಗಳು ನಡೆಯುವ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎಲ್ಲಿಯೂ ಟೆಂಟ್ ಹಾಕಿದ್ದು ಕಂಡು ಬಂದಿಲ್ಲ. ಬಿಸಿಲಿನ ತಾಪವನ್ನು ಸಹಿಸಿಕೊಂಡೇ ಬಡ ಕೂಲಿಕಾರ್ಮಿಕರು ಕೆಲಸ ಮಾಡಬೇಕಿದೆ’ ಎನ್ನುತ್ತಾರೆ ಎಐಡಿವೈಓ ಯುವಜನ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ್ ಎಚ್‌.ಎಸ್. 

‘ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಇದ್ದಾಗ ಟೆಂಟ್ ಹಾಕಿಸಬೇಕು ಎಂಬುದು ನಿಯಮ. ಇದಕ್ಕಾಗಿ ನಾನೇ ಖುದ್ದಾಗಿ ಟೆಂಟ್ ಹಾಕಿಸಿದ್ದೆ. ಆದರೆ, ಕೈಯಿಂದ ₹ 80 ಸಾವಿರ ಬಾಡಿಗೆ ಕೊಡಬೇಕಾಯಿತೇ ಹೊರತು ಗ್ರಾಮ ಪಂಚಾಯಿತಿಯಿಂದ ಹಣ ಬರಲಿಲ್ಲ. ಈಗ ನಾವೇ ಒಂದಷ್ಟು ಟೆಂಟ್‌ಗಳನ್ನು ಖರೀದಿಸಿದ್ದೇವೆ’ ಎನ್ನುತ್ತಾರೆ ಕಲಬುರಗಿ ತಾಲ್ಲೂಕಿನ ಹೊನ್ನಕಿರಣಗಿಯಲ್ಲಿ ಬಿಎಫ್‌ಟಿ ಆಗಿರುವ ಸದಾಶಿವ ಹೈದ್ರಾ.

ಇತ್ತೀಚೆಗೆ ಕೇಂದ್ರ ಸರ್ಕಾರವು ನರೇಗಾ ಕೂಲಿ ಹಣವನ್ನು ಶೇ 10ರಷ್ಟು ಹೆಚ್ಚಿಸಿದ್ದು, ಪ್ರತಿ ದಿನ ₹ 349 ಕೂಲಿ ಸಿಗುತ್ತದೆ. ಹೀಗಾಗಿ, ಬರಗಾಲದಿಂದ ತತ್ತರಿಸಿರುವ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ, ಸರಿಯಾದ ನೆರಳಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ನೆತ್ತಿ ಸುಡುವ ಬಿಸಿಲಿನಲ್ಲೇ ಕೆಲಸ ಮಾಡುವುದು ಅನಿವಾರ್ಯವಾಗಿದೆ.

‘ಗ್ರಾ.ಪಂ. ವ್ಯಾಪ್ತಿಯ ಐದಾರು ಕಡೆ ಏಕಕಾಲಕ್ಕೆ ಕೆಲಸ ನಡೆದರೆ ಟೆಂಟ್ ವ್ಯವಸ್ಥೆ ಮಾಡುವುದು ಅಸಾಧ್ಯ. ಅಲ್ಲದೇ, ಅದಕ್ಕೆ ಪ್ರತ್ಯೇಕವಾದ ಹಣಕಾಸಿನ ಲಭ್ಯತೆಯೂ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಿಡಿಒ ಅಳಲು ತೋಡಿಕೊಳ್ಳುತ್ತಾರೆ.

ಭಂವರ್ ಸಿಂಗ್ ಮೀನಾ

‘ನೀರು ನೆರಳಿನ ವ್ಯವಸ್ಥೆ ಮಾಡಲೇಬೇಕು’

ಜಿಲ್ಲೆಯಾದ್ಯಂತ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನರೇಗಾ ಕಾಮಗಾರಿ ನಡೆಯುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ನೆರಳಿಗಾಗಿ ಟೆಂಟ್ ವ್ಯವಸ್ಥೆ ಮಾಡುವುದು ಕಡ್ಡಾಯ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ. ‘ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆ ಅಡ್ಮಿನ್ ಫಂಡ್‌ನಲ್ಲಿ ಅರ್ಜಿ ಸಲ್ಲಿಸಿದರೆ ನರೇಗಾ ಕೆಲಸದ ಸ್ಥಳದಲ್ಲಿ ಅಳವಡಿಸಲು ಟೆಂಟ್‌ ಬಾಡಿಗೆ ಪಡೆಯಲು ಅನುಮೋದನೆ ನೀಡುತ್ತೇವೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಟ್ಟುಕೊಳ್ಳಬಾರದು’ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಸೂರ್ಯನ ಪ್ರಖರತೆ ಜಾಸ್ತಿಯಾಗುತ್ತಿರುವುದರಿಂದ ಕೆಲಸದ ಅವಧಿಯನ್ನು ತಗ್ಗಿಸಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ’ ಎಂದೂ ಸಿಇಒ ಮೀನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.